ADVERTISEMENT

ಕಲಬುರಗಿ | ಅಬ್ಬರಿಸಿದ ವರುಣ: ಪರದಾಡಿದ ಜನ

ಸುಮಾರು 2 ಗಂಟೆ ಸುರಿದ ಮಳೆ; ವಾಹನ ಸಂಚಾರಕ್ಕೆ ಅಡಚಣೆ, ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 8:09 IST
Last Updated 8 ಆಗಸ್ಟ್ 2025, 8:09 IST
ಕಲಬುರಗಿಯಲ್ಲಿ ಗುರುವಾರ ಸುರಿದ ಮಳೆಯಿಂದ ರಸ್ತೆಯ ಮೇಲೆ ನೀರು ನಿಂತಿದ್ದು. ವಾಹನ ಸವಾರರು ಮಳೆಯಲ್ಲಿಯೇ ಸಂಚರಿಸಿದರು    ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರಗಿಯಲ್ಲಿ ಗುರುವಾರ ಸುರಿದ ಮಳೆಯಿಂದ ರಸ್ತೆಯ ಮೇಲೆ ನೀರು ನಿಂತಿದ್ದು. ವಾಹನ ಸವಾರರು ಮಳೆಯಲ್ಲಿಯೇ ಸಂಚರಿಸಿದರು    ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಬೆಳಿಗ್ಗೆ ಆಶ್ಲೇಷಾ ಮಳೆ ಸುಮಾರು 2 ಗಂಟೆ ಕಾಲ ಧಾರಾಕಾರವಾಗಿ ಸುರಿಯಿತು.

ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಬ್ಬರಿಸಲು ಶುರು ಮಾಡಿದ ವರುಣ ಜನಜೀವನವನ್ನು ಅಸ್ತ್ಯವ್ಯಸ್ತಗೊಳಿಸಿದ. ನಿತ್ಯದ ಕೆಲಸಗಳಿಗೆ ಹೊರಟಿದ್ದ ಸಾರ್ವಜನಿಕರು ಪರದಾಡಿದರು. ಬಿರುಸಿನ ಮಳೆಯಿಂದ ರಕ್ಷಣೆ ಪಡೆಯಲು ಜನರು ಮರಗಳಡಿ, ಕಾಂಪ್ಲೆಕ್ಸ್‌ಗಳಡಿ ನಿಂತು ರಕ್ಷಣೆ ‌ಪಡೆದರು. ಕೆಲವರು ಛತ್ರಿ, ರೇನ್‌ ಕೋಟ್‌ಗಳ ಮೊರೆ ಹೋದರು.

‌ಮಳೆಗೆ ಚರಂಡಿಗಳು ತುಂಬಿ ರಸ್ತೆ‌ ಮೇಲೆಲ್ಲಾ ನೀರು ಹರಿಯಿತು. ನಗರದ‌ ಅನ್ನಪೂರ್ಣ ‌ಕ್ರಾಸ್, ಪಿಡಿಎ ಎಂಜಿನಿಯರಿಂಗ್‌ ಕಾಲೇಜು ರೈಲ್ವೆ ಕೆಳ‌ಸೇತುವೆ, ಹಳೇ ಜೇವರ್ಗಿ‌ ಕ್ರಾಸ್ ರೈಲ್ವೆ ಕೆಳ‌ಸೇತುವೆ ಅಡಿ ನೀರು ನಿಂತು ಪಾದಚಾರಿಗಳು, ದ್ವಿಚಕ್ರ ವಾಹನಗಳ‌ ಸವಾರರು ಪರದಾಡಿದರು. 

ADVERTISEMENT

ರಸ್ತೆ ಸಂಚಾರ ಸ್ಥಗಿತ: ‌ಅಫಜಲಪುರ ತಾಲ್ಲೂಕಿನ ಹೊಸೂರ, ಮಣ್ಣೂರ, ಶೇಷಗಿರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲೂ ಧಾರಾಕಾರ ಮಳೆಯಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು. ಮಣ್ಣೂರದಿಂದ ಕರಜಗಿಗೆ ಹೋಗುವ ರಸ್ತೆ ಮಾರ್ಗ ಮಧ್ಯದ ಕಿರುಹಳ್ಳ ತುಂಬಿ ಸೇತುವೆ ಮೇಲೆ ನೀರು ಹರಿಯಿತು. ಪರಿಣಾಮ ಮಧ್ಯಾಹ್ನ 12 ಗಂಟೆಯಿಂದ ಸಂಜೆವರೆಗೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಇಂಡಿ, ವಿಜಯಪುರಕ್ಕೆ ಹೋಗುವ ಪ್ರಯಾಣಿಕರು, ವಾಹನ ಸವಾರರು ಪರದಾಡಿದರು.

ಬೆಳೆ ಹಾನಿ:  ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದರಿಂದ ತೊಗರಿ, ಹತ್ತಿ, ಹೆಸರು, ಉದ್ದು, ಮೆಕ್ಕೆಜೋಳ ಸೇರಿದಂತೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ತಕ್ಷಣ ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಹಾನಿಯ ಅಂದಾಜು ಮಾಡಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಆ.3ರಿಂದ ಆರಂಭವಾಗಿರುವ ಆಶ್ಲೇಷಾ ಮಳೆ ಆ.16ರವರೆಗೆ ಇರಲಿದ್ದು, ಆ.9ರಿಂದ ಹೆಚ್ಚಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಫಜಲಪುರ ತಾಲ್ಲೂಕಿನ ಕಿರುಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಕರಜಗಿ– ಮಣ್ಣೂರ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.