ADVERTISEMENT

ರಾಜಕೀಯಕ್ಕಾಗಿ ಗೊಂದಲ ಸೃಷ್ಟಿ: ಮಾಜಿ ಸಚಿವ ಪ್ರಮೋದ ಮಧ್ವರಾಜ

ಕರ್ನಾಟಕ ರಾಜ್ಯ ತಳವಾರ ಸಮಾಜದಿಂದ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 14:32 IST
Last Updated 16 ಮೇ 2025, 14:32 IST
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ತಳವಾರ ಸಮಾಜದ ಸದಸ್ಯರು ಶುಕ್ರವಾರ ಪ್ರತಿಭಟಿಸಿದರು  ಪ್ರಜಾವಾಣಿ ಚಿತ್ರ
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ತಳವಾರ ಸಮಾಜದ ಸದಸ್ಯರು ಶುಕ್ರವಾರ ಪ್ರತಿಭಟಿಸಿದರು  ಪ್ರಜಾವಾಣಿ ಚಿತ್ರ   

ಕಲಬುರಗಿ: ‘ತಳವಾರ ಸಮುದಾಯ ಸಂವಿಧಾನ ಮತ್ತು ಕಾನೂನು ಬದ್ಧವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿ ಐದು ವರ್ಷಗಳಾಗಿವೆ. ಆದರೆ, ರಾಜ್ಯ ಸರ್ಕಾರ ಮತ್ತು ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ವಿನಾಕಾರಣ ಗೊಂದಲ ಸೃಷ್ಟಿ ಮಾಡಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಮಾಜಿ ಸಚಿವ ಪ್ರಮೋದ ಮಧ್ವರಾಜ ಹೇಳಿದರು.

ಕರ್ನಾಟಕ ರಾಜ್ಯ ತಳವಾರ ಸಮಾಜ ಪಾದಯಾತ್ರೆಯ ಮೂಲಕ ಬಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಬೆಂಬಲ ಸೂಚಿಸಿ