ADVERTISEMENT

ಭಾರಿ ಮಳೆಗೆ ಕಲಬುರ್ಗಿ ಜಿಲ್ಲೆ ತತ್ತರ: ಜನಜೀವನ ಸಂಪೂರ್ಣ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 2:32 IST
Last Updated 14 ಅಕ್ಟೋಬರ್ 2020, 2:32 IST
ಕಲಬುರ್ಗಿಯಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ರಸ್ತೆ, ಉದ್ಯಾನಗಳು ಜಲಾವೃತಗೊಂಡಿವೆ. ಕಲಬುರ್ಗಿಯ ಆನಂದನಗರದ ಉದ್ಯಾನದಲ್ಲಿ ನೀರು ನಿಂತಿರುವುದು
ಕಲಬುರ್ಗಿಯಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ರಸ್ತೆ, ಉದ್ಯಾನಗಳು ಜಲಾವೃತಗೊಂಡಿವೆ. ಕಲಬುರ್ಗಿಯ ಆನಂದನಗರದ ಉದ್ಯಾನದಲ್ಲಿ ನೀರು ನಿಂತಿರುವುದು   

ಕಲಬುರ್ಗಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ಮಳೆಗೆ ಜನಜೀವನ ತತ್ತರಿಸಿದೆ. ಕಳೆದ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಳಖೇಡ ಸೇತುವೆ, ಕಾಚೂರು, ದಂಡೋತಿ‌ ಸೇತುವೆಗಳು ಮುಳುಗಡೆಯಾಗಿವೆ.

ಮಳಖೇಡ ಉತ್ತರಾದಿ ಮಠ ಸಂಪೂರ್ಣ ಜಲಾವೃತವಾಗಿದೆ.

ಮಳೆ ನೀರು ಮನೆಯೊಳಗೆ ಹೊಕ್ಕ ಪರಿಣಾಮ ಜನರು‌ ಕಂಗಾಲಾಗಿದ್ದು, ಕಲಬುರ್ಗಿಯ ವೆಂಕಟೇಶ ‌ನಗರ, ಗೋದುತಾಯಿ ಕಾಲೊನಿ, ಪಂಚಶೀಲ ನಗರ, ಪೂಜಾ ಕಾಲೊನಿ ಸೇರಿದಂತೆ ಅನೇಕ ಬಡಾವಣೆಗಳು ಜಲಾವೃತಗೊಂಡಿವೆ.

ADVERTISEMENT

ಮಳೆ ನೀರನ್ನು ಹೊರಹಾಕಲು ಜನರು ಪರದಾಡುತ್ತಿದ್ದಾರೆ. ಆದರೆ ನಿರಂತರವಾಗಿ ‌ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು, ಚರಂಡಿಗಳು, ಉದ್ಯಾನಗಳಲ್ಲಿ ನೀರು ತುಂಬಿ ಹರಿಯುತ್ತಿದೆ.

ಕಳೆದ 20 ವರ್ಷಗಳಲ್ಲಿ ಇಂತಹ ಭಾರಿ ಮಳೆ ಸುರಿದಿರಲಿಲ್ಲ ಎಂದು ನಗರದ ನಿವಾಸಿಗಳು ನೆನಪಿಸಿಕೊಳ್ಳುತ್ತಿದ್ದಾರೆ.ಚಿಂಚೋಳಿ ಹಾಗೂ ಕಾಳಗಿ ತಾಲ್ಲೂಕಿನ ಹಲವೆಡೆ ಮನೆಗಳಿಗೆ ‌ನೀರು ನುಗ್ಗಿದೆ.ಜಿಲ್ಲೆಯ ‌ಭೀಮಾ, ಕಾಗಿಣಾ, ಕಮಲಾವತಿ ನದಿಗಳು‌ ಉಕ್ಕಿ ಹರಿಯುತ್ತಿವೆ.

ಆಳಂದ: ಕೆರೆ ಒಡೆದು ಹೊಲಗಳಿಗೆ ನುಗ್ಗಿದ ನೀರು

ಭಾರಿ‌ ಮಳೆಯಿಂದಾಗಿ ಜಿಲ್ಲೆಯ ‌ಆಳಂದ ತಾಲ್ಲೂಕಿನ ‌ಮಟಕಿ ಕೆರೆ ಒಡೆದು ಅಪಾರ ಪ್ರಮಾಣದ ನೀರು ಹೊಲಗಳಿಗೆ ನುಗ್ಗಿದೆ.

ಮಟಕಿ, ಹೆಬಳಿ, ಜೀರಹಳ್ಳಿ, ಶಕಾಪುರ ಗ್ರಾಮದ ಹಳ್ಳದ ದಂಡೆಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.ವಿವಿಧೆಡೆ ಸಂಚಾರ ಸ್ಥಗಿತಗೊಂಡಿದ್ದು, ಅಮರ್ಜಾ ಅಣೆಕಟ್ಟೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.

1992ರಲ್ಲಿ ಮಟಕಿ ಕೆರೆ ಒಡೆದಿತ್ತು. ಈಗ ಮತ್ತೆ ಈ ಕೆರೆ ಒಡೆದ ಪರಿಣಾಮ ಹಳ್ಳವು ತುಂಬಿ ಹರಿಯುತ್ತಿದೆ. ಸುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.