ಕಲಬುರಗಿ: ‘ನವ ಕರ್ನಾಟಕ ರೈತ ಸಂಘ ಹಾಗೂ ಗ್ರೀನ್ ಪ್ಲಾನೆಟ್ ವತಿಯಿಂದ ನಗರದ ಕನ್ನಡ ಭವನದಲ್ಲಿ ಜುಲೈ 18ರ ಬೆಳಿಗ್ಗೆ 10.30ಕ್ಕೆ ಸಾವಯವ ಕೃಷಿ ಸಮ್ಮೇಳನ ಮತ್ತು ಭೂಮಿ ತಾಯಿ ಉಳಿಸಿ ಅಭಿಯಾನ ಆಯೋಜಿಸಲಾಗಿದೆ’ ಎಂದು ಸಂಘದ ರಾಜ್ಯ ಅಧ್ಯಕ್ಷ ದಯಾನಂದ ಸಿ.ಪಾಟೀಲ ತಿಳಿಸಿದರು.
‘ಕುರಕೋಟಾ ಪೀಠಾಧಿಪತಿ ರೇವಣಸಿದ್ಧ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಕೃಷಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ರವೀಂದ್ರ ಪಾಟೀಲ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಪಂಜಾಬ್‌ನ ಗ್ರೀನ್ ಪ್ಲಾನೆಟ್ ರಾಷ್ಟ್ರೀಯ ತರಬೇತುದಾರ ರಾಜೇಶ ಬುಬನೆ ಮತ್ತು ಸಲಹೆಗಾರ ಮಂಚಕಣ್ಣ ತಿಡೋಳೆ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸುವರು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಸಾವಯವ ಕೃಷಿ ಕುರಿತು ಜನರು ಮತ್ತು ಕೆಲವು ರೈತರಲ್ಲಿ ಸಾಕಷ್ಟು ಅಪನಂಬಿಕೆಗಳಿವೆ. ಅವುಗಳನ್ನು ದೂರ ಮಾಡಿ, ಅವರನ್ನು ಸಾವಯವ ಕೃಷಿಯತ್ತ ಕರೆತರುವ ಪ್ರಯತ್ನವನ್ನು ಸಮ್ಮೇಳನದ ಮೂಲಕ ಮಾಡಲಾಗುವುದು. ಕೃಷಿ ಪರಿಣಿತರು ಸಾವಯವ ಕೃಷಿ ಕುರಿತು ತಿಳಿವಳಿಕೆಯೂ ಮೂಡಿಸುವರು’ ಎಂದರು.
‘ಸಾವಯವ ಕೃಷಿ ಪರಿಕರಗಳಾದ ಜೀವಾಮೃತ, ಬೀಜಾಮೃತ, ದಶಪರಣಿ, ಮೀನೆಣ್ಣೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಅರಿವು ಮೂಡಿಸಲಾಗುವುದು. ಕೃಷಿ ಭೂಮಿಯಲ್ಲಿ ಸಸ್ಯಗಳನ್ನು ಬೆಳೆದು ಆರ್ಥಿಕ ಲಾಭ ಮಾಡಿಕೊಳ್ಳುವ ವಿಧಾನದ ಬಗ್ಗೆ ತಿಳಿಸಿಕೊಡಲಾಗುವುದು. ಆಧುನಿಕ ಮತ್ತು ಪಾರಂಪರಿಕ ಕೃಷಿ ಪದ್ಧತಿಗಳನ್ನು ಅಳವಡಿಸುವ ಬಗ್ಗೆಯೂ ತಜ್ಞರು ಮಾಹಿತಿ ಕೊಡುವರು’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ. ಜಗದೀಶ, ಮುಖಂಡರಾದ ಶಿವರಾಜ ನೆಲ್ಲೂರ, ಬಾಲಾಜಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.