ADVERTISEMENT

‘ಕನ್ನಡವನ್ನು ಉದ್ಯೋಗದ ಭಾಷೆಯಾಗಿ ಬೆಳೆಸಿ’

‘ರಾಷ್ಟ್ರೀಯ ಶಿಕ್ಷಣ ನೀತಿ–2020– ಅಧ್ಯಾಪ‍ಕರ ಶಿಬಿರ’ ಉದ್ಘಾಟಿಸಿದ ಕುಲಪತಿ ಪ್ರೊ.ದಯಾನಂದ ಅಗಸರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 12:16 IST
Last Updated 28 ಜನವರಿ 2022, 12:16 IST
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಅಧ್ಯಾಪಕರ ಶಿಬಿರದಲ್ಲಿ ವಿವಿಧ ಕಾಲೇಜುಗಳ ಅಧ್ಯಪಾಕರು ಪಾಲ್ಗೊಂಡರು
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಅಧ್ಯಾಪಕರ ಶಿಬಿರದಲ್ಲಿ ವಿವಿಧ ಕಾಲೇಜುಗಳ ಅಧ್ಯಪಾಕರು ಪಾಲ್ಗೊಂಡರು   

ಕಲಬುರಗಿ: ‘ಕನ್ನಡವನ್ನು ಕೇವಲ ಜ್ಞಾನದ ಭಾಷೆಯಾಗಿ ಪರಿಗಣಿಸದೇ, ಉದ್ಯೋಗದ ಭಾಷೆಯಾಗಿ ಪರಿವರ್ತನೆ ಮಾಡುವಲ್ಲಿ ಕನ್ನಡ ಅಧ್ಯಾಪಕರ ಪಾತ್ರ ದೊಡ್ಡದು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಹೇಳಿದರು.

ಗು.ವಿ.ವಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಸಿದ್ಧಲಿಂಗೇಶ್ವರ ಬುಕ್‌ ಡಿಪೊ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ–2020’ ಕುರಿತ ಕನ್ನಡ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ ಶಿಬಿರ ಹಾಗೂ ಕನ್ನಡ ಪಠ್ಯಪುಸ್ತಕಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಉಳಿದೆಲ್ಲ ಅಧ್ಯಾಪಕರಿಗಿಂತ ಕನ್ನಡ ಕಲಿಸುವವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಭವಿಷ್ಯಕ್ಕೆ ಜ್ಞಾನಿಗಳನ್ನು ತಯಾರಿಸುವವರು ನೀವು. ಹಾಗಾಗಿ, ಹೆಚ್ಚಿನ ಅಧ್ಯಯನ ಮಾಡಿ ಬೋಧನೆಗೆ ನಿಲ್ಲಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ‘ಹೊಸ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಪಠ್ಯಕ್ರಮವನ್ನು ಪ್ರಕಟಿಸಿದ ರಾಜ್ಯದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಗುಲಬರ್ಗಾ ವಿ.ವಿ.ಗೆ ಸಂದಿದೆ. ಈ ಪಠ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿಷಯಗಳಿಗೆ ಶೇ 70ರಷ್ಟು, ಉಳಿದ ಭಾಗಕ್ಕೆ ಶೇ 30ರಷ್ಟು ಆದ್ಯತೆ ನೀಡಲಾಗಿದೆ’ ಎಂದರು.

ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ. ಪೋತೆ ಅಧ್ಯಕ್ಷತೆ ವಹಿಸಿದ್ದರು. ಸಿದ್ಧಲಿಂಗೇಶ್ವರ ಬುಕ್‌ ಡಿಪೊ ಮಾಲೀಕ ಬಸವರಾಜ ಕೊನೆಕ ಇದ್ದರು.

ಬೌದ್ಧಿಕಸ್ವತ್ತು ಸಿದ್ಧಗೊಳ್ಳಲಿ: ‘ಹೊಸಗನ್ನಡ ಪಠ್ಯಪುಸ್ತಕ ಸಿದ್ಧತೆ– ಬೋಧನೆ’ ಕುರಿತು ಗೋಷ್ಠಿಯಲ್ಲಿ ವಿಷಯ ಮಂಡಿಸಿದಕರ್ನಾಟಕ ಕೇಂದ್ರೀಯ ವಿ.ವಿ ಪ್ರಾಧ್ಯಾಪಕ ವಿಕ್ರಮ ವಿಸಾಜಿ, ‘ಕನ್ನಡವನ್ನು ಸಮಕಾಲೀನ ಜ್ಞಾನಪ್ರಪಂಚಕ್ಕೆ ವಗ್ಗಿಸುವುದನ್ನು ಪ್ರಾಧ್ಯಾಪಕರು ಕಲಿಯಬೇಕು. ಹೊಸ ಶಿಕ್ಷಣ ನೀತಿಯಲ್ಲಿ ವರ್ಗೀಕೃತ ಜ್ಞಾನಕ್ಕೆ ಸಾಕಷ್ಟು ಅವಕಾಶಗಳಿವೆ. ಇಲ್ಲಿ ಕನ್ನಡವನ್ನು ವಿಜ್ಞಾನದ ಭಾಷೆಯಾಗಿ, ತಂತ್ರಜ್ಞಾನ, ಪರಿಸರ, ಪರಂಪರೆ, ಇತಿಹಾಸ, ಚರಿತ್ರೆ ಭಾಷೆಯಾಗಿ ಓದುವಂತೆ ಪಠ್ಯ ಸಿದ್ಧಗೊಳಿಸಲಾಗಿದೆ. ಒಂದು ಪದ್ಯ, ಗದ್ಯ ಅಥವಾ ಕಾದಂಬರಿಯನ್ನು ಪರಿಣಾಮಕಾರಿಯಾಗಿ ಬೋಧಿಸಬೇಕಾದರೆ; ಪ್ರಾಧ್ಯಾಕರು ಅದರ ಸುತ್ತಲಿನ ಹತ್ತಾರು ಆಯಾಮಗಳನ್ನು ಅಧ್ಯಯನ ಮಾಡಬೇಕು’ ಎಂದರು.

‘ಪ್ರತಿ ವರ್ಷ ಪಾಸಾಗುವ ಎಲ್ಲ ವೈದ್ಯ ವಿದ್ಯಾರ್ಥಿಗಳೂ ವೈದ್ಯರಾಗುತ್ತಾರೆ, ಎಂಜಿನಿಯರಿಂಗ್‌ ಪಾಸಾದವರು ಎಂಜನಿಯರ್‌ ಆಗುತ್ತಾರೆ. ಆದರೆ, ಕನ್ನಡ ಸ್ನಾತಕೋತ್ತರ ಪದವಿ ಪಡೆಯುವ ಲಕ್ಷಾಂತರ ಯುವಜನರ ಏನಾಗುತ್ತಿದ್ದಾರೆ? ಎಂಬ ಪ್ರಶ್ನೆ ಹಾಕಿಕೊಳ್ಳಬೇಕಿದೆ. ಸಾವಿರದಲ್ಲಿ ಹತ್ತು ಜನರಾದರೂ ಕನ್ನಡ ಸಾರಸ್ವತ ಲೋಕ ಬೆಳಗುವಂತೆ ಸಿದ್ಧಗೊಳ್ಳಬೇಕು. ಡಬಲ್‌ ಡಿಗ್ರಿ ಪಡೆದ ಮೇಲೂ ಕನ್ನಡ ಛಂದಸ್ಸು, ವ್ಯಾಕರಣ, ಉಚ್ಛಾರ, ವಿಮರ್ಶೆ, ಮಾರ್ಗ, ಸಂಸ್ಕೃತಿಯ ಅರಿವು ಬರದಿದ್ದರೆ; ನಾವು ಕಲಿಸುವಲ್ಲಿಯೇ ಏನೋ ಎಡವಟ್ಟು ಮಾಡುತ್ತಿದ್ದೇವೆ ಎಂದೇ ಅರ್ಥ. ಕನ್ನಡ ‍ಪದವಿ ಪಡೆದವರು ಕನ್ನಡವನ್ನೇ ವಿಮರ್ಶೆ ಮಾಡಿ, ಕನ್ನಡ ಪರಂಪರೆ ಸೃಷ್ಟಿಸುವ ಮಟ್ಟಕ್ಕೆ ಜ್ಞಾನಗ್ರಾಹಿ ಆಗಬೇಕು. ಹಾಗೆ ಸಿದ್ಧಗೊಳಿಸಲು ಬೇಕಾಗುವ ಮಾರ್ಗಗಳು ಹೊಸ ಪಠ್ಯಕ್ರಮದಲ್ಲಿವೆ‍’ ಎಂದು ಹೇಳಿದರು.

‘ಜಾನಪದ ಪಠ್ಯಪುಸ್ತಕ ಸಿದ್ಧತೆ– ಬೋಧನೆ’ ಕುರಿತು ನಿವೃತ್ತ ಪ್ರಾಧ್ಯಾಪಕ ಶ್ರೀಶೈಲ ನಾಗರಾಳ, ‘ಶಾಸ್ತ್ರ ಪಠ್ಯಪುಸ್ತಕ ಸಿದ್ಧತೆ– ಬೋಧನೆ’ ಕುರಿತು ಪ್ರೊ.ಕೆ.ರವೀಂದ್ರನಾಥ ವಿಚಾರ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.