ADVERTISEMENT

ಸೇಡಂ: ಕಲಿಕೆಗೆ ಪೂರಕ ಈ ವಸತಿ ಶಾಲೆ!

ಸುಸಜ್ಜಿತ ಕಟ್ಟಡದಲ್ಲಿ ಪಾಠ; ಸಮಸ್ಯೆಗಳಿಂದ ಮುಕ್ತರಾದ ಮೊರಾರ್ಜಿ ವಸತಿ ಶಾಲೆ ಮಕ್ಕಳು

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 4:16 IST
Last Updated 2 ಜುಲೈ 2022, 4:16 IST
ಮೊರಾರ್ಜಿ ದೇಸಾಯಿ ಶಾಲೆಯ ಗ್ರಂಥಾಲಯದಲ್ಲಿ ಅಧ್ಯಯನನಿರತ ವಿದ್ಯಾರ್ಥಿಗಳು
ಮೊರಾರ್ಜಿ ದೇಸಾಯಿ ಶಾಲೆಯ ಗ್ರಂಥಾಲಯದಲ್ಲಿ ಅಧ್ಯಯನನಿರತ ವಿದ್ಯಾರ್ಥಿಗಳು   

ಸೇಡಂ: ಸುಸಜ್ಜಿತ ಕಟ್ಟಡ, ಆಟದ ಮೈದಾನ, ಶೌಚಾಲಯ, ಕುಡಿಯುವ ನೀರು, ವಿದ್ಯುತ್‌ ವ್ಯವಸ್ಥೆ, ಹಾಗೂ ಸಮರ್ಪಕ ಕೊಠಡಿ ಸೌಲಭ್ಯ ಹೊಂದಿರುವ ತಾಲ್ಲೂಕಿನ ಆಡಕಿ ಗ್ರಾಮದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯು, ತಾಲ್ಲೂಕಿನ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವಾತಾವರಣ ಒದಗಿಸುವ ಮೂಲಕ ಗಮನ ಸೆಳೆಯುತ್ತಿದೆ.

ಗ್ರಾಮದ ಹೊರವಲಯದಲ್ಲಿ 13 ಎಕರೆ ಪ್ರದೇಶದಲ್ಲಿ ₹ 17 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡವು ಕಳೆದ ಎರಡು ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

ವಸತಿ ಶಾಲೆಯಲ್ಲಿ ಗ್ರಂಥಾಲಯ, ತರಗತಿ ಕೋಣೆಗಳು-5, ಕಂಪ್ಯೂಟರ್-1, ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ-2, ಸಂಗ್ರಹ ಕೋಣೆ-1, ಪ್ರಾಚಾರ್ಯರ ಕೋಣೆ-1, ಸಿಬ್ಬಂದಿ-1, ಕಚೇರಿ-1, ಯೋಗಾ ತರಗತಿ ಕೋಣೆ ಸೇರಿ ಒಟ್ಟು 14 ಕೋಣೆಗಳ ಕಲಿಕಾ ಕಟ್ಟಡವಿದ್ದು, ಆಟದ ಮೈದಾನ ಬಹಳ ವಿಸ್ತಾರವಾಗಿದೆ.

ADVERTISEMENT

ಅಲ್ಲದೇ ವಿದ್ಯಾರ್ಥಿಗಳ ವಸತಿಗಾಗಿ ಪ್ರತಿ ಕೋಣೆಯಲ್ಲಿ 15 ವಿದ್ಯಾರ್ಥಿಗಳಂತೆ ವಿದ್ಯಾರ್ಥಿನಿಯರಿಗಾಗಿ 9, ವಿದ್ಯಾರ್ಥಿ ಗಳಿಗೆ 9 ಕೋಣೆಗಳಿವೆ. ಅಲ್ಲದೇ 250 ವಿದ್ಯಾರ್ಥಿಗಳು ಕುಳಿತು ಊಟ ಮಾಡುವ ಬೃಹತ್ ಊಟದ ಸಭಾಂಗಣವಿದೆ. ಜತೆಗೆ ಶಿಕ್ಷಕರ ವಸತಿಗೆ 8 ಕೋಣೆಗಳಿದ್ದು, ಬೋಧಕೇತರ ಸಿಬ್ಬಂದಿಗಳು ತಂಗಲು ಕೊಠಡಿ ವ್ಯವಸ್ಥೆಯಿದೆ. ಸುಂದರವಾದ ವಾತಾವರಣದಲ್ಲಿ ಶಾಲಾ ಕಟ್ಟಡ ನಿರ್ಮಾಣವಾಗಿದೆ. ಈಗ ತೊಂದರೆ ಇಲ್ಲ’ ಎನ್ನುತ್ತಾರೆ ಅಲ್ಲಿನ ಶಿಕ್ಷಕ ಬಸವರಾಜ ಮದರಕಿ ಮತ್ತು ನಿಲಯ ಪಾಲಕ ಕೇಶವ ನಾಯಕ.

‘ಸದ್ಯ ಬಾಡಿಗೆ ಕಟ್ಟಡದಿಂದ ಮುಕ್ತಿ ದೊರೆತಿದ್ದು, ಸಮಸ್ಯೆಗಳಿಂದ ದೂರವಿದ್ದೇವೆ. ಆದರೆ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೆಂಚ್‌ ಹಾಕಿಕೊಟ್ಟರೆ ಅನುಕೂಲವಾಗುತ್ತದೆ’ ಎಂದು ಶಾಲೆಯ ಪ್ರಾಚಾರ್ಯ ಸುರೇಶ ಅಲ್ದರ್ತಿ ತಿಳಿಸಿದರು.

‘ಈ ಹಿಂದೆ ಈ ವಸತಿ ಶಾಲೆಯನ್ನು ಖಾಸಗಿ ಕಟ್ಟಡವೊಂದರಲ್ಲಿ ನಡೆಸಲಾಗು ತ್ತಿತ್ತು. ಅಲ್ಲಿ ಸ್ಥಳದ ಸಮಸ್ಯೆ, ಕೋಣೆಗಳ ಸಮಸ್ಯೆ ಸೇರಿದಂತೆ ವಿದ್ಯಾರ್ಥಿಗಳ ಓದಿಗೆ ಅನೇಕ ತೊಂದರೆಗಳಿದ್ದವು. ಆದರೆ ಈಗ ಆಡಕಿ ಗ್ರಾಮದ ಹೊರವಲಯದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಆಗಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ವಾಗಿದೆ’ ಎಂದು ಪಾಲಕ ಅಶೋಕ ಫಿರಂಗಿ ತಿಳಿಸಿದರು.

ಶಾಲೆಗೆ ಒಟ್ಟು 13 ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ 12 ಭರ್ತಿಯಾಗಿವೆ. ಇಂಗ್ಲಿಷ್‌ ಶಿಕ್ಷಕರ ಕೊರತೆಯಿದ್ದು, ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ‘ವಿದ್ಯುತ್, ನೀರಿನ, ಮೈದಾನ ಸೇರಿ ಯಾವುದೇ ತೊಂದರೆಯಿಲ್ಲ. ಆದರೆ ಶಾಲೆಗೆ ಬರಲು ಕಾಂಕ್ರಿಟ್‌ ರಸ್ತೆ ಮತ್ತು ಕುಳಿತುಕೊಳ್ಳಲು ಬೆಂಚ್ ಬೇಕು’ ಎನ್ನುವುದು ವಿದ್ಯಾರ್ಥಿಗಳ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.