ADVERTISEMENT

ಚಿತ್ತಾಪುರ ‘ಪ್ರಜಾ ಸೌಧ’ ಉದ್ಘಾಟನೆ ಇಂದು

14 ವಿವಿಧ ಇಲಾಖೆಗಳಿಗೆ ಅನುಕೂಲ; ₹ 18.41 ಕೋಟಿ ವೆಚ್ಚದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 6:31 IST
Last Updated 4 ಜುಲೈ 2025, 6:31 IST
ಚಿತ್ತಾಪುರ ಪಟ್ಟಣದಲ್ಲಿ ಉದ್ಘಾಟನಗೆ ಸಿದ್ಧವಾಗಿರುವ ತಾಲ್ಲೂಕು ಆಡಳಿತ ಸೌಧ (ಪ್ರಜಾ ಸೌಧ) ಕಟ್ಟಡದ ನೋಟ
ಚಿತ್ತಾಪುರ ಪಟ್ಟಣದಲ್ಲಿ ಉದ್ಘಾಟನಗೆ ಸಿದ್ಧವಾಗಿರುವ ತಾಲ್ಲೂಕು ಆಡಳಿತ ಸೌಧ (ಪ್ರಜಾ ಸೌಧ) ಕಟ್ಟಡದ ನೋಟ   

ಚಿತ್ತಾಪುರ: ಕರ್ನಾಟಕ ಗೃಹ ಮಂಡಳಿಯಿಂದ ₹ 18.41 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ನಿರ್ಮಿಸಿರುವ ತಾಲ್ಲೂಕು ಆಡಳಿತ ಸೌಧ (ಪ್ರಜಾ ಸೌಧ) ಕಟ್ಟಡ ಕಾಮಗಾರಿ ಪೂರ್ಣಗೊಂಡ ಆರು ವರ್ಷಗಳ ಬಳಿಕ ಕೊನೆಗೂ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರು ಜುಲೈ 4ರಂದು ಬೆಳಿಗ್ಗೆ 11ಕ್ಕೆ ಕಟ್ಟಡ ಉದ್ಘಾಟಿಸುವುದರೊಂದಿಗೆ ಪ್ರಜಾ ಸೌಧವು ಜನರ ಸೇವೆಗೆ ಲಭ್ಯವಾಗಲಿದೆ. 

ಸರ್ಕಾರಿ ಗಾಯರಾಣ ಜಮೀನು ಸ.ನಂ 125/ಪಿ.2ರಲ್ಲಿನ 3 ಎಕರೆ 14 ಗುಂಟೆ ಜಮೀನಿನಲ್ಲಿ ಒಟ್ಟು 4,511 ಚದರ ಮೀಟರ್‌ ವಿಸ್ತೀರ್ಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ.

ಕಟ್ಟಡ ನಿರ್ಮಾಣಕ್ಕೆ ₹10 ಕೋಟಿ ಯೋಜನಾ ಮೊತ್ತಕ್ಕೆ 2017ರಲ್ಲಿ ಸರ್ಕಾರದಿಂದ ಅನುಮೋದನೆ ಸಿಕ್ಕಿತ್ತು. ₹9.15 ಕೋಟಿ ಮೊತ್ತದಲ್ಲಿ ಕಾಮಗಾರಿ ಗುತ್ತಿಗೆ ಪಡೆದ ಬೆಂಗಳೂರು ಮೂಲದ ಮೇ.ಕೆ.ಎಂ.ವಿ. ಪ್ರಾಜೆಕ್ಟ್ ಕಂಪನಿಯು 2017 ಸೆ.10ರಂದು ಕಾಮಗಾರಿ ಆರಂಭಿಸಿ, 2019 ಅ.20ರಂದು ಕೆಲಸ ಪೂರ್ಣಗೊಳಿಸಿತ್ತು. ಒಟ್ಟು 48,538 ಚದರ ಅಡಿ ವಿಸ್ತೀರ್ಣ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡದ ಪರಿಷ್ಕೃತ ಅಂದಾಜು ವೆಚ್ಚವು
₹ 18.41 ಕೋಟಿಗೆ ತಲುಪಿದೆ.

