ADVERTISEMENT

ಈಡೇರಿಲ್ಲ ‘ಕಲ್ಯಾಣ’ಕ್ಕೆ ನೀಡಿದ ಭರವಸೆ

ಪ್ರತ್ಯೇಕ ಸಚಿವಾಲಯ ರಚನೆ ಇಲ್ಲ, ಕೆಕೆಆರ್‌ಡಿಬಿಗೆ ಎಂಜಿನಿಯರ್, ಸಿಬ್ಬಂದಿಗಳ ಕೊರತೆ

ಮನೋಜ ಕುಮಾರ್ ಗುದ್ದಿ
Published 17 ಸೆಪ್ಟೆಂಬರ್ 2022, 13:00 IST
Last Updated 17 ಸೆಪ್ಟೆಂಬರ್ 2022, 13:00 IST
ಕಲಬುರಗಿಯಲ್ಲಿರುವ ಕೆಕೆಆರ್‌ಡಿಬಿ ಕಚೇರಿ
ಕಲಬುರಗಿಯಲ್ಲಿರುವ ಕೆಕೆಆರ್‌ಡಿಬಿ ಕಚೇರಿ   

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕೈಗೊಳ್ಳುವ ಕ್ರಮಗಳ ಬಗ್ಗೆ ಪ್ರತಿ ವರ್ಷ ಸೆಪ್ಟೆಂಬರ್ 17ರಂದು ನಡೆಯುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯಮಂತ್ರಿಯವರು ಘೋಷಣೆ ಮಾಡುತ್ತಾರೆ. ಆದರೆ, ಬಹುತೇಕ ಘೋಷಣೆಗಳು, ಭರವಸೆಗಳೂ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.

ಸರ್ಕಾರದ ಈ ನಡೆ ಬಗ್ಗೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಹೋರಾಟಗಾರರಲ್ಲಿ ಬೇಸರವಿದೆ. ಸಚಿವ ಸಂಪುಟದಲ್ಲಿ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬುದರ ಬಗ್ಗೆ ಬಿಜೆಪಿ ಶಾಸಕರಲ್ಲೇ ಅಸಮಾಧಾನವಿದೆ.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೈದರಾಬಾದ್–ಕರ್ನಾಟಕ ವಿಮೋಚನಾ ಹೋರಾಟ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನ (2019) ಎಂದು ಬದಲಾಯಿಸಿದರು. ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಭರವಸೆ ನೀಡಲಾಗಿತ್ತು. ಹುದ್ದೆಗಳ ನೇಮಕಾತಿ, ಬಡ್ತಿ, ಮೀಸಲಾತಿ ಮತ್ತಿತರ ವಿಚಾರಗಳನ್ನು ನಿರ್ಧರಿಸುವ 371 (ಜೆ) ಕೋಶ ಬೆಂಗಳೂರಿನಿಂದ ಕಲಬುರಗಿಗೆ ಸ್ಥಳಾಂತರಿಸುವುದಾಗಿ ಘೋಷಿಸಲಾಗಿತ್ತು. ಆದರೆ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.

ADVERTISEMENT

ಕಳೆದ ಬಾರಿ ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಈಗ ನೀಡುತ್ತಿರುವ ₹ 1500 ಕೋಟಿ ವಾರ್ಷಿಕ ಅನುದಾನವನ್ನು ₹ 3 ಸಾವಿರ ಕೋಟಿ ಹೆಚ್ಚಿಸುವ ಭರವಸೆ ನೀಡಿದ್ದರು. ಆದರೆ, ಇದಕ್ಕೆ ಕ್ರಮ ಕೈಗೊಳ್ಳಲಾಗಿಲ್ಲ.

ಅಪಾರ ಮೊತ್ತದ ಅನುದಾನವನ್ನು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಡಾ.ಡಿ.ಎಂ. ನಂಜುಂಡಪ್ಪ ವರದಿ ಅನ್ವಯ ಹಂಚಿಕೆ ಮಾಡಬೇಕು. ಮೈಕ್ರೊ ಹಾಗೂ ಮ್ಯಾಕ್ರೊ ಯೋಜನೆಗಳಡಿ ಕಾಮಗಾರಿಗಳನ್ನು ನಿರ್ವಹಿಸಲು ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗ ಕಾರ್ಯರೂಕ್ಕೆ ಬಂದಿಲ್ಲ. ಕೆಕೆಆರ್‌ಡಿಬಿ ಪ್ರಧಾನ ಕಚೇರಿಯಲ್ಲೇ ಅಗತ್ಯ ಪ್ರಮಾಣದಷ್ಟು ಎಂಜಿನಿಯರ್ ಮತ್ತು ಸಿಬ್ಬಂದಿಗಳಿಲ್ಲ.

‘ಕೃಷ್ಣಾ ಮೇಲ್ದಂಡೆ ಯೋಜನೆ, ನಾರಾಯಣಪುರ ಬಲದಂಡೆ ಕಾಲುವೆ ಹಾಗೂ ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣಕ್ಕೆ ಹಣ ಬಿಡುಗಡೆ ಆಗಿಲ್ಲ. ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಿಲ್ಲ. ಆರೋಗ್ಯ ಸೌಕರ್ಯವೂ ಕೈಗೆಟುಕದ ಸ್ಥಿತಿ ಇದೆ’ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್ ತಿಳಿಸಿದರು.

3 ವರ್ಷಗಳಲ್ಲಿ ಈ ಭಾಗದ ಯುವಜನರಿಗೆ ಬಿಜೆಪಿ ಸರ್ಕಾರ ಒಂದೇ ಒಂದು ಹೊಸ ಉದ್ಯೋಗ ಸೃಷ್ಟಿಸಿದೆಯೇ ಎಂಬುದನ್ನು ಸ್ಪಷ್ಟ ಪಡಿಸಲಿ. ಕೆಕೆಆರ್‌ಡಿಬಿಗೆ ₹ 3 ಸಾವಿರ ಕೋಟಿ ನೀಡುವ ವಿಚಾರದಲ್ಲೂ ಜನರ ಹಾದಿ ತಪ್ಪಿಸಲಾಗುತ್ತಿದೆ

– ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ವಕ್ತಾರ, ಶಾಸಕ

₹ 3 ಸಾವಿರ ಕೋಟಿಯು ಕೆಕೆಆರ್‌ಡಿಬಿ ಮೂಲಕ ಖರ್ಚಾಗಲಿದ್ದು, ಈ ಬಗ್ಗೆ ಯಾವುದೇ ಸಂದೇಹ ಬೇಡ. ಜಿಲ್ಲೆಗಳಲ್ಲಿ ಮಂಡಳಿಯ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗವೂ ಹಂತ ಹಂತವಾಗಿ ರಚನೆಯಾಗಲಿದೆ ದತ್ತಾತ್ರೇಯ ಪಾಟೀಲ ರೇವೂರ

– ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.