ADVERTISEMENT

ಅಭಿವೃದ್ಧಿಯ ನಿರೀಕ್ಷೆಯಲ್ಲಿ ಕುಂಚಾವರಂ

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 18:55 IST
Last Updated 18 ಜುಲೈ 2018, 18:55 IST

ಚಿಂಚೋಳಿ: ತೆಲಂಗಾಣ ಗಡಿಗೆ ಹೊಂದಿಕೊಂಡ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾದ ಕುಂಚಾವರಂ ಮೂ ಲಸೌಕರ್ಯಗಳಿಂದ ವಂಚಿತವಾಗಿದೆ.

ಸುಮಾರು 7ರಿಂದ 8 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಪ್ರೌಢ ಶಾಲೆ, ಪ್ರಾಥಮಿಕ ಶಾಲೆಗಳು (ಕನ್ನಡ ಮತ್ತು ತೆಲುಗು ಮಾಧ್ಯಮ), ಅರಣ್ಯ ಕಚೇರಿ, ಪೊಲೀಸ್‌ ಠಾಣೆ, ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯ, ಮತ್ತು ಗ್ರಾಮ ಪಂಚಾಯಿತಿ ಕಚೇರಿ ಇವೆ. ಕುಂಚಾವರಂ ಗ್ರಾಮವು ಸ್ವಾತಂತ್ರ್ಯ ಹೋರಾಟದ ಕುರುಹು ಹೊಂದಿರುವ ಗ್ರಾಮವಾಗಿದೆ.

‘ಮಾಜಿ ಪ್ರಧಾನ ಜಗನ ಮೋಹನರೆಡ್ಡಿ ಕಸ್ತೂರಿ ವೃತ್ತದಲ್ಲಿ ಬರುವ ಮುಖ್ಯ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿ ಮಳೆ ನೀರು ಸಂಗ್ರಹವಾಗುತ್ತಿದೆ. ವಾರದ ಸಂತೆ ನಡೆಯುವ ಸ್ಥಳದಲ್ಲಿ, ಸಂತೆಗೆ ಹೋಗುವ ರಸ್ತೆ ಮತ್ತು ಜಗನಮೋಹನರೆಡ್ಡಿ ವೃತ್ತದಿಂದ ವಸತಿ ನಿಲಯದವರೆಗೆ ರಸ್ತೆಯು ಕೆಟ್ಟಿದೆ. ಮಳೆಯಾದಗಲೆಲ್ಲ ಕೆಸರು ಕೊಚ್ಚೆ ನಿರ್ಮಾಣವಾಗುತ್ತದೆ. ಹೊಂಡಗಳನ್ನು ಮುಚ್ಚಲು ಮುರುಮ್‌ ಬದಲು ಸೇಡಿ ಮಣ್ಣು ಹಾಕಿದ್ದರಿಂದ ಅದು ಕೆಸರು ಕೊಚ್ಚೆಯಂತಾಗಿ ನಡೆಯಲು ಬಾರದಂತಾಗಿದೆ’ ಎಂದು ಕುಂಚಾವರಂನ ವಾಜೀದ್‌ ದೂರಿದ್ದಾರೆ.

ADVERTISEMENT

ಸಂತೆಯ ಸ್ಥಳದಿಂದ ಪೆಂಟಪ್ಪ ಕುಂಬಾರ ಮನೆಯವರೆಗೆ, ವೆಂಕಟರೆಡ್ಡಿ ಮನೆಯಿಂದ ಹಳೆಯ ಮಸೀದಿವರೆಗೆ, ಮುಸ್ಲಿಂ ಬಡಾವಣೆ ಹಾಗೂ ಯಾದಗಿರಿ ನಾಯಕೋಡಿ ಮನೆಯಿಂದ ಜಗು ನಾಯಕೋಡಿ ಮನೆಯವರೆಗೆ ಸಿಸಿ ರಸ್ತೆ ಮತ್ತು ಚರಂಡಿ ಹಾಳಾಗಿದ್ದು ಕಾಯಕಲ್ಪಕ್ಕೆ ಕಾಯುತ್ತಿವೆ.

‘ಕುಂಚಾವರಂ ಮೂಲ ಸೌಕರ್ಯ ದಿಂದ ವಂಚಿತ ವಾಗಿರುವುದನ್ನು ಗಮನಿಸಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ₹1 ಕೋಟಿ ಮಂಜೂರು ಮಾಡಿಸಿ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ’ ಎಂದು ಶಾಸಕ ಡಾ. ಉಮೇಶ ಜಾಧವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.