ADVERTISEMENT

ಕಾಳಗಿ: 4 ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸ್

ಪ್ರಜಾವಾಣಿ ವರದಿಗಾರನ ಹೆಸರು ದುರ್ಬಳಕೆ ಮಾಡಿಕೊಂಡ ತಹಶೀಲ್ದಾರ್?

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 16:30 IST
Last Updated 11 ಜೂನ್ 2025, 16:30 IST
ಘಮಾವತಿ ರಾಠೋಡ
ಘಮಾವತಿ ರಾಠೋಡ   

ಕಾಳಗಿ: ತಾಲ್ಲೂಕಿನಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಒಟ್ಟು 51 ನ್ಯಾಯಬೆಲೆ ಅಂಗಡಿಗಳಿವೆ. ಈ ಪೈಕಿ ಕಾಳಗಿ ಪಟ್ಟಣದ ನಾಲ್ಕು ನ್ಯಾಯಬೆಲೆ ಅಂಗಡಿ ವರ್ತಕರಿಗೆ ‘ತಾವು ಬೆರಳಚ್ಚು ಪಡೆದು ಆ ಸಮಯದಲ್ಲೇ ಆಹಾರ ಧಾನ್ಯ ವಿತರಣೆ ಮಾಡುತ್ತಿಲ್ಲ’ ಎಂದು ಇಲ್ಲಿಯ ತಹಶೀಲ್ದಾರ್ ಮೇ 15ರಂದು ನೋಟಿಸ್ ನೀಡಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಆದರೆ, ನೋಟಿಸ್‌ನಲ್ಲಿ ‘ಪ್ರಜಾವಾಣಿ ವರದಿಗಾರರ ದೂರು ದಿನಾಂಕ 12.05.2025’ ಎಂದು ವಿನಾಕಾರಣ ಉಲ್ಲೇಖಿಸಿದ್ದು ಆಶ್ಚರ್ಯ ಎನಿಸಿದೆ. ಹಾಗೆ, ಈ ಕುರಿತು ತಹಶೀಲ್ದಾರ್ ಕಚೇರಿಯ ಆವಕ-ಜಾವಕ ಪುಸ್ತಕದಲ್ಲಿ ಯಾವುದೇ ನಮೂದು ಇಲ್ಲದೆ ಎಲ್ಲವೂ ಹೊರಗಿನಿಂದಲೇ ನಡೆದಿದ್ದು ದುರಾಡಳಿತಕ್ಕೆ ಕಾರಣವಾಗಿದೆ.

‘ಠಾಕರು ನ್ಯಾಯಬೆಲೆ ಅಂಗಡಿ ಸಂಖ್ಯೆ-134, ಮಹಾದೇವಿ ನ್ಯಾಯಬೆಲೆ ಅಂಗಡಿ ಸಂಖ್ಯೆ-113, ಮಾತೆ ಮಾಣಿಕೇಶ್ವರಿ ನ್ಯಾಯಬೆಲೆ ಅಂಗಡಿ ಸಂಖ್ಯೆ-114 ಮತ್ತು ಆರ್.ಎಸ್.ಎಸ್.ಎನ್ ನ್ಯಾಯ ಬೆಲೆ ಅಂಗಡಿ ಸಂಖ್ಯೆ-115 ಈ ವರ್ತಕರ ಮೊಬೈಲ್ ವಾಟ್ಸ್‌ಆ್ಯಪ್‌ಗೆ ನೋಟಿಸ್ ಕಳಿಸಿದ್ದಾರೆ’ ಎಂದು ತಿಳಿದುಬಂದಿದೆ.

ADVERTISEMENT

‘ನ್ಯಾಯಬೆಲೆ ಅಂಗಡಿ ವರ್ತಕರಾದ ನೀವು, ಪಡಿತರ ಕಾರ್ಡುದಾರರಿಂದ ಬೆರಳಚ್ಚು ಪಡೆದು ಆಹಾರಧಾನ್ಯ ಕೂಡಲೇ ವಿತರಣೆ ಮಾಡದೆ ಸ್ವಲ್ಪ ದಿವಸಗಳ ನಂತರ ವಿತರಣೆ ಮಾಡುತ್ತಿರುವುದಾಗಿ, ಬೇರೆ ಅಂಗಡಿಗಳಲ್ಲಿ ಹುಡುಗರಿಂದ ಬೆರಳಚ್ಚು ಪಡೆದು ಹಾಗೂ ಪಡಿತರದಾರರಿಂದ ದುಡ್ಡು ಪಡೆಯುತ್ತಿರುವುದಾಗಿ, ಕೂಡಲೇ ಸರಿಪಡಿಸಲು ಪ್ರಜಾವಾಣಿ ಕಾಳಗಿ ವರದಿಗಾರರು ದೂರು ಸಲ್ಲಿಸಿದ್ದಾರೆ. ಮೇ ತಿಂಗಳಲ್ಲಿ ಅದನ್ನೇ ಮಾಡಿದಲ್ಲಿ ಕಾನೂನಿನ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

‘ತಾಲ್ಲೂಕಿನ ಪ್ರತಿ ನ್ಯಾಯಬೆಲೆ ಅಂಗಡಿಯಿಂದ ತಿಂಗಳಿಗೆ ₹1ಸಾವಿರ ಜಮಾ ಮಾಡಿಕೊಡುವಂತೆ ಆಹಾರ ನಿರೀಕ್ಷಕರು ಒತ್ತಡ ತರುತ್ತಾರೆ. ₹ 35 ಸಾವಿರ - ₹ 40 ಸಾವಿರ ಸಂಗ್ರಹವಾಗುತ್ತದೆ. ಈ ಹಣ ಆಹಾರ ನಿರೀಕ್ಷಕರಿಗೆ ಒಪ್ಪಿಸುತ್ತೇನೆ. ಅದರಲ್ಲಿ ತಹಶೀಲ್ದಾರ್‌ ₹10 ಸಾವಿರ ತೆಗೆದುಕೊಂಡು ಉಳಿದದ್ದು ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಕೊಡುತ್ತಾರೆ. ಲೋಕಾಯುಕ್ತರಿಗೂ ಹಣ ಕೊಡಬೇಕಾಗುತ್ತದೆ ಎಂದು ಹೇಳುತ್ತಾರೆ. ಆಹಾರ ನಿರೀಕ್ಷಕರು ಗೋದಾಮಿನ ಸಿಬಿ ಪಡೆಯುತ್ತಾರೆ’ ಎಂದು ನ್ಯಾಯಬೆಲೆ ಅಂಗಡಿ ವರ್ತಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರೇವಣಸಿದ್ದಪ್ಪ ಚೇಂಗಟಾ ಆರೋಪಿಸಿದರು.

ಈ ಆರೋಪ ಕುರಿತು ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಘಮಾವತಿ ರಾಠೋಡ ಅವರು ‘ನನಗೆ ದುಡ್ಡು ಯಾರೂ ಕೊಡುವುದಿಲ್ಲ. ಈ ವಿಷಯ ನನ್ನ ಗಮನಕ್ಕೂ ಬಂದಿಲ್ಲ. ಇದಕ್ಕೂ ನನಗೂ ಸಂಬಂಧವಿಲ್ಲ’ ಎಂದರು.

‘ಮೇಲಧಿಕಾರಿಗಳ ಮತ್ತು ಪತ್ರಕರ್ತರ ಹೆಸರಿನ ಮೇಲೆ ಭಯ ಹಾಕಿ ತಹಶೀಲ್ದಾರರು ಮತ್ತು ಆಹಾರ ನಿರೀಕ್ಷಕರು ನಮ್ಮಿಂದ ಹೆಚ್ಚು ಹಣ ಪಡೆಯಲು ಏನೆಲ್ಲ ಕುತಂತ್ರ ರೂಪಿಸುತ್ತಾರೆ. ಅದನ್ನೇ ಈಗ ಮಾಡಿದ್ದಾರೆ’ ಎಂದು ನ್ಯಾಯಬೆಲೆ ಅಂಗಡಿ ವರ್ತಕರಾದ ಠಾಕರು ಜಾಧವ, ಪ್ರಭಾಕರ ರಟಕಲ್ ಗಂಭೀರವಾಗಿ ಆರೋಪಿಸಿದ್ದಾರೆ.

‘ನೋಟಿಸ್ ಒಳಗೆ ವಿನಾಕಾರಣ ‘ಪ್ರಜಾವಾಣಿ ವರದಿಗಾರರ ದೂರು’ ಎಂದು ಉಲ್ಲೇಖಿಸಿದಕ್ಕೆ ತಪ್ಪಾಗಿದೆ ಕ್ಷಮಿಸಿ’ ಎಂದು ಆಹಾರ ನಿರೀಕ್ಷಕ ರೇವಣಸಿದ್ದಯ್ಯ ಮಠಪತಿ ಕ್ಷಮೆ ಕೋರಿದ್ದಾರೆ.

ಆಹಾರ ನಿರೀಕ್ಷಕ ಟೈಪ್ ಮಾಡಿಕೊಂಡು ಬಂದು ನನಗೆ ಗೊತ್ತಿಲ್ಲದಂತೆ ಸಹಿ ತೆಗೆದುಕೊಂಡಿದ್ದು ತಪ್ಪಿಗೆ ನೋಟಿಸ್ ನೀಡಿ ವರ್ಗಾವಣೆ ಮಾಡಿಸುವೆ
ಘಮಾವತಿ ರಾಠೋಡ ತಹಶೀಲ್ದಾರ್ ಕಾಳಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.