ADVERTISEMENT

ಕಟ್ಟಡ ನಿರ್ಮಿಸಿದ ಬಳಿಕ ಜಮೀನು ತಮ್ಮದೆಂದು ಮಹಿಳೆಯೊಬ್ಬರು ನ್ಯಾಯಾಲಯದ ಮೊರೆ
ಹೋಗಿದ್ದರಿಂದ ಉದ್ಘಾಟನೆಯು ನನೆಗುದಿಗೆ ಬಿದ್ದಿತ್ತು. ‘ಕಟ್ಟಡ ನಿರ್ಮಿಸಿರುವ ಜಮೀನು ಸರ್ಕಾರಿ ಗಾಯರಾಣ ಜಮೀನಾಗಿದೆ. ನಮಗೆ ಕಟ್ಟಡದಲ್ಲಿ ಅಧಿಕೃತವಾಗಿ ಪ್ರವೇಶಕ್ಕೆ ಅನುಮತಿ ನೀಡಬೇಕು’ ಎಂದು ಕಂದಾಯ ಇಲಾಖೆಯಿಂದ ನ್ಯಾಯಾಲಯಕ್ಕೆ ಅಫಿಡೆವಿಟ್ ಸಲ್ಲಿಸಿ ಮನವಿ ಮಾಡಲಾಗಿತ್ತು ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಗುರುವಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕಂದಾಯ ಇಲಾಖೆ ಸಲ್ಲಿಸಿರುವ ಜಮೀನಿನ ದಾಖಲೆ ಮತ್ತು ಮನವಿ ಪುರಸ್ಕರಿಸಿದ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ತಾಲ್ಲೂಕು ಆಡಳಿತ ಸೌಧ ಕಟ್ಟಡ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ. ವಿವಿಧ ಇಲಾಖೆಗಳ ಒಟ್ಟು 14 ಕಚೇರಿಗಳು ಒಂದೆಡೆ ಕಾರ್ಯನಿರ್ವಹಿಸಲಿದ್ದು, ಇದು ತಾಲ್ಲೂಕಿನ ವಿವಿಧ ಅಧಿಕಾರಿ ಮತ್ತು ಸಿಬ್ಬಂದಿ, ಸಾರ್ವಜನಿಕರಿಗೆ ಹರ್ಷ ಉಂಟುಮಾಡಿದೆ. 

ಉದ್ಘಾಟನಾ ಸಮಾರಂಭದಲ್ಲಿ ತಾಲ್ಲೂಕಿನ ಪುರಸಭೆ, ಗ್ರಾಮ ಪಂಚಾಯಿತಿ ಚುನಾಯಿತ ಜನಪ್ರತಿನಿಧಿಗಳು, ಗಣ್ಯವ್ಯಕ್ತಿಗಳು, ರೈತರು, ವಿವಿಧ ಸಂಘಟನೆ ಪದಾಧಿಕಾರಿಗಳು, ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಪಾಲ್ಗೊಳ್ಳಬೇಕು
ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಮನವಿ ಮಾಡಿದ್ದಾರೆ.

.

ನೆಲ ಮಹಡಿ ವಿಸ್ತೀರ್ಣ 16,796 ಚದರ ಅಡಿ ಮೊದಲ ಮಹಡಿ ವಿಸ್ತೀರ್ಣ 15,871 ಚದರ ಅಡಿ ಎರಡನೇ ಮಹಡಿ ವಿಸ್ತೀರ್ಣ 15,871 ಚದರ ಅಡಿ

ಪ್ರಜಾಸೌಧದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗಲಿವೆ. ಅಧಿಕಾರಿಗಳ ಸಿಬ್ಬಂದಿ ಕಾರ್ಯನಿರ್ವಹಣೆಗೂ ಅನುಕೂಲವಾಗಲಿದೆ

-ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ

ಎಲ್ಲಿ ಯಾವ ಕಚೇರಿ?

ಕಟ್ಟಡದ ನೆಲ ಮಹಡಿಯಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಪತ್ರಾಂಕಿತ ಉಪ ಖಜಾನೆ ಕಚೇರಿ ಗ್ರೇಡ್–2 ತಹಶೀಲ್ದಾರ್ ಕಚೇರಿ ಅಟಲ್ ಜೀ ಜನಸ್ನೇಹಿ ಕೇಂದ್ರ ಭೂಮಿ ಕೇಂದ್ರ ಆಧಾರ್ ಕೇಂದ್ರ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 8 ಕಚೇರಿಗಳು ಕಾರ್ಯ ನಿರ್ವಹಿಸಲಿವೆ. ಮೊದಲ ಮಹಡಿಯಲ್ಲಿ ತಹಶೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿ ಕಚೇರಿ ತಾಲ್ಲೂಕು ಆಡಳಿತ ಸಭಾಂಗಣ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮತ್ತು ಭೂ ದಾಖಲೆಗಳ ಕೋಣೆ ಚುನಾವಣೆ ಶಾಖೆ ವಿಡಿಯೊ ಸಂವಾದ ಕೇಂದ್ರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಕಾರ್ಮಿಕ ಇಲಾಖೆ ಸೇರಿ ವಿವಿಧ ಇಲಾಖೆಗಳ ಒಟ್ಟು 7 ಕಚೇರಿಗಳು ಕಾರ್ಯ ನಿರ್ವಹಿಸಲಿವೆ. ಎರಡನೇ ಮಹಡಿಯಲ್ಲಿ ಚಿತ್ತಾಪುರ ವಿಧಾನಸಭಾ ಮತಕ್ಷೇತ್ರದ ಶಾಸಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಉದ್ಯೋಗ ಮತ್ತು ತರಬೇತಿ ಇಲಾಖೆ ಕಚೇರಿ ತೋಟಗಾರಿಕೆ ಇಲಾಖೆ ಕಚೇರಿ ಕೃಷಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸೇರಿದಂತೆ ಒಟ್ಟು 6 ಕಚೇರಿಗಳು ಕಾರ್ಯನಿರ್ವಹಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.