ಆಳಂದ: ತಾಲ್ಲೂಕಿನ ನಿಂಬಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲು ತರಲಾಗಿದ್ದ 22 ಟ್ಯಾಬ್‌ಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಶನಿವಾರ ಬಂಧಿಸಲಾಗಿದೆ.
ಗ್ರಾಮದ ಈರಣ್ಣ ಅಶೋಕ ಫಿರಂಗಿ, ಬಸವರಾಜ ಸೂರ್ಯಕಾಂತ ಗದ್ದೆ, ಶಿವಾನಂದ ನಾಗಣ್ಣಾ ನಂದೇಣಿ ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ.
₹ 1.49 ಲಕ್ಷ ಮೌಲ್ಯದ 22 ಟ್ಯಾಬ್ ಹಾಗೂ ₹ 50 ಸಾವಿರ ಮೌಲ್ಯದ ಬೈಕ್ ಸೇರಿ ಒಟ್ಟು ₹ 1.99 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ನಿಂಬಾಳದ ಸರ್ಕಾರಿ ಪ್ರೌಢಶಾಲೆಗೆ ಇನ್ಫೊಸಿಸ್ ಫೌಂಡೇಷನ್ ಸಹಯೋಗದೊಂದಿಗೆ ಯುವ ಬ್ರಿಗೇಡ್‌ನವರು ಶಾಲೆಗೆ ನೀಡಲಾಗಿದ್ದ ಟ್ಯಾಬ್‌ಗಳನ್ನು ಕಳೆದ ಡಿ 21ರಂದು ಕಳವು ಮಾಡಲಾಗಿತ್ತು. ಈ ಸಂಬಂಧ ಮಾದನ ಹಿಪ್ಪರಗಾ ಪೊಲೀಸ್ ಠಾಣೆಗೆ ಮುಖ್ಯ ಶಿಕ್ಷಕರು ದೂರು ದಾಖಲಿಸಿದ್ದರು.
ಮಾದನ ಹಿಪ್ಪರಗಾ ಪಿಎಸ್ಐ ಮಲ್ಲಣ್ಣಾ ಯಲಗೊಂಡ ನೇತೃತ್ವದಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಮೊಬೈಲ್ ಸಂದೇಶ ಮತ್ತಿತರ ಸುಳಿವಿನ ಆಧಾರದಲ್ಲಿ ಪತ್ತೆ ಕಾರ್ಯ ಆರಂಭಿಸಿದ ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಡಿವೈಎಸ್ಪಿ ರವೀಂದ್ರ ಶಿರೂರು, ಸಿಪಿಐ ಮಂಜುನಾಥ ನೇತೃತ್ವದಲ್ಲಿ ಸಿಬ್ಬಂದಿ ಚಂದ್ರಕಾಂತ, ಬೀರಣ್ಣಾ, ಶಿವಲಿಂಗ, ಬಸವರಾಜ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.