ಕಲಬುರಗಿ: ‘ಕನ್ನಡ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣ ನೀಡುವುದು ಸಾಧ್ಯ ಎನಿಸಿದರೂ ಅದು ಅಸಾಧ್ಯದ ಕೆಲಸ. ಇದನ್ನು ತಲೆಯಿಂದಲೇ ತೆಗೆದುಹಾಕಬೇಕು’ ಎಂದು ವೈದ್ಯ ಸಾಹಿತಿ ಡಾ.ಪಿ.ಎಸ್.ಶಂಕರ ಪ್ರತಿಪಾದಿಸಿದರು.
ನಗರದ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜು ಸಭಾಂಗಣದಲ್ಲಿ ಹಂಪಿ ಕನ್ನಡ ವಿವಿಯು ಡಾ.ಪಿ.ಎಸ್.ಶಂಕರ ಪ್ರತಿಷ್ಠಾನದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ವೈದ್ಯ ವಿಶ್ವಕೋಶ’ ಕೃತಿಯ 3ನೇ ಆವೃತ್ತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ಕಲಿಸುವ ಬದಲು ಎಂಬಿಬಿಎಸ್ ಮೊದಲ ಹಾಗೂ ದ್ವಿತೀಯ ವರ್ಷದಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಕಲಿಸಬಹುದಷ್ಟೆ. ಆ ಮೂಲಕ ಕನ್ನಡದಲ್ಲಿ ರೋಗಿಗಳ ಸಮಸ್ಯೆ ವಿಚಾರಿಸುವಷ್ಟು, ರೋಗಗಳ ಬಗೆಗೆ ಕನ್ನಡದಲ್ಲಿ ಹೇಳುವಷ್ಟು ಅವರನ್ನು ಸಿದ್ಧಗೊಳಿಸಬಹುದು’ ಎಂದರು.
‘ಕನ್ನಡದಲ್ಲಿ ಪಾರಂಗತರಾದರೆ ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ಕಲಿಸಬಹುದಾದರೂ ಈಗಿನ ಮಕ್ಕಳು ಶಾಲಾ ಹಂತದಿಂದ ಕನ್ನಡ ಕಲಿಯುವುದೇ ದುಸ್ತರ. ಜೊತೆಗೆ ವೈದ್ಯಕೀಯ ಶಿಕ್ಷಣವನ್ನು ಕನ್ನಡದಲ್ಲಿ ಕಲಿಸುವ ಮೇಷ್ಟ್ರುಗಳು ಎಲ್ಲಿದ್ದಾರೆ’ ಎಂದು ಪ್ರಶ್ನಿಸಿದರು.
‘ವೈದ್ಯಕೀಯ ಕ್ಷೇತ್ರ ನಿತ್ಯವೂ ಬೆಳವಣಿಗೆಯಾಗುತ್ತದೆ. ಆ ವೇಗಕ್ಕೆ ತಕ್ಕಂತೆ ಕನ್ನಡದಲ್ಲಿ ಪುಸಕ್ತಗಳ ಪ್ರಕಟಣೆ ಅಸಾಧ್ಯ. ಇನ್ನು, ಯಾವುದೇ ವಿದೇಶಿ ಭಾಷೆ ಬಳಸುತ್ತ ಹೋದಂತೆ ಅದು ನಮ್ಮದೇ ಆಗುತ್ತದೆ. ನಿಫಾ ವೈರಸ್‌ನಲ್ಲಿರುವ ನಿಫಾ ಮಲೇಷ್ಯಾದ ಹಳ್ಳಿಯೊಂದರ ಹೆಸರು. ಇನ್‌ಫ್ಲ್ಯೂಯೆಂಜಾ ಇಟಾಲಿಯನ್ ಪದ. ಡೆಂಗಿ ಸ್ಪ್ಯಾನಿಷ್ ಪದ. ಚಿಕೂನ್‌ಗುನ್ಯಾ (ತಾಂಜೇನಿಯಾದಲ್ಲಿ ಬಳಸುವ ಕಿಮಾಕೌಂಡೆ ಭಾಷೆಯ ಪದ) ಕೂಡ ನಮ್ಮದಲ್ಲ. ಆದರೆ, ಇವೆಲ್ಲ ಬಳಸುತ್ತ ಹೋದಂತೆ ನಮ್ಮದೇ ಆಗಿವೆ’ ಎಂದರು.
‘ವೈದ್ಯಕೋಶ ಪುಸಕ್ತವು ಚಿಕಿತ್ಸಾ ಕೈಪಿಡಿಯಲ್ಲ, ಇದು ರೋಗಗಳ ಬಗೆಗೆ ತಿಳಿವಳಿಕೆ ಮೂಡಿಸುವ ಕೃತಿಯಾಗಿದೆ. 1995ರಲ್ಲಿ ಮೊದಲ ಮುದ್ರಣ ಪ್ರಕಟಗೊಂಡಾಗ 475 ಪುಟಗಳಿದ್ದವು. 2015ರಲ್ಲಿ 2ನೇ ಆವೃತ್ತಿಯಲ್ಲಿ ಸುಧಾರಣೆಯಾಗಿ 600ರಷ್ಟು ಪುಟಗಳಿಗೆ ಹೆಚ್ಚಿತು. ಇದೀಗ ಮೂರನೇ ಮುದ್ರಣದಲ್ಲಿ ವೈದ್ಯ ವಿಶ್ವಕೋಶವು 875 ಪುಟಗಳಿಗೆ ಹಿಗ್ಗಿದೆ. ಈ ಕೃತಿಯಲ್ಲಿ 48 ಲೇಖಕರ 27 ಅಧ್ಯಾಯಗಳಿವೆ’ ಎಂದು ವಿವರಿಸಿದರು.
ಕೃತಿ ಬಿಡುಗಡೆ ಮಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ‘ಸಂಪೂರ್ಣವಾಗಿ ಕನ್ನಡದಲ್ಲೇ ವೈದ್ಯಕೀಯ ಶಿಕ್ಷಣ ಕೊಡುವುದು ಕಷ್ಟವಾಗಬಹುದು. ಅದಕ್ಕೆ ಅನೇಕ ಕಾರಣಗಳಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಸಾಕಷ್ಟು ಸಂಖ್ಯೆಯಲ್ಲಿ ವೈದ್ಯಕೀಯ ಕೋರ್ಸ್‌ಗಳ ಸೀಟು ಪಡೆಯುತ್ತಿದ್ದಾರೆ. ಅವರಿಗೆಲ್ಲ ಕನ್ನಡದಲ್ಲಿರುವ ವೈದ್ಯ ವಿಶ್ವಕೋಶ ಖಂಡಿತವಾಗಿಯೂ ನೆರವಾಗಲಿದೆ. ಈ ಕೃತಿಯನ್ನು ರಾಜ್ಯದ ಎಲ್ಲ ವೈದ್ಯಕೀಯ, ಅರೆ ವೈದ್ಯಕೀಯ ಕಾಲೇಜುಗಳ ಗ್ರಂಥಾಲಯಕ್ಕೆ ಕಡ್ಡಾಯವಾಗಿ ಪಡೆಯುವಂತೆ ಇಲಾಖೆ ಸುತ್ತೋಲೆ ಹೊರಡಿಸಲಾಗುವುದು’ ಎಂದರು.
ಹಂವಿ ಕನ್ನಡ ವಿ.ವಿ.ಯ ಪ್ರಸಾರಾಂಗ ನಿರ್ದೇಶಕ ಮಾಧವ ಪೆರಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪಿ.ಎಸ್.ಶಂಕರ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎಚ್.ವೀರಭದ್ರಪ್ಪ ವೇದಿಕೆಯಲ್ಲಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಬಡಶೇಷಿ ನಿರೂಪಿಸಿದರು.
ಕನ್ನಡದಲ್ಲಿ ವೈದ್ಯ ವಿಶ್ವಕೋಶ ಪ್ರಕಟಿಸುವ ಮೂಲಕ ಹಂಪಿ ಕನ್ನಡ ವಿವಿಯು ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ ಮಾಡಬೇಕಿದ್ದ ಕೆಲಸವನ್ನು ಮಾಡಿದೆಡಾ.ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
‘ಕನ್ನಡದಲ್ಲಿ ಜ್ಞಾನಸೃಷ್ಟಿ ವಿ.ವಿ ಉದ್ದೇಶ’
ಹಂಪಿಯ ಕನ್ನಡ ವಿ.ವಿ ಕುಲಪತಿ ಡಿ.ವಿ.ಪರಮಶಿವಮೂರ್ತಿ ಮಾತನಾಡಿ ‘ಕನ್ನಡದಲ್ಲಿ ಜ್ಞಾನ ಸೃಷ್ಟಿಸುವುದು ಕನ್ನಡ ವಿ.ವಿಯ ಮುಖ್ಯ ಉದ್ದೇಶ. ಕನ್ನಡ ಸಾಹಿತ್ಯ ಭಾಷೆಯ ಅಭಿವೃದ್ಧಿಯಷ್ಟೇ ಕನ್ನಡ ಅಭಿವೃದ್ಧಿಯ ಕೆಲಸವಲ್ಲ ಪ್ರಪಂಚದ ಎಲ್ಲ ಜ್ಞಾನವನ್ನೂ ಕನ್ನಡಿಗರಿಗೆ ತಿಳಿಗನ್ನಡದಲ್ಲಿ ಒದಗಿಸುವುದು ಕೂಡ ಕನ್ನಡದ ಅಭಿವೃದ್ಧಿ ಮತ್ತೊಂದು ಮಜಲು. ಈ ನಿಟ್ಟಿನಲ್ಲಿ ಭಾಷಾ ವಿಶ್ವಕೋಶ ಇತಿಹಾಸ ವಿಶ್ವಕೋಶ ವೈಜ್ಞಾನಿಕ ವಿಶ್ವಕೋಶ ವೈದ್ಯ ವಿಶ್ವಕೋಶ ಹಾಗೂ ಸಮಾಜವಿಜ್ಞಾನದಂಥ ವಿಶ್ವಕೋಶಗಳನ್ನು ವಿವಿ ಪ್ರಕಟಿಸುತ್ತಲೇ ಬಂದಿದೆ. ನಿಂಘಟು ಬರೀ ಪದದ ಅರ್ಥ ತಿಳಿಸಿದರೆ ವಿಶ್ವಕೋಶ ಆ ವಿಷಯದ ಸಮಗ್ರ ಮಾಹಿತಿ ಒದಗಿಸುತ್ತದೆ’ ಎಂದರು.
ಪುಸ್ತಕ ಪರಿಚಯ
ಕೃತಿ: ವೈದ್ಯ ವಿಶ್ವಕೋಶ(3ನೇ ಆವೃತ್ತಿ)
ಲೇಖಕರು: ಡಾ.ಪಿ.ಎಸ್.ಶಂಕರ ಪ್ರಧಾನ ಸಂಪಾದಕರು ಪ್ರ
ಕಾಶನ: ಹಂಪಿ ಕನ್ನಡ ವಿ.ವಿ ಪ್ರಸಾರಾಂಗ
ಪುಟ: 876 ಬೆಲೆ; ₹1600
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.