ADVERTISEMENT

ಕರ್ತವ್ಯದ ಜತೆಗೆ ಆರೋಗ್ಯ ಕಾಳಜಿ ಮುಖ್ಯ; ಐಜಿಪಿ ಮನೀಷ್

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 5:20 IST
Last Updated 24 ನವೆಂಬರ್ 2022, 5:20 IST
ಕಲಬುರಗಿಯ ಕವಾಯತು ಮೈದಾನದಲ್ಲಿ ನಡೆದ ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತರಿಗೆ ಟ್ರೋಪಿ ನೀಡಿದ ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬೀಕರ್. ಎಸ್‌ಪಿ ಇಶಾ ಪಂತ್ ಇದ್ದರು
ಕಲಬುರಗಿಯ ಕವಾಯತು ಮೈದಾನದಲ್ಲಿ ನಡೆದ ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತರಿಗೆ ಟ್ರೋಪಿ ನೀಡಿದ ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬೀಕರ್. ಎಸ್‌ಪಿ ಇಶಾ ಪಂತ್ ಇದ್ದರು   

ಕಲಬುರಗಿ: ‘ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಪೊಲೀಸರು ಕರ್ತವ್ಯದ ಜತೆಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬೀಕರ್ ಹೇಳಿದರು.

ಇಲ್ಲಿನ ಪೊಲೀಸ್ ಕವಾಯತ್‌ ಮೈದಾನದಲ್ಲಿ ಮೂರು ದಿನಗಳ ಕಾಲ ಜಿಲ್ಲಾ ಪೊಲೀಸ್ ಕ್ರೀಡಾಕೂಟ ನಡೆದಿದ್ದು, ಬುಧವಾರ ಜರುಗಿದ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಅವರು ಮಾತನಾಡಿದರು.

‘ಕೋವಿಡ್ ಸಂಕಷ್ಟ ಕಳೆದ ಬಳಿಕ ಪೊಲೀಸ್ ಇಲಾಖೆಯ ಸಿಬ್ಬಂದಿ ಕ್ರೀಡಾಕೂಟದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದು ಸಂತಸ ತಂದಿದೆ. ಕರ್ತವ್ಯದ ಜತೆಗೆ ಆರೋಗ್ಯದ ಕಾಳಜಿ ಬಗ್ಗೆಯೂ ಮುತುವರ್ಜಿ ವಹಿಸಬೇಕು. ಕ್ರೀಡೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು, ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು’ ಎಂದರು.

ADVERTISEMENT

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಪೊಲೀಸರ ತಂಡ ಸಮಗ್ರ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಪುರುಷರ ವಿಭಾಗದಲ್ಲಿ ಡಿಎಆರ್ಕಾನ್‌ಸ್ಟೆಬಲ್‌ ಉದಯಕುಮಾರ ಮತ್ತು ಮಹಿಳೆಯರ ವಿಭಾಗದಲ್ಲಿ ಜಿಲ್ಲಾ ಸೆನ್ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ಅರ್ಚನಾ ಅವರು ವೈಯಕ್ತಿಯ ವಿಭಾಗದಲ್ಲಿ ಚಾಂಪಿಯನ್‌ ಆದರು.

ಕ್ರೀಡಾಕೂಟದ ಕೊನೆಯಲ್ಲಿ ಹಗ್ಗ ಜಗ್ಗಾಟ ಪಂದ್ಯ ರೋಚಕವಾಗಿ ನಡೆಯಿತು. ಗ್ರಾಮೀಣ ಉಪ ವಿಭಾಗ ತಂಡವನ್ನು ಶಹಾಬಾದ್ ಉಪ ವಿಭಾಗದ ತಂಡದವರು ಎಳೆದಾಡುವ ಮೂಲಕ ಗೆಲುವಿನ ನಗೆ ಬೀರಿದರು. ಬಳಿಕ ಡಿವೈಎಸ್ಪಿ ಉಮೇಶ ಚಿಕ್ಕಮಠ ಅವರನ್ನು ಹೊತ್ತುಕೊಂಡು ವಿಜೇತರು ಸಂಭ್ರಮಿಸಿದರು.

ನ.21ರಂದು ಆರಂಭವಾದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ನೂರಾರು ಕ್ರೀಡಾಪಟುಗಳು ಸಂತೋಷದಿಂದ ಪಾಲ್ಗೊಂಡರು. ಎಸ್‌ಪಿ ಇಶಾ ಪಂತ್, ಹೆಚ್ಚುವರಿ ಎಸ್ಪಿಗಳಾದ ಪ್ರಸನ್ನ ದೇಸಾಯಿ, ಎನ್.ಶ್ರೀನಿಧಿ ವೇದಿಕೆಯಲ್ಲಿದ್ದರು.

ಬಹುಮಾನ ವಿತರಣೆ ಸಮಾರಂಭದಲ್ಲಿ ಡಿವೈಎಸ್ಪಿಗಳಾದ ರವೀಂದ್ರ ಶಿರೂರ, ಜೆ.ಎಚ್. ಇನಾಮದಾರ, ಉಮೇಶ ಚಿಕ್ಕಮಠ, ಶೀಲವಂತ, ಕೆ.ಬಸವರಾಜ, ಎಂ.ಎಸ್. ಪಟ್ಟಣ, ಸಿಪಿಐಗಳಾದ ಭಾಸು ಚವ್ಹಾಣ್, ರಾಘವೇಂದ್ರ, ವಿನಾಯಕ, ಚನ್ನಬಸವ, ಪಿಎಸ್‌ಐಗಳಾದ ವಾತ್ಸಲ್ಯ, ಸಂಗಮೇಶ ಅಂಗಡಿ, ಸಾವಿತ್ರಿ, ಬಸವರಾಜ ಚಿತ್ತಕೋಟಿ, ಶ್ರೀದೇವಿ ಬಿರಾದಾರ, ನಿವೃತ್ತ ಅಧಿಕಾರಿಗಳಾದ ಬಸವರಾಜ ಇಂಗಿನ್, ಜಿ.ಎಂ.ಯಾತನೂರ, ಕಳ್ಳಿಗುಡ್ಡ, ಪ್ರಭು ದುದ್ದಗಿ, ಮಲ್ಲಿಕಾರ್ಜುನ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.