ADVERTISEMENT

ನಂದಿಕೂರ ಪಂಚಾಯಿತಿ; ಕಸದಿಂದ ಕಾಂಚಾಣ

ಸ್ವಚ್ಛತೆಗೆ ಆದ್ಯತೆ; ಕಸದಿಂದ ವಾರ್ಷಿಕ ₹20 ಸಾವಿರಕ್ಕೂ ಅಧಿಕ ಆದಾಯ

​ಪ್ರಜಾವಾಣಿ ವಾರ್ತೆ
Published 28 ಮೇ 2025, 4:29 IST
Last Updated 28 ಮೇ 2025, 4:29 IST
ನಂದಿಕೂರ ಪಂಚಾಯಿತಿಯಲ್ಲಿ ಸಂಗ್ರಹಗೊಂಡ ಕಸವನ್ನು ತೂಕಕ್ಕೆ ಹಾಕಿ ಮಾರಾಟ ಮಾಡಿರುವುದು
ನಂದಿಕೂರ ಪಂಚಾಯಿತಿಯಲ್ಲಿ ಸಂಗ್ರಹಗೊಂಡ ಕಸವನ್ನು ತೂಕಕ್ಕೆ ಹಾಕಿ ಮಾರಾಟ ಮಾಡಿರುವುದು   

ಕಲಬುರಗಿ: ನಂದಿಕೂರ ಕಲಬುರಗಿ ಮಹಾನಗರದಿಂದ ಕೂಗಳತೆ ದೂರದಲ್ಲಿರುವ ಗ್ರಾಮ. ಕಲಬುರಗಿ ತಾಲ್ಲೂಕಿನಲ್ಲಿಯೇ ಅತಿದೊಡ್ಡ ಗ್ರಾಮ ಪಂಚಾಯಿತಿ ಇದಾಗಿದ್ದು, ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಕಸದಿಂದ ಕಾಂಚಾಣ ಕಂಡುಕೊಳ್ಳುವ ಮಾರ್ಗ ಕಂಡುಕೊಂಡಿದೆ.

ನಂದಿಕೂರ, ನಂದಿಕೂರ ತಾಂಡಾ, ಕೋಟನೂರ ಡಿ, ಉದನೂರ, ಸೀತನೂರ, ನಾಗನಳ್ಳಿ ಮತ್ತು ನಾಗನಳ್ಳಿ ತಾಂಡಾ ಸೇರಿ 5 ಗ್ರಾಮ, ಎರಡು ತಾಂಡಾಗಳನ್ನು ಹೊಂದಿರುವ ಈ ಪಂಚಾಯಿತಿ 32 ಸದಸ್ಯರನ್ನು ಒಳಗೊಂಡಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 15 ಸಾವಿರ ಜನಸಂಖ್ಯೆ ಇದೆ. ಹೀಗಾಗಿ ನಿತ್ಯ ಕ್ವಿಂಟಲ್‌ಗಟ್ಟಲೇ ಕಸ ಉತ್ಪತ್ತಿಯಾಗುತ್ತಿದ್ದು, ವಿಲೇವಾರಿಯೇ ತಲೆನೋವಾಗಿತ್ತು. ಹೀಗಾಗಿ ಸಾಹಸ ಸಂಸ್ಥೆಯ ಜೊತೆಗೂಡಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದು, ಆದಾಯದ ಮೂಲ ಕಂಡುಕೊಂಡಿದೆ.

2023–24ನೇ ಸಾಲಿನಲ್ಲಿ ಕೋಟನೂರ ಡಿ. ವ್ಯಾಪ್ತಿಯ ಒಂದೂವರೆ ಎಕರೆ ಜಮೀನಲ್ಲಿ 100X100 ಅಳತೆಯ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ ಮಾಡಿದ್ದು, ಕಸ ಸಂಗ್ರಹಣೆ ಮತ್ತು ನಿರ್ವಹಣೆಗೆ ಮೂವರು ಮಹಿಳಾ ಸಿಬ್ಬಂದಿ ನೇಮಿಸಿಕೊಂಡಿದೆ. ಕಸ ಸಂಗ್ರಹ ವಾಹನದ ಚಾಲಕಿಯೂ ಮಹಿಳೆಯೇ ಆಗಿದ್ದಾರೆ.

ADVERTISEMENT

ಕಸ ನಿರ್ವಹಣಾ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ತ್ಯಾಜ್ಯವನ್ನು ಸಂಗ್ರಹಿಸಿ, ಘಟಕದಲ್ಲಿ ನೀರಿನ ಬಾಟಲಿ, ಗ್ಲಾಸ್‌, ಚಹಾ ಕಪ್‌, ಹಾಲಿನ ಪಾಕೆಟ್‌, ಬಿಯರ್ ಬಾಟಲಿ, ಪ್ಲಾಸ್ಟಿಕ್‌ ಕವರ್‌, ಕಬ್ಬಿಣ, ತಗಡಿನ ಚೂರುಗಳು, ರದ್ದಿ ಪೇಪರ್‌ ಸೇರಿದಂತೆ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಮಾರಾಟ ಮಾಡಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ₹20,597 ಆದಾಯ ಬಂದಿರುತ್ತದೆ. ಈ ಹಣವನ್ನು ಕಸ ನಿರ್ವಹಣೆಗೇ ಬಳಸಿಕೊಳ್ಳಲಾಗುತ್ತಿದ್ದು, ಹೆಚ್ಚಿನ ಅನುದಾನವನ್ನು ಪಂಚಾಯಿತಿಯಿಂದ ಒದಗಿಸಲಾಗುತ್ತಿದೆ ಎನ್ನುತ್ತಾರೆ ಅಭಿವೃದ್ಧಿ ಅಧಿಕಾರಿ ಸಂದೀಪ ಎಸ್ ಗುತ್ತೇದಾರ್.

2017ರಲ್ಲಿಯೇ ಕಸ ಸಂಗ್ರಹ ವಾಹನ ಬಂದಿದ್ದರೂ ಕಸ ವಿಲೇವಾರಿ ತಲೆನೋವಾಗಿತ್ತು. 2024ರಲ್ಲಿ ಶ್ವೇತಾ ದೊಡ್ಡಮನಿ ಅಧ್ಯಕ್ಷರಾಗಿದ್ದ ವೇಳೆ ಘಟಕ ನಿರ್ಮಾಣವಾಯಿತು. ಇದೀಗ ಕಸದಿಂದ ಮುಕ್ತಿ ಸಿಕ್ಕಿದೆ ಎನ್ನುತ್ತಾರೆ ಹಾಲಿ ಅಧ್ಯಕ್ಷ ಚಂದ್ರಕಾಂತ್ ಕೆ.

ಮುಂದಿನ ದಿನಗಳಲ್ಲಿ ಅಂಗಡಿಗಳಿಗೆ ಮಾಸಿಕ ₹ 50 ಮನೆಗಳಿಗೆ ₹ 30ರಂತೆ ಕಸ ನಿರ್ವಹಣಾ ಶುಲ್ಕವನ್ನೂ ವಿಧಿಸಿ ಸ್ವಚ್ಛ ಭಾರತ್‌ ಮಿಷನ್‌ ಯಶಸ್ವಿಗೊಳಿಸಲಾಗುವುದು
ಚಂದ್ರಕಾಂತ್ ಕೆ. ನಂದಿಕೂರ ಗ್ರಾ.ಪಂ ಅಧ್ಯಕ್ಷ 
ಕಸ ನಿರ್ವಹಣಾ ಶುಲ್ಕ ಸಂಗ್ರಹಕ್ಕೆ ಪ್ರತ್ಯೇಕ ಬ್ಯಾಂಕ್‌ ಖಾತೆ ಸೃಜಿಸಿ ಕಸ ನಿರ್ವಹಣಾ ಸಿಬ್ಬಂದಿ ವೇತನ ವಾಹನದ ಡಿಸೇಲ್‌ ನಿರ್ವಹಣೆಗೆ ಅದರ ಹಣವನ್ನೇ ಬಳಸಿಕೊಳ್ಳಲಾಗುವುದು
ಸಂದೀಪ ಎಸ್ ಗುತ್ತೇದಾರ್ ನಂದಿಕೂರ ಗ್ರಾ.ಪಂ.ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.