ಶಾಲೆ
(ಸಾಂಕೇತಿಕ ಚಿತ್ರ)
ಕಲಬುರಗಿ: ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು, ಕಂದಾಯ ವಿಭಾಗದ ಕೇಂದ್ರ ಸ್ಥಾನ, ಕೆಕೆಆರ್‌ಡಿಬಿ ಪ್ರಧಾನ ಕಚೇರಿ ಇರುವ ಕಲಬುರಗಿ ನಗರದ ಸರ್ಕಾರಿ ಶಾಲೆಗಳೇ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ ಎಂಬ ಆಘಾತಕಾರಿ ಮಾಹಿತಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ನಡೆಸಿದ ಕ್ಷೇತ್ರಾಧ್ಯಯನದಿಂದ ಹೊರಬಿದ್ದಿದೆ.
ಕೇಂದ್ರೀಯ ವಿ.ವಿ.ಯ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಕಿರಣ್ ಗಾಜನೂರು, ವಿದ್ಯಾರ್ಥಿಗಳಾದ ದಾಸ್ಯಾಪು ಶ್ರೀಜಾ, ಜಿ. ಕುಂದನಶ್ರೀ ಅವರು ಬೆಂಗಳೂರಿನ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರ (ಸಿಇಎಸ್‌ಎಸ್)ನ ಸಹಯೋಗದಲ್ಲಿ ಕ್ಷೇತ್ರಾಧ್ಯಯನ ಕೈಗೊಂಡ ವೇಳೆ ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಶಿಕ್ಷಕರ ಬೋಧನಾ ಪ್ರಕ್ರಿಯೆಗೆ ಪೂರಕವಾದ ಮೂಲಸೌಕರ್ಯಗಳ ಕೊರತೆ ಇದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಹಾಗೂ ಬಿಸಿಯೂಟ ಪೂರೈಕೆಯಲ್ಲಿನ ಲೋಪಗಳನ್ನು ತಂಡವು ಗುರುತಿಸಿದೆ. ಜೊತೆಗೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಬೋಧಕ ಸಿಬ್ಬಂದಿಗೆ ಸಮರ್ಪಕ ಶೌಚಾಲಯ ವ್ಯವಸ್ಥೆ, ಶಿಕ್ಷಕಿಯರಿಗೆ ಪ್ರತ್ಯೇಕ ಕೊಠಡಿ ಇಲ್ಲದೇ ಇರುವುದರಿಂದ ಬೋಧನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂಬುದನ್ನು ಸಂಶೋಧನಾ ತಂಡವು ಗುರುತಿಸಿದೆ.
ಕಲಬುರಗಿ ನಗರದಲ್ಲಿನ ಒಟ್ಟು 12 ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲರು ಮತ್ತು 61 ಶಿಕ್ಷಕರ ಅಭಿಪ್ರಾಯ ಹಾಗೂ ಶಾಲೆಗಳಲ್ಲಿ ನಡೆಸಿದ ಕ್ಷೇತ್ರಾಧ್ಯಯನ ಮತ್ತು ಅವಲೋಕನದ ಮಾಹಿತಿಯನ್ನು ಆಧರಿಸಿ ವಿಶ್ಲೇಷಿಸಲಾಗಿದೆ.
ಇತ್ತೀಚೆಗೆ ಪ್ರಕಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆಯ ಕೊನೆಯ ಸ್ಥಾನವನ್ನು ಪಡೆದುಕೊಂಡ ಹಿನ್ನೆಲೆಯಲ್ಲಿ ಈ ಕ್ಷೇತ್ರಾಧ್ಯಯನ ಮಹತ್ವ ಪಡೆದುಕೊಂಡಿವೆ.
ವಿದ್ಯಾರ್ಥಿಗಳ ಕಲಿಕೆಯನ್ನು ಸುಲಭಗೊಳಿಸಲು ಅಗತ್ಯವಾದ ಭೌತಿಕ ಸೌಲಭ್ಯ ಹಾಗೂ ಡಿಜಿಟಲ್ ಸಂಪನ್ಮೂಲಗಳ ಬಳಕೆಗೆ ವಿದ್ಯಾರ್ಥಿಗಳಿಗೆ ಮುಕ್ತವಾದ ಅವಕಾಶ ಇರಬೇಕು. ಏಕೆಂದರೆ ‘ಪರಿಣಾಮಕಾರಿ ಕಲಿಕಾ ಪರಿಸರ’ ಎನ್ನುವುದು ಆ ಶಾಲೆಯಲ್ಲಿ ಲಭ್ಯವಿರುವ ಡಿಜಿಟಲ್ ತಂತ್ರಜ್ಞಾನ ಮತ್ತು ಭೌತಿಕ ಮೂಲಸೌಕರ್ಯದ ಉಪ ಉತ್ಪನ್ನವಾಗಿದೆ ಎಂಬ ಅಂಶವನ್ನು ವಿಶ್ವಬ್ಯಾಂಕ್ ವ್ಯಕ್ತಪಡಿಸಿದೆ. ಈ ಸಂಶೋಧನೆಗಾಗಿ ಕಲಿಕಾ ವಾತಾವರಣಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ‘ಭೌತಿಕ ಸಂಪನ್ಮೂಲಗಳು’ ಹಾಗೂ ‘ತಾಂತ್ರಿಕ ಸಂಪನ್ಮೂಲಗಳು’ ಎಂದು ವಿಂಗಡಿಸಿಕೊಂಡು ಕಲಬುರಗಿ ಸರ್ಕಾರಿ ಶಾಲೆಗಳಲ್ಲಿ ಅವುಗಳ ಲಭ್ಯತೆ ಯಾವ ಪ್ರಮಾಣದಲ್ಲಿ ಇವೆ ಎಂಬುದನ್ನು ವಿಶ್ಲೇಷಿಸಲಾಗಿದೆ ಎನ್ನುತ್ತಾರೆ ಪ್ರೊ. ಕಿರಣ ಗಾಜನೂರು.
ಬಹುತೇಕ ಶಾಲೆಗಳಲ್ಲಿ ಕಂಪ್ಯೂಟರ್ ಪ್ರಿಂಟರ್ ಎಲ್‌ಸಿಡಿ ಪ್ರೊಜೆಕ್ಟರ್ ಇತ್ಯಾದಿಗಳು ಸುಸ್ಥಿತಿಯಲ್ಲಿ ಇಲ್ಲ. ಬಹುತೇಕ ಕಡೆ ಇಂಟರ್ನೆಟ್ ಸಂಪರ್ಕವೇ ಇಲ್ಲದಿರುವುದು ಕಳವಳಕಾರಿ ಅಂಶಪ್ರೊ.ಕಿರಣ ಗಾಜನೂರು ಸಂಶೋಧನಾ ತಂಡದ ಮುಖ್ಯಸ್ಥ
ಕಲಬುರಗಿ ನಗರದ 12 ಸರ್ಕಾರಿ ಪ್ರೌಢಶಾಲೆಗಳಲ್ಲಿ 3 ಶಾಲೆಗಳು ಉತ್ತಮ ಮೂಲಸೌಕರ್ಯ ಹೊಂದಿವೆ. 4 ಶಾಲೆಗಳು ಕನಿಷ್ಠ ಕಲಿಕಾ ಸೌಕರ್ಯವನ್ನು ಹೊಂದಿವೆ. 5 ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆದಾಸ್ಯಾಪು ಶ್ರೀಜಾ ಸಂಶೋಧನಾ ತಂಡದ ಸದಸ್ಯೆ
ಶೇ 90ಕ್ಕಿಂತ ಅಧಿಕ ಕೊಠಡಿಗಳಿಗೆ ಸರಿಯಾದ ಗಾಳಿ ಬೆಳಕಿನ ಲಭ್ಯತೆ ಇದೆ. ಎಲ್ಲಾ ಕೊಠಡಿಗಳು ಆಸನಗಳು ಬೋಧನಾ ಸಾಧನಗಳು ಮತ್ತು ಕಸದ ಬುಟ್ಟಿಗಳನ್ನು ಹೊಂದಿವೆ. ಕೆಲವು ಕೊಠಡಿಗಳಲ್ಲಿ ಫ್ಯಾನ್ ಇಲ್ಲ ಮತ್ತು ಪಿಠೋಪಕರಣಗಳು ಸುಸ್ಥಿತಿಯಲ್ಲಿ ಇಲ್ಲಜಿ. ಕುಂದನ ಶ್ರೀ ಸಂಶೋಧನಾ ತಂಡದ ಸದಸ್ಯೆ
ಶಾಲೆಗಳಲ್ಲಿ ಶೇ 59ರಷ್ಟು ಗ್ರಂಥಾಲಯಕ್ಕೆ ಅಗತ್ಯವಾದ ಸ್ಥಳಾವಕಾಶದ ಕೊರತೆಯನ್ನು ಎದುರಿಸುತ್ತಿದೆ. ಶೇ 66ರಷ್ಟು ಕಪಾಟುಗಳು ಮತ್ತು ಆಸನಗಳಂತಹ ಮೂಲಸೌಕರ್ಯಗಳಿಲ್ಲ. ಶೇ 74ರಷ್ಟು ಶಾಲೆಗಳಲ್ಲಿ ಕನಿಷ್ಠ ಅಧ್ಯಯನ ಕೊಠಡಿಗಳು ಗ್ರಂಥಾಲಯದ ಭಾಗವಾಗಿಲ್ಲ ಮಧ್ಯಾಹ್ನದ ಬಿಸಿಯೂಟ ವಿತರಿಸುವ ವ್ಯವಸ್ಥೆ ಅಸಮರ್ಪಕವಾಗಿದೆ ಮತ್ತು ಶುಚಿತ್ವವನ್ನು ಕಾಪಾಡುಕೊಳ್ಳುವಲ್ಲಿ ಬಹತೇಕ ಶಾಲೆಗಳು ವಿಫಲವಾಗಿವೆ
ಎಲ್ಲಾ ಶಾಲೆಗಳಲ್ಲಿ ಕುಡಿಯುವ ನೀರಿನ ನಿರ್ವಹಣೆ ಕಳಪೆಯಾಗಿದೆ. ಬಹುತೇಕ ಶಾಲೆಗಳಲ್ಲಿ ನೀರು ಶುದ್ಧಿಕರಣ ವ್ಯವಸ್ಥೆಯೂ ದುರಸ್ತಿಯಲ್ಲಿದೆ
ಶಿಕ್ಷಕರಿಗೆ ಮುಖ್ಯವಾಗಿ ಮಹಿಳಾ ಶಿಕ್ಷಕಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಇಲ್ಲದಿರುವುದು ಅವರ ಕಾರ್ಯಕ್ಷಮತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ
ಅಂಗವಿಕಲ ಮಕ್ಕಳಿಗೆ ಪೂರಕವಾದ ಶೌಚಾಲಯ ವ್ಯವಸ್ಥೆ ಯಾವ ಶಾಲೆಯಲ್ಲಿಯೂ ಇಲ್ಲ
ಯಾವುದೇ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ನಿರ್ವಹಣಾ ವ್ಯವಸ್ಥೆಯೇ ಇಲ್ಲದಿರುವುದು ಹೆಣ್ಣು ಮಕ್ಕಳ ಹಾಜರಾತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ
ಶಾಲೆಗಳಲ್ಲಿ ಕ್ರೀಡಾ ಸಲಕರಣೆಗಳಿವೆ. ಆದರೆ, ಅವುಗಳ ನಿರ್ವಹಣೆ ಅತ್ಯಂತ ಕಳಪೆಯಾಗಿದೆ
ಶೇ 50ರಷ್ಟು ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಇಲ್ಲದಿರುವುದು ಸಂಶೋಧನೆಯಲ್ಲಿ ಕಂಡು ಬಂದಿದೆ. ಇರುವ ಶಾಲೆಗಳಲ್ಲಿಯೂ ಅದಕ್ಕಾಗಿ ಪ್ರತ್ಯೇಕ ಕೊಠಡಿ ಇಲ್ಲ. ಶೇ 72.7ರಷ್ಟು ಶಾಲೆಗಳಲ್ಲಿ ಪ್ರಯೋಗಾಲಯವನ್ನು ನಿರ್ವಹಿಸಲು ಸಿಬ್ಬಂದಿ ನಿಯೋಜನೆಗೊಂಡಿಲ್ಲ. ಗ್ರಂಥಾಲಯದಲ್ಲಿ ಗ್ರಂಥಪಾಲಕರಿಲ್ಲ.
ಎರಡು ಶಾಲೆಗಳು ಒಂದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿದ್ದು, ಇದರಿಂದ ಅವುಗಳ ಕಾರ್ಯನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.