ಕಲಬುರಗಿ: ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಪಾಕಿಸ್ತಾನ ಪ್ರಜೆಗಳ ವೀಸಾವನ್ನು ಭಾರತ ಸರ್ಕಾರ ರದ್ದು ಮಾಡಿದೆ. ಜಿಲ್ಲೆಯಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ಜಿಲ್ಲಾಡಳಿತ ಗುರುತಿಸಿ, ಅವರನ್ನು ಪಾಕ್‌ಗೆ ಕಳುಹಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನಕಾರರು ಜಮಾಯಿಸಿದರು.
‘ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳನ್ನು ಹೊರಗೆ ಹಾಕಿ, ‘ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರ ಬಲಿದಾನ ಎಂದು ಮರೆಯುವುದಿಲ್ಲ’ ಎಂಬ ನಾಮಫಲಕಗಳನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ‘ಉಗ್ರರ ದಾಳಿಯ ಬಳಿಕ ಕೇಂದ್ರ ಸರ್ಕಾರವು ಭಾರತದಲ್ಲಿರುವ ಪಾಕ್ ಪ್ರಜೆಗಳನ್ನು ದೇಶ ಬಿಟ್ಟು ಕಳುಹಿಸುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ಕೇಂದ್ರದ ಈ ಆದೇಶವನ್ನು ಪಾಲಿಸಿ, ಕೂಡಲೇ ಪಾಕ್‌ನ ಎಲ್ಲ ಪ್ರಜೆಗಳನ್ನು ಹೊರ ಕಳುಹಿಸಬೇಕು’ ಎಂದರು.
‘ಅಮಾಯಕ ಭಾರತೀಯರನ್ನು ಉಗ್ರರು ಗುಂಡಿಟ್ಟು ಕೊಂದಿದ್ದಾರೆ. ಇಂತಹ ಪೈಶಾಚಿಕ ಕೃತ್ಯದಲ್ಲಿ ಪಾಕಿಸ್ತಾನ ಕೈಜೋಡಿಸಿದೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕಾದರೆ ದೇಶ ಹಾಗೂ ರಾಜ್ಯದಲ್ಲಿರುವ ಪಾಕ್ ಪ್ರಜೆಗಳನ್ನು ಹೊರ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.
ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ‘ಪಾಕ್ ಪರವಾಗಿ ಮಾತನಾಡುವ ಹಾಗೂ ಘೋಷಣೆ ಕೂಗುವ ವ್ಯಕ್ತಿ ಯಾರೇ ಆಗಿರಲಿ, ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು. ಕಾನೂನು ಬಾಹಿರವಾಗಿ ವಾಸ ಮಾಡುವವರನ್ನು ಹೊರ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಕೂಡಲೇ ಮಾಡಬೇಕು’ ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಮಾತನಾಡಿ, ‘ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೂ ಕಾರ್ಯಕರ್ತರ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಇದನ್ನೆಲ್ಲಾ ಗಮನಿಸಿದರೆ ನಾವು ಪಾಕಿಸ್ತಾನದಲ್ಲಿ ಇದ್ದೇವೋ ಅಥವಾ ಹಿಂದೂ ರಾಷ್ಟ್ರದಲ್ಲಿದ್ದೇವೋ ಎಂಬುದು ಅರ್ಥವಾಗುತ್ತಿಲ್ಲ’ ಎಂದರು.
ಪ್ರತಿಭಟನೆಯಲ್ಲಿ ಶಾಸಕ ಡಾ. ಅವಿನಾಶ್ ಜಾಧವ್, ಮುಖಂಡರಾದ ಶಿವರಾಜ ಪಾಟೀಲ ರದ್ದೇವಾಡಗಿ, ಅಮರನಾಥ ಪಾಟೀಲ, ಉಮೇಶ ಪಾಟೀಲ, ಶಿವಯೋಗಿ ನಾಗನಹಳ್ಳಿ, ಮಹಾದೇವ ಬೆಳಮಗಿ, ಲಿಂಗರಾಜ ಬಿರಾದಾರ, ಅವಿನಾಶ್ ಕುಲಕರ್ಣಿ, ಶಿವ ಅಷ್ಟಗಿ, ವರದಾ ಶಂಕರ ಶೆಟ್ಟಿ, ಗಂಗಪ್ಪ ಗೌಡ ಪಾಟೀಲ, ರಾಘವೇಂದ್ರ ಕುಲಕರ್ಣಿ, ಸುಧಾ ಹಾಲಕೈ, ವಿದ್ಯಾಧರ ಮಂಗಳೂರೆ, ಮಹೇಶ್ ಚವ್ಹಾಣ್, ರವಿಚಂದ್ರ ಕಾಂತಿಕರ್, ಗಿರಿರಾಜ್ ಯಳಮೇಲಿ, ರಾಜು ನಾಗನಳ್ಳಿ, ಬಸವರಾಜ ಮಧುರಕಿ, ಬಾಬುರಾವ್ ಹಾಗರಗುಂಡಗಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.