ವಂಚನೆ (ಪ್ರಾತಿನಿಧಿಕ ಚಿತ್ರ)
ಕಲಬುರಗಿ: ಆನ್‌ಲೈನ್‌ನಲ್ಲಿ ಕಂಪನಿಗಳಿಗೆ ಫೈವ್ ಸ್ಟಾರ್ ರೇಟಿಂಗ್ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಹೆಚ್ಚಿನ ಹಣ ಗಳಿಸಬಹುದು ಎಂದು ಬ್ಯಾಂಕ್ ಕ್ಯಾಷಿಯರ್‌ಗೆ ನಂಬಿಸಿದ ವಂಚಕರು, ಆತನಿಂದ ₹ 14.77 ಲಕ್ಷ ಪಡೆದು ಲಪಟಾಯಿಸಿದ್ದಾರೆ.
ಸೇಡಂನ ಆಶ್ರಯ ಕಾಲೊನಿಯ ನಿವಾಸಿ, ಖಾಸಗಿ ಬ್ಯಾಂಕ್‌ನ ಕ್ಯಾಷಿಯರ್ ಕಾಶಿನಾಥ ಅಣ್ಣರಾವ ವಂಚನೆಗೆ ಒಳಗಾದವರು. ವಂಚಕರ ವಿರುದ್ಧ ಕಲಬುರಗಿ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಶಿನಾಥ ಅವರ ವಾಟ್ಸ್‌ಆ್ಯಪ್‌ಗೆ ಟಾಸ್ಕ್ ಬೇಸ್ಡ್ ಕೆಲಸದ ಸಂದೇಶವೊಂದು ಬಂದಿತ್ತು. ಟಾಸ್ಕ್ ‘ಎ’ ಮತ್ತು ‘ಬಿ’ನಲ್ಲಿ ಬರುವ ಕಂಪನಿಗಳಿಗೆ ಫೈವ್ ಸ್ಟಾರ್ ನೀಡುವುದನ್ನು ಪೂರ್ಣಗಳಿಸಿದರೆ ₹ 150 ಪಡೆಯಬಹುದು ಎಂದು ವಂಚಕರು ಹೇಳಿದ್ದರು. ಅವರ ಮಾತು ನಂಬಿದ ಕಾಶಿನಾಥ ಅವರು ತಮ್ಮ ಯುಪಿಐ ಐಡಿ, ವಾಟ್ಸ್‌ಆ್ಯಪ್ ಮೊಬೈಲ್ ನಂಬರ್‌ನ ಮಾಹಿತಿಯನ್ನು ಹಂಚಿಕೊಂಡರು. ಆರಂಭದಲ್ಲಿ ವಂಚಕರು ಟಾಸ್ಕ್‌ಗಳ ಲಾಭಾಂಶದ ಹಣವನ್ನು ಕೊಟ್ಟು ವಿಶ್ವಾಸ ಮೂಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ವೆಬ್‌ಲಿಂಕ್ ಒಂದರಲ್ಲಿ ನೋಂದಣಿ ಮಾಡಿಸಿಕೊಂಡರು. ಕಾಶಿನಾಥ ಅವರು ತಮ್ಮ ಹಾಗೂ ಪತ್ನಿಯ ಬ್ಯಾಂಕ್ ಖಾತೆಗಳಿಂದ ಹಂತ– ಹಂತವಾಗಿ ₹ 14.77 ಲಕ್ಷ ವರ್ಗಾವಣೆ ಮಾಡಿದ್ದರು. ಹಣ ಪಾವತಿಸಿಕೊಂಡ ವಂಚಕರು ಲಾಭಾಂಶ ಕೊಡದೆ, ಹೂಡಿಕೆಯ ಹಣವೂ ಮರಳಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
8 ಮಂದಿ ಬಾಲ ಕಾರ್ಮಿಕರ ರಕ್ಷಣೆ
ಕಲಬುರಗಿ: ಇಲ್ಲಿನ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಮಧ್ಯಪ್ರದೇಶ ಮೂಲದ 8 ಮಂದಿ ಬಾಲ ಕಾರ್ಮಿಕರನ್ನು ಅಧಿಕಾರಿಗಳು ರಕ್ಷಿಸಿದ್ದು, ಇಬ್ಬರ ವಿರುದ್ಧ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ವಿಕ್ರಾಂತ್ ದಶರಥ ಹಾಗೂ ದೀಪಕ್ ಪ್ರಕಾಶ ಪಾಟೀಲ ವಿರುದ್ಧ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ಗುತ್ತಿಗೆ ಕಾರ್ಮಿಕರು ಹಳಿ ಕೆಲಸ ಮುಗಿಸಿಕೊಂಡು ಪ್ಲಾಟ್‌ಫಾರ್ಮ್ ಒಂದರ ಮೇಲೆ ನಿಂತಿದ್ದರು. ಅವರ ಗುಂಪಿನಲ್ಲಿ ಬಾಲ ಕಾರ್ಮಿಕರು ಸಹ ಇದ್ದರು. ಕಾರ್ಮಿಕ ಇಲಾಖೆ, ಆರ್‌ಪಿಎಫ್, ರೈಲ್ವೆ ಮಕ್ಕಳ ಸಹಾಯವಾಣಿ ಸೇರಿದಂತೆ ಇತರೆ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಕಿಶೋರ ಬಾಲಕರನ್ನು ರಕ್ಷಿಸಿದ್ದಾರೆ. ಬಾಲಕರ ವಯಸ್ಸು ದೃಢೀಕರಿಸಿಕೊಂಡು, ವೈದ್ಯಕೀಯ ತಪಾಸಣೆ ಮಾಡಿಸಲಾಯಿತು. ಬಳಿಕ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಯಿತು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.