ADVERTISEMENT

ಕೆಲಸ ಮಾಡಲಾಗದಿದ್ದರೆ ಬಿಟ್ಟು ಹೋಗಿ...

ಜಿ.ಪಂ. ಕೆಡಿಸಿ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 13:43 IST
Last Updated 11 ಜುಲೈ 2019, 13:43 IST
ಕಲಬುರ್ಗಿ ಜಿ.ಪಂ. ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಶಾಂತಪ್ಪ ಕೂಡಲಗಿ, ಶರಣಗೌಡ ಪಾಟೀಲ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಅಧ್ಯಕ್ಷೆ ಸುವರ್ಣಾ ಮಲಾಜಿ, ಸಿಇಒ ಡಾ.ರಾಜಾ ಪಿ, ಮುಖ್ಯ ಯೋಜನಾಧಿಕಾರಿ ಪ್ರವೀಣಪ್ರಿಯಾ ಇದ್ದಾರೆ –ಪ್ರಜಾವಾಣಿ ಚಿತ್ರ
ಕಲಬುರ್ಗಿ ಜಿ.ಪಂ. ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಶಾಂತಪ್ಪ ಕೂಡಲಗಿ, ಶರಣಗೌಡ ಪಾಟೀಲ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಅಧ್ಯಕ್ಷೆ ಸುವರ್ಣಾ ಮಲಾಜಿ, ಸಿಇಒ ಡಾ.ರಾಜಾ ಪಿ, ಮುಖ್ಯ ಯೋಜನಾಧಿಕಾರಿ ಪ್ರವೀಣಪ್ರಿಯಾ ಇದ್ದಾರೆ –ಪ್ರಜಾವಾಣಿ ಚಿತ್ರ   

ಕಲಬುರ್ಗಿ: ‘ಅಂಗನವಾಡಿ ಕೇಂದ್ರಗಳಿಗೆ ವಿತರಿಸುವ ಆಹಾರ ಧಾನ್ಯ ಕಳಪೆ ಗುಣಮಟ್ಟದ್ದಾಗಿರುವ ಬಗ್ಗೆ ಹಲವು ಬಾರಿ ನಿಮ್ಮ ಗಮನಕ್ಕೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ತಂದಿದ್ದಾರೆ. ಆದರೂ ನೀವು ಯಾರೊಬ್ಬರ ಮೇಲೆಯೂ ಕ್ರಮ ಕೈಗೊಂಡಿಲ್ಲ. ನಿಮ್ಮಿಂದ ಹುದ್ದೆ ನಿಭಾಯಿಸಲು ಸಾಧ್ಯವಾಗದಿದ್ದರೆ ಬಿಟ್ಟು ಹೋಗಿ...’

ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಅವರಿಗೆ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜಗೌಡ ಪಾಟೀಲ ಅವರು ಹೇಳಿದ ಮಾತು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವರಾಜ ಅವರ ಮಾತಿಗೆ ಜಿಲ್ಲಾ ಪಂಚಾಯಿತಿಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಶರಣಗೌಡ ಪಾಟೀಲ, ಶಾಂತಪ್ಪ ಕೂಡಲಗಿ ಅವರೂ ದನಿಗೂಡಿಸಿದರು.

ADVERTISEMENT

‘ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾಗಿ ವೇತನ ಬಟವಡೆಯಾಗುತ್ತಿಲ್ಲ ಎಂಬ ದೂರು ಬರುತ್ತಿವೆ. ಕಳಪೆ ಗುಣಮಟ್ಟದ ಆಹಾರ ಧಾನ್ಯ ಪೂರೈಕೆಯಾಗುತ್ತಿರುವ ಬಗ್ಗೆಯೂ ಆಕ್ಷೇಪಗಳು ಕೇಳಿ ಬಂದಿವೆ’ ಎಂದು ಸಿಇಒ ಡಾ.ರಾಜಾ ಪಿ. ಅವರು ಉಪನಿರ್ದೇಶಕ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ಕರ್ತವ್ಯಲೋಪಕ್ಕಾಗಿ ನೋಟಿಸ್‌ ನೀಡುವುದಾಗಿಯೂ ತಿಳಿಸಿದರು.

‘ಎಲ್ಲ ಇಲಾಖೆಗಳ ಪೈಕಿ ನಿಮ್ಮ ಇಲಾಖೆ ಅತ್ಯಂತ ಭ್ರಷ್ಟವಾಗಿದೆ. ಹಲವು ಬಾರಿ ನಾವು ನಿಮ್ಮ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೂ ತಿದ್ದಿಕೊಳ್ಳುತ್ತಿಲ್ಲ. ನಿಮ್ಮಿಂದ ಇಷ್ಟೊಂದು ದೊಡ್ಡ ಇಲಾಖೆಯನ್ನು ನಿಭಾಯಿಸಲು ಆಗುವುದಿಲ್ಲ. ನೀವು ಬಿಟ್ಟು ಹೋದರೆ ಬೇರೆಯವರಾದರೂ ಸಮರ್ಥವಾಗಿ ಕೆಲಸ ಮಾಡುತ್ತಾರೆ’ ಎಂದು ಶಿವರಾಜ ಪಾಟೀಲ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ರೆಡ್ಡಿ, ‘ಜಿಲ್ಲೆಯಲ್ಲಿ ಪ್ರಥಮ ದರ್ಜೆ ಅಧಿಕಾರಿಗಳ ಅಗತ್ಯವಿದೆ. ಆದರೆ, ನಾನೊಬ್ಬನೇ ನಿಭಾಯಿಸುತ್ತಿದ್ದೇನೆ. ಎಂಟು ಜನ ಸಿಬ್ಬಂದಿ ಇರಬೇಕಾಗಿದ್ದು ಕೇವಲ ಇಬ್ಬರೇ ಇದ್ದಾರೆ. ಉಳಿದ ಹುದ್ದೆಗಳ ಭರ್ತಿ ಆಗಿಲ್ಲ. ಹಲವು ವರ್ಷಗಳಿಂದ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿಲ್ಲ. ನಾನು ಬಂದ ಮೇಲೆ ಇಲಾಖೆ ಆಯುಕ್ತರು, ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದೇನೆ’ ಎಂದು ಸಮಜಾಯಿಷಿ ನೀಡಿದರು.

ರಸ್ತೆಯೇ ಮಾಯ: ‘ಜೇವರ್ಗಿ ತಾಲ್ಲೂಕಿನ ನೆಲೋಗಿ–ಹರವಾಳ ಗ್ರಾಮದಲ್ಲಿ ಇತ್ತೀಚೆಗೆ ನಿರ್ಮಿಸಿದ್ದ ರಸ್ತೆಯೇ ಮಾಯವಾಗಿದೆ. ಕಳಪೆ ಕಾಮಗಾರಿಯಿಂದಾಗಿ ಬೇಗನೇ ಕಿತ್ತುಹೋಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಶಿವರಾಜ ಪಾಟೀಲ ಮನವಿ ಮಾಡಿದರು.‌

ಸುಲ್ತಾನಪುರ–ವಿ.ಕೆ. ಸಲಗರ ಗ್ರಾಮಸ್ಥರೂ ಕಳಪೆ ಕಾಮಗಾರಿ ಆಗಿರುವ ಬಗ್ಗೆ ದೂರು ನೀಡಿದ್ದಾರೆ ಎಂದು ಶರಣಗೌಡ ಪಾಟೀಲ ಸಭೆಯಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ (ಪಿಎಂಜಿಎಸ್‌ವೈ)ಯ ಕಾರ್ಯನಿರ್ವಾಹಕ ಎಂಜಿನಿಯರ್‌, ‘ನಾನು ಬುಧವಾರವಷ್ಟೇ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುತ್ತೇನೆ’ ಎಂದರು.

ಗಂಗಾ ಕಲ್ಯಾಣ ಯೋಜನೆಯಡಿ ಪಂಪ್‌ಸೆಟ್‌ಗೆ ವಿದ್ಯುತ್‌ ಪೂರೈಕೆ ನೀಡುವಲ್ಲಿ ಕಳಪೆ ಸಾಧನೆ ಮಾಡಿದ ಜೆಸ್ಕಾಂನ ವಿವಿಧ ವಿಭಾಗಗಳ ಕಾರ್ಯನಿರ್ವಾಹಕ ಎಂಜಿನಿಯರುಗಳನ್ನು ಸಿಇಒ ತರಾಟೆಗೆ ತೆಗೆದುಕೊಂಡರು.

ರೈತರು 3 ಸಾವಿರ ಕೃಷಿ ಹೊಂಡಗಳನ್ನು ಕೊರೆಸಿದ್ದಾರೆ. ಆದರೂ ಅವರಿಗೆ ಏಕೆ ಕೃಷಿ ಇಲಾಖೆಯಿಂದ ಹಣ ಬಂದಿಲ್ಲ ಎಂದು ಶಾಂತಪ್ಪ ಕೂಡಲಗಿ ಪ್ರಶ್ನಿಸಿದರು.

ಇದಕ್ಕೆ ಉತ್ತರ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರತೇಂದ್ರನಾಥ ಸೂಗುರ, ‘ಸರ್ಕಾರದಿಂದ ₹ 5 ಕೋಟಿ ಬಂದಿದ್ದು, ಆ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಇನ್ನೂ ₹ 10 ಕೋಟಿ ಬರಬೇಕಿತ್ತು. ಈ ತಿಂಗಳು ಬಿಡುಗಡೆಯಾಗುವ ಭರವಸೆ ಇದೆ’ ಎಂದರು.

ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶದ ಕುರಿತು ಉತ್ತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ, ಮುಧೋಳದಲ್ಲಿ 15 ಹಾಗೂ ಮಾಡಬೂಳದಲ್ಲಿ 20 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದರು. ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಪ್ರವೀಣಪ್ರಿಯಾ, ‘ಮುಧೋಳ ದೊಡ್ಡ ಗ್ರಾಮ. ಆದರೂ ಇಷ್ಟೊಂದು ಕಡಿಮೆ ಮಕ್ಕಳು ಪ್ರವೇಶ ಪಡೆದಿದ್ದಾರೆಯೇ’ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಎಲ್‌ಕೆಜಿ ಹಂತದಿಂದ ಆ ಶಾಲೆಯಲ್ಲಿ ಓದಿದವರೇ 1ನೇ ತರಗತಿಗೆ ಪ್ರವೇಶ ಪಡೆಯುತ್ತಾರೆ. ಹಾಗಾಗಿ, ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಉಳಿದ ಶಾಲೆಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.

ಎಸ್ಸಿ, ಎಸ್ಟಿ ಅನುದಾನ: ಪ್ಯಾಕೇಜ್‌ ಟೆಂಡರ್‌ಗೆ ಆಕ್ಷೇಪ

‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಓಣಿಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಗೆ ಬಂದ ಅನುದಾನವನ್ನು ಪ್ಯಾಕೇಜ್‌ ಟೆಂಡರ್‌ ಏಕೆ ಮಾಡುತ್ತೀರಿ’ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಪ್ಪ ಕೂಡಲಗಿ ಆಕ್ಷೇಪಿಸಿದರು.

ಹಾಗೆಯೇ ಟೆಂಡರ್‌ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ನಮಗೆ ನಿರ್ದೇಶನವಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಒ, ಮಾರ್ಗಸೂಚಿ, ಕೈಗೆತ್ತಿಕೊಂಡ ಕಾಮಗಾರಿಗಳ ವಿವರಗಳನ್ನು ಕೊಡಿ ಎಂದು ಸೂಚನೆ ನೀಡಿದರು.

ಕೈಕೊಟ್ಟ ವಿದ್ಯುತ್‌

ಸಭೆ ನಡೆಯುತ್ತಿರುವಾಗಲೇ ಮೂರು ಬಾರಿ ವಿದ್ಯುತ್‌ ಕೈ ಕೊಟ್ಟಿತು. ತಕ್ಷಣ ಜನರೇಟರ್‌ ಸಹಾಯದಿಂದ ವಿದ್ಯುತ್‌ ಸಂಪರ್ಕ ಕಲ್ಪಿಸಲಾಯಿತು. ಎರಡನೇ ಬಾರಿ ವಿದ್ಯುತ್‌ ಕಡಿತವಾದಾಗ ಸಿಇಒ ಅವರು ಮೈಕ್‌ ಇಲ್ಲದೆಯೇ ಮಾತನಾಡಿದರು. ಮತ್ತೊಂದು ಬಾರಿ ಗಂಗಾ ಕಲ್ಯಾಣ ಯೋಜನೆ ಕುರಿತು ಜೆಸ್ಕಾಂ ಎಂಜಿನಿಯರ್‌ ಮಾತನಾಡುವಾಗಲೇ ವಿದ್ಯುತ್‌ ಕೈಕೊಟ್ಟಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.