ADVERTISEMENT

ಕಲಬುರಗಿ: ಬೆಲೆ ಏರಿಕೆ ಖಂಡಿಸಿ ಲಾರಿ ಮಾಲೀಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 13:51 IST
Last Updated 15 ಏಪ್ರಿಲ್ 2025, 13:51 IST
ಕಲಬುರಗಿಯಲ್ಲಿ ಮಂಗಳವಾರ ಗುಲಬರ್ಗಾ ಜಿಲ್ಲಾ ಲಾರಿ ಮಾಲೀಕರ ಸಂಘದ ಮುಖಂಡರು, ಲಾರಿ ಚಾಲಕರು ಪ್ರತಿಭಟನೆ ನಡೆಸಿದರು
ಕಲಬುರಗಿಯಲ್ಲಿ ಮಂಗಳವಾರ ಗುಲಬರ್ಗಾ ಜಿಲ್ಲಾ ಲಾರಿ ಮಾಲೀಕರ ಸಂಘದ ಮುಖಂಡರು, ಲಾರಿ ಚಾಲಕರು ಪ್ರತಿಭಟನೆ ನಡೆಸಿದರು   

ಕಲಬುರಗಿ: ಇಂಧನ ಹಾಗೂ ಟೋಲ್ ದರ ಏರಿಕೆಯನ್ನು ಖಂಡಿಸಿ ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ್ ಸಂಘವು ಮಂಗಳವಾರ ಕರೆ ನೀಡಿದ್ದ ಮುಷ್ಕರಕ್ಕೆ ಕಲಬುರಗಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಾವಿರಾರು ಲಾರಿ ಮಾಲೀಕರು, ಚಾಲಕರು ಹಾಗೂ ಕ್ಲೀನರ್‌ಗಳು ಆಳಂದ ರಿಂಗ್ ರಸ್ತೆಯ ಮಹಾತ್ಮ ಗಾಂಧಿ ಟ್ರಕ್‌ ಟರ್ಮಿನಲ್‌ನಲ್ಲಿ ಲಾರಿಗಳನ್ನು ನಿಲ್ಲಿಸಿದ ಗುಲಬರ್ಗಾ ಜಿಲ್ಲಾ ಲಾರಿ ಮಾಲೀಕರ ಸಂಘದವರು ಪ್ರತಿಭಟನೆ ನಡೆಸಿದರು. ಟ್ರಕ್‌ ಟರ್ಮಿನಲ್‌, ರಿಂಗ್ ರಸ್ತೆ ಬದಿಯಲ್ಲಿ ನೂರಾರು ಲಾರಿಗಳು ಸಾಲು ಗಟ್ಟಿ ನಿಂತಿದ್ದವು. ಲಾರಿ ಮಾಲೀಕರ ಪ್ರಮುಖವಾದ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷ ಡೀಸೆಲ್ ದರವನ್ನು ₹ 3 ಏರಿಸಿದ್ದ ರಾಜ್ಯ ಸರ್ಕಾರವು ಈಗ ಮತ್ತೆ ₹ 2 ಏರಿಸಿದೆ. ದುಬಾರಿ ದಿನಗಳಲ್ಲಿ ಇದರಿಂದ ಲಾರಿ ಮಾಲೀಕರಿಗೆ ಆರ್ಥಿಕ ಹೊರೆಯಾಗುತ್ತಿದೆ. ಪದೇ ಪದೇ ದರ ಏರಿಕೆ ಮಾಡುವುದು ಸರಿಯಲ್ಲ ಎಂದರು.

ADVERTISEMENT

ಸಂಘದ ಜಿಲ್ಲಾ ಅಧ್ಯಕ್ಷ ಪ್ರಕಾಶ ಖೇಮಜಿ ಮಾತನಾಡಿ, ‘ಡೀಸೆಲ್ ದರವು ಕರ್ನಾಟಕದಲ್ಲಿ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಗಿಂತ ₹ 2 ಕಡಿಮೆ ಇತ್ತು. ಕರ್ನಾಟಕದ ಮೂಲಕ ಹಾದುಹೋಗುವ ನೆರೆ ರಾಜ್ಯಗಳ ಬಹುತೇಕರು ಕರ್ನಾಟಕದ ಪೆಟ್ರೋಲ್ ಬಂಕ್‌ಗಲ್ಲಿ ಡೀಸೆಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳುತ್ತಿದ್ದರು. ದರ ಏರಿಕೆಯಿಂದ ಡೀಸೆಲ್ ಖರೀದಿ ಕುಸಿದು, ಸರ್ಕಾರಕ್ಕೆ ಹೊರೆ ಆಗುತ್ತಿದೆ. ಜತೆಗೆ ನಮಗೂ ತೊಂದರೆ ಆಗುತ್ತಿದೆ’ ಎಂದರು.

‘ಇಂಧನ ಬೆಲೆ ಏರಿಕೆಯಿಂದ ಲಾರಿ, ಗೂಡ್ಸ್‌ ವಾಹನಗಳಿಗೆ ಸಾಕಷ್ಟು ಹೊರೆಯಾಗಿದೆ. ಕಲಬುರಗಿಯಿಂದ ಮುಂಬೈಗೆ ಹೋಗಲು 200 ಲೀಟರ್ ಡೀಸೆಲ್ ಬೇಕಾಗತ್ತದೆ. ₹ 2 ಏರಿಕೆಯಿಂದ ಒಬ್ಬ ಲಾರಿ ಮಾಲೀಕನಿಗೆ ₹ 400 ಹೊರೆ ಆಗುತ್ತಿದೆ. ಇದರ ಜತೆಗೆ ಟೋಲ್ ಶುಲ್ಕವೂ ಏರಿಕೆ ಆಗುತ್ತಿದೆ. ಇದೇ ರೀತಿ ದರ ಏರಿಕೆ ಮಾಡಿದರೆ ಲಾರಿ ಓಡಿಸುವುದು ಹೇಗೆ’ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಶೀದ್, ಕಾರ್ಯದರ್ಶಿ ಹುಲಿರಾಜ್ ಕಜಲೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.