ADVERTISEMENT

ಕಲಬುರಗಿ: ಸುಸ್ತಿ ಸಾಲ ಪಾವತಿಗೆ ಮಾರ್ಚ್‌ 31ರತನಕ ಅವಕಾಶ

ಬಡ್ಡಿ ಮನ್ನಾ ಯೋಜನೆಯ ಸೌಲಭ್ಯದ ಅವಧಿ ವಿಸ್ತರಿಸಿದ ರಾಜ್ಯ ಸರ್ಕಾರ

ಬಸೀರ ಅಹ್ಮದ್ ನಗಾರಿ
Published 15 ಮಾರ್ಚ್ 2024, 5:41 IST
Last Updated 15 ಮಾರ್ಚ್ 2024, 5:41 IST
ಸೋಮಶೇಖರ ಗೋನಾಯಕ
ಸೋಮಶೇಖರ ಗೋನಾಯಕ   

ಕಲಬುರಗಿ: ರೈತರು ಹಾಗೂ ರೈತ ಮುಖಂಡರಿಂದ ಒತ್ತಡ ಹೆಚ್ಚಿದ ಬೆನ್ನಲ್ಲೇ ಬಡ್ಡಿ ಮನ್ನಾ ಯೋಜನೆಯಡಿ ಕೃಷಿ ಹಾಗೂ ಕೃಷಿ ಸಂಬಂಧಿತ ಮಧ್ಯಮಾವಧಿ ಸುಸ್ತಿ ಸಾಲಗಳ ಅಸಲು ಪಾವತಿಗೆ ನೀಡಿದ ಗಡುವನ್ನು ರಾಜ್ಯ ಸರ್ಕಾರ ಮಾರ್ಚ್‌ 31ರ ತನಕ ವಿಸ್ತರಿಸಿದೆ.

ಈ ನಿರ್ಧಾರದಿಂದ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಕೆವೈಡಿಸಿಸಿ ಬ್ಯಾಂಕ್‌) ವ್ಯಾಪ್ತಿಯ 10 ಶಾಖೆಗಳ 514 ಸುಸ್ತಿದಾರರ ರೈತರಿಗೆ ಪ್ರಯೋಜನವಾಗಲಿದೆ.

ಕೃಷಿ ಹಾಗೂ ಕೃಷಿ ಸಂಬಂಧಿತ ಮಧ್ಯಮಾವಧಿ ಸುಸ್ತಿ ಸಾಲಗಳ ಅಸಲು ಪಾವತಿಸಿದರೆ, ಆ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ 2024ರ ಜ.20ರಂದು ಈ ಮೊದಲು ಆದೇಶಿಸಿತ್ತು. ಅಸಲು ಪಾವತಿಗೆ ಫೆ.29ರ ತನಕ ಅವಕಾಶ ನೀಡಿತ್ತು. ಆಗ ಈ ಯೋಜನೆಯಡಿ ಕೆವೈಡಿಸಿಸಿ ಬ್ಯಾಂಕ್‌ನ 10 ಶಾಖೆಗಳ 501 ರೈತರು ಒಟ್ಟು ₹17.72 ಕೋಟಿಯಷ್ಟು ಸಾಲ ಮರುಪಾವತಿಸಿದ್ದರು.

ADVERTISEMENT

ಆದರೆ, ಇನ್ನುಳಿದ 514 ರೈತರು ಯೋಜನೆಯಡಿ ಲಾಭ ಪಡೆಯಲು ಸಾಧ್ಯವಾಗಿರಲಿಲ್ಲ. ‘ಬಡ್ಡಿ ಮನ್ನಾ ಯೋಜನೆಯಡಿ ಅಸಲು ಪಾವತಿಗೆ ರೈತರಿಗೆ ಬಹಳ ಕಡಿಮೆ ಅವಕಾಶ ನೀಡಲಾಗಿದ್ದು, ಈ ಇಷ್ಟು ಕಡಿಮೆ ಅವಧಿಯಲ್ಲಿ ರೈತರು ಸಾಲ ಪಾವತಿಸಲು ಸಾಧ್ಯವಿಲ್ಲ. ಬರಗಾಲ ಇರುವುದರಿಂದ ಅನ್ನದಾತರು ಕಷ್ಟದಲ್ಲಿದ್ದು, ಸಾಲ ಪಾವತಿಗೆ ಹಣ ಹೊಂದಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕು. ಕನಿಷ್ಠ ಮೂರು ಅವಧಿ ತಿಂಗಳು ವಿಸ್ತರಿಸಬೇಕು’ ಎಂದು ರೈತರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದರು.

ಅಸಲು ಪಾವತಿಗೂ ನಿರಾಸಕ್ತಿ: ಬಡ್ಡಿ ಮನ್ನಾ ಯೋಜನೆಯಡಿ ಕೆವೈಡಿಸಿಸಿ ಬ್ಯಾಂಕ್‌ ವ್ಯಾಪ್ತಿಯಲ್ಲಿ ಒಟ್ಟು 1,015 ಫಲಾನುಭವಿ ರೈತರಿಂದ ₹38.29 ಕೋಟಿ ಸಾಲ ವಸೂಲಾತಿ ಗುರಿ ಹೊಂದಲಾಗಿತ್ತು. ದೊಡ್ಡ ಮೊತ್ತದ ಬಡ್ಡಿ ಮನ್ನಾ ಸೌಲಭ್ಯದ ಹೊರತಾಗಿಯೂ ಸುಸ್ತಿ ಸಾಲದ ಅಸಲು ಮೊತ್ತ ಪಾವತಿಗೆ ರೈತರು ನಿರಾಸಕ್ತಿ ತೋರಿದ್ದರು. ಫೆ.29ರ ಗಡುವಿನ ತನಕ ಒಟ್ಟು 501 ರೈತರು ₹17.72 ಕೋಟಿ ಅಸಲು ಪಾವತಿಸಿದ್ದರು. ಶೇ 46.28ರಷ್ಟು ಸಾಲ ವಸೂಲಾಗಿತ್ತು.

‘ಋಣಮುಕ್ತವಾಗಲು ಸುವರ್ಣಾವಕಾಶ’

‘ಸುಸ್ತಿ ಸಾಲ ಪಾವತಿಸಿ ಋಣ ಮುಕ್ತರಾಗಲು ಅನ್ನದಾತರಿಗೆ ರಾಜ್ಯ ಸರ್ಕಾರ ಮತ್ತೊಂದು ಸುವರ್ಣಾವಕಾಶ ನೀಡಿದೆ. ನಮ್ಮ ನಿರಂತರ ಒತ್ತಡ ಮನವಿಗೆ ಸರ್ಕಾರ ಸ್ಪಂದಿಸಿ ಬಡ್ಡಿ ಮನ್ನಾ ಯೋಜನೆಯಡಿ ಅಸಲು ಪಾವತಿಗೆ ರೈತರಿಗೆ ಮಾರ್ಚ್ 31ರ ತನಕ ಅವಕಾಶ ನೀಡಿದೆ. ರೈತರು ಇದರ ಪ್ರಯೋಜನ ಪಡೆದು ಸುಸ್ತಿ ಸಾಲಗಳ ಅಸಲು ಪಾವತಿಸಿ ಋಣ ಮುಕ್ತವಾಗಬೇಕು’ ಎಂದು ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಕೆವೈಡಿಸಿಸಿ ಬ್ಯಾಂಕ್‌) ಅಧ್ಯಕ್ಷ ಸೋಮಶೇಖರ ಗೋನಾಯಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.