ಕಲಬುರಗಿ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಕನಿಷ್ಠ ಫಲಿತಾಂಶ ಪಡೆದಿವೆ. ಈ ಭಾಗದ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಆಸಕ್ತಿ ತೋರದ ಕಾರಣ ಬಹುತೇಕ ಶಾಲೆಗಳು ಅತಿಥಿಗಳನ್ನೇ ನೆಚ್ಚಿಕೊಂಡಿವೆ. ಬೇರೆ ಅಂಶಗಳ ಕಾರಣಕ್ಕೂ ಫಲಿತಾಂಶ ಕುಸಿದಿದ್ದರೂ ಶಿಕ್ಷಕರ ಕೊರತೆಯೇ ಮುಖ್ಯ ಕಾರಣ ಎನ್ನುವುದು ಅಧಿಕಾರಿಗಳ ಅಂಬೋಣ.
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿರುವ ಪ್ರೌಢಶಾಲೆಗಳು ಕಾಯಂ ಶಿಕ್ಷಕರ ಕೊರತೆ ಎದುರಿಸುತ್ತಿರುವುದನ್ನು ಇಲಾಖೆ ಅಂಕಿ–ಅಂಶಗಳು ಪ್ರತಿಫಲಿಸುತ್ತವೆ. ಏಳು ಜಿಲ್ಲೆಗಳಲ್ಲಿ ವಿವಿಧ ವಿಷಯಗಳ 4,101 ಹುದ್ದೆಗಳು ಖಾಲಿ ಇವೆ. 11,745 ಹುದ್ದೆಗಳು ಮಂಜೂರಾಗಿದ್ದು 7,644 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ.
ರಾಯಚೂರು ಜಿಲ್ಲೆಗೆ 2,239 ಹುದ್ದೆಗಳು ಮಂಜೂರಾಗಿದ್ದು, ಆ ಪೈಕಿ 1,040 ಹುದ್ದೆಗಳು ಖಾಲಿ ಇವೆ. ಯಾದಗಿರಿ ಜಿಲ್ಲೆಗೆ ಮಂಜೂರಾದ 1,435 ಹುದ್ದೆಗಳಲ್ಲಿ 734 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕಲಬುರಗಿಯಲ್ಲಿ 566, ಕೊಪ್ಪಳದಲ್ಲಿ 565, ಬಳ್ಳಾರಿಯಲ್ಲಿ 547, ಬೀದರ್‌ನಲ್ಲಿ 417 ಹಾಗೂ ವಿಜಯನಗರದಲ್ಲಿ 232 ಹುದ್ದೆಗಳು ಖಾಲಿ ಇವೆ.
ಈ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆಯಾಗಿದೆ. ಆದ್ದರಿಂದ ಪ್ರತಿವರ್ಷ ಹೆಚ್ಚು ವಿದ್ಯಾರ್ಥಿಗಳು ಈ ವಿಷಯದಲ್ಲಿ ಅನುತ್ತೀರ್ಣಗೊಳ್ಳುತ್ತಾರೆ. ಆದರೂ ಸರ್ಕಾರ ಇಂಗ್ಲಿಷ್ ಶಿಕ್ಷಕರ ಹುದ್ದೆಗಳ ಭರ್ತಿಗೆ ಆದ್ಯತೆ ನೀಡುತ್ತಿಲ್ಲ. ಏಳು ಜಿಲ್ಲೆಗಳಲ್ಲಿ 653 ಇಂಗ್ಲಿಷ್ ಶಿಕ್ಷಕರ ಹುದ್ದೆಗಳು ಖಾಲಿ ಇವೆ. 699 ಭಾಷಾ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕಿದೆ. 580 ದೈಹಿಕ ಶಿಕ್ಷಣ, 747 ಕಲಾ, 512 ಸಿಬಿಝಡ್, 477 ಹಿಂದಿ, 324 ಪಿಸಿಎಂ ಹಾಗೂ 108 ವಿಶೇಷ ಶಿಕ್ಷಕರ ಹುದ್ದೆಗಳು ಖಾಲಿ ಇವೆ.
ಇನ್ನು ಮುಂದಾದರೂ ಸರ್ಕಾರ ಈ ಭಾಗದ ಜಿಲ್ಲೆಗಳ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಆದ್ಯತೆ ನೀಡಬೇಕು. ಫಲಿತಾಂಶ ಸುಧಾರಣೆಗೆ ಮುಂದಾಗಬೇಕು ಎಂದು ಜನರು ಒತ್ತಾಯಿಸುತ್ತಾರೆ.
‘ಒಳ ಮೀಸಲಾತಿ ಕಾರಣಕ್ಕೆ ನೇಮಕಾತಿ ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ನೇರ ನೇಮಕಾತಿ ಹಾಗೂ ಮುಂಬಡ್ತಿ ಮೂಲಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಆಕಾಶ್ ಶಂಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.