ADVERTISEMENT

ವಕೀಲರ ಅರ್ಹತಾ ಪರೀಕ್ಷೆಗೆ ಹಾಲ್‌ ಟಿಕೆಟ್ ವಿಳಂಬಕ್ಕೆ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 11:24 IST
Last Updated 3 ಫೆಬ್ರುವರಿ 2023, 11:24 IST
ವಿಲಾಸಕುಮಾರ್
ವಿಲಾಸಕುಮಾರ್   

ಕಲಬುರಗಿ: ಎಲ್‌ಎಲ್‌.ಬಿ. ಪದವಿ ಪೂರ್ಣಗೊಳಿಸಿದ ಬಳಿಕ ವಕೀಲಿಕೆ ಆರಂಭಿಸುವುದಕ್ಕೂ ಮುನ್ನ ಅಖಿಲ ಭಾರತ ವಕೀಲರ ಪರಿಷತ್ತು (ಬಾರ್ ಕೌನ್ಸಿಲ್) ನಡೆಸುವ ಅರ್ಹತಾ ಪರೀಕ್ಷೆಯ ಹಾಲ್‌ಟಿಕೆಟ್‌ಗಳು ತಡವಾಗಿ ಸಿಕ್ಕಿದ್ದರಿಂದ ಅಭ್ಯರ್ಥಿಗಳು ಪರೀಕ್ಷೆ ನಡೆಯುವ ನಗರಗಳಿಗೆ ತೆರಳಲು ತೊಂದರೆಯಾಗಿದೆ ಎಂದು ಹಿರಿಯ ವಕೀಲ ಪಿ. ವಿಲಾಸಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಾಜ್ಯದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ಬಾರ್ ಕೌನ್ಸಿಲ್ ಪರೀಕ್ಷೆಗಳನ್ನು ನಡೆಸುತ್ತದೆ. ಕೊರೊನಾದಿಂದ ಎರಡು ವರ್ಷ ಪರೀಕ್ಷೆಗಳೇ ನಡೆದಿರಲಿಲ್ಲ. ಇದೇ 5ರಂದು ಪರೀಕ್ಷೆ ನಡೆಯಲಿದೆ. ಗುರುವಾರವಷ್ಟೇ ಹಾಲ್‌ ಟಿಕೆಟ್‌ಗಳನ್ನು ವೆಬ್‌ಸೈಟ್‌ನಲ್ಲಿ ಬಿಟ್ಟಿದ್ದರಿಂದ ಪ್ರಯಾಣ ಹಾಗೂ ವಸತಿ ವ್ಯವಸ್ಥೆಗೆ ತೊಂದರೆಯಾಗಲಿದೆ. ಪರೀಕ್ಷೆಗಳನ್ನು ಬೆಂಗಳೂರು, ಹುಬ್ಬಳ್ಳಿ ಬದಲು ರಾಜ್ಯದ ಪ್ರತಿ ಕಂದಾಯ ವಿಭಾಗಗಳಲ್ಲಿ ನಡೆಸಬೇಕು. ಮುಂಚಿತವಾಗಿಯೇ ಹಾಲ್‌ ಟಿಕೆಟ್‌ಗಳನ್ನು ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಅಲ್ಲದೇ, ಬಾರ್ ಕೌನ್ಸಿಲ್ ನಡೆಸುವ ಪರೀಕ್ಷೆಗೆ ಸಾಮಾನ್ಯ ವರ್ಗದವರಿಗೆ ₹ 3600 ಹಾಗೂ ಪರಿಶಿಷ್ಟ ಸಮುದಾಯದವರಿಗೆ ₹ 2500 ಶುಲ್ಕ ವಿಧಿಸಲಾಗಿದೆ. ಇದು ದುಬಾರಿ ಶುಲ್ಕವಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರ ನಡೆಸುವ ಯಾವ ‍ಪರೀಕ್ಷೆಗಳಿಗೂ ಇಷ್ಟು ಶುಲ್ಕವಿಲ್ಲ. ಬಾರ್ ಕೌನ್ಸಿಲ್ ಭಾವಿ ವಕೀಲರನ್ನು ಶೋಷಿಸುತ್ತಿರುವುದು ಸರಿಯಲ್ಲ ಎಂದು ವಿಲಾಸಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.