ಕಲಬುರ್ಗಿ: ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಶ್ರೀರಾಮಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧ್ವನಿವರ್ಧಕ ಬಳಸಿ ಶಬ್ದ ಮಾಲಿನ್ಯ ಮಾಡುವ ಮೂಲಕ ಜನರಿಗ ತೊಂದರೆ ಕೊಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಕ್ಟೋಬರ್ 7ರಂದು ರಾಜ್ಯದಾದ್ಯಂತ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಸುಪ್ರೀಂ ಕೋರ್ಟ್ 21 ವರ್ಷಗಳ ಹಿಂದೆಯೇ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಮತ್ತು ಇತರ ಮಾಧ್ಯಮಗಳ ಮೂಲಕ ಶಬ್ದ ಮಾಲಿನ್ಯ ಮಾಡಬಾರದು ಎಂದು ತೀರ್ಪು ನೀಡಿದೆ. ಆದರೆ, ಈವರೆಗಿನ ಸರ್ಕಾರಗಳು ಅದನ್ನು ಪಾಲಿಸಿಲ್ಲ ಎಂದು ದೂರಿದರು.
ಅನಧಿಕೃತ ದೇವಸ್ಥಾನಗಳನ್ನು ತೆರವುಗೊಳಿ ಸಬೇಕು ಎಂದು 2009ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಇಟ್ಟುಕೊಂಡು ರಾಜ್ಯದ ಕೆಲವು ದೇವಸ್ಥಾನಗಳನ್ನು ನೆಲಸಮ ಮಾಡಲಾಯಿತು. ಆದರೆ, ಅದೇ ಸುಪ್ರೀಂ ಕೋರ್ಟ್ 21 ವರ್ಷಗಳ ಹಿಂದೆ ಮಸೀದಿಗಳ ಧ್ವನಿವರ್ದಕ ಕುರಿತು ನೀಡಿದ್ದ ತೀರ್ಪನ್ನು ಏಕೆ ಪಾಲಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಶ್ರೀರಾಮಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಗೊಬ್ಬುರ, ಅರುಣ್ ಸುಲ್ತಾನಪುರ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಹೇಶ ಕೆಂಭಾವಿ, ಚಂದ್ರಕಾಂತ ಕಾಳಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.