ಜೇವರ್ಗಿ: ತಾಲ್ಲೂಕಿನ ರೇವನೂರ ಗ್ರಾಮದ ಹೊಲವೊಂದರಲ್ಲಿ ಮಂಗಳವಾರ ಬೆಳಿಗ್ಗೆ ಎರಡು ಚಿರತೆಗಳು ಕಂಡುಬಂದಿದ್ದು, ಅದರಲ್ಲಿ ಒಂದು ಚಿರತೆ ಕುರಿಗಾಹಿ ಮೇಲೆ ದಾಳಿ ನಡೆಸಿದ ಪರಿಣಾಮ ಆತನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ನಿಂಗಪ್ಪ ಮಾಳಪ್ಪ ಆಲೂರ (45) ಚಿರತೆ ದಾಳಿಗೊಳಗಾಗಿದ್ದು, ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳವಾರ ಭೀಮು ಸಾಲೋಟಗಿ ಎಂಬುವವರು ತಮ್ಮ ಮೆಕ್ಕೆಜೋಳದ ಹೊಲದಲ್ಲಿ ಮಲಗಿದ್ದ ಸಂದರ್ಭದಲ್ಲಿ ನಾಯಿಗಳು ಬೊಗಳಲು ಪ್ರಾರಂಭಿಸಿವೆ. ತಕ್ಷಣ ಎದ್ದು ನೋಡಿದಾಗ ಎರಡು ಚಿರತೆಗಳು ಹೋಗುವುದನ್ನು ಗಮನಿಸಿ ಗ್ರಾಮಸ್ಥರಿಗೆ ಫೋನ್ ಕರೆ ಮಾಡಿ ತಿಳಿಸಿದ್ದಾರೆ.
50ಕ್ಕೂ ಹೆಚ್ಚು ಜನ ಬಡಿಗೆ ಹಿಡಿದು ಹೊಲಕ್ಕೆ ಕೂಗಾಡುತ್ತಾ ಬಂದಾಗ ಎರಡೂ ಚಿರತೆಗಳು ಓಡಲು ಪ್ರಾರಂಭಿಸಿವೆ. ಎದುರಿಗೆ ಬಂದ ಕುರಿಗಾಹಿ ನಿಂಗಪ್ಪ ಆಲೂರ ಅವರ ಸೊಂಟದ ಬಳಿ ಕಚ್ಚಿ ಗಾಯಗೊಳಿಸಿ ಓಡಿಹೋಗಿವೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಸಂಜಯಕುಮಾರ ಚವ್ಹಾಣ, ಉಪವಲಯ ಅರಣ್ಯಾಧಿಕಾರಿ ಸಿದ್ದುಗೌಡ ಪಾಟೀಲ ಹಾಗೂ ಗಸ್ತು ಅರಣ್ಯ ಪಾಲಕ ಮಲ್ಲಿನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿರತೆಗಳ ಸೆರೆಗಾಗಿ ಕ್ಯಾಮರಾ ಟ್ರ್ಯಾಪ್ ಹಾಗೂ ಬೋನು ಇರಿಸಲಾಗಿದೆ. ಚಿರತೆಗಳು ಕಂಡು ಬಂದ ಹಿನ್ನಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
‘ಚಿರತೆಗಳ ಸೆರೆಗಾಗಿ ಬೋನು ಇರಿಸಲಾಗಿದ್ದು, ರೇವನೂರ, ಹರನೂರ, ಮಾವನೂರ, ಹಂಚಿನಾಳ, ಸೊನ್ನ ಗ್ರಾಮಗಳ ಜನರು ರಾತ್ರಿ ಒಬ್ಬರೇ ಓಡಾಡಬಾರದು. ರೈತರು ಜಮೀನುಗಳಿಗೆ ನೀರು ಹಾಯಿಸಲು ರಾತ್ರಿ ಸಮಯದಲ್ಲಿ ಹೋಗಬಾರದು’ ಎಂದು ವಲಯ ಅರಣ್ಯಾಧಿಕಾರಿ ಸಂಜಯಕುಮಾರ ಚವ್ಹಾಣ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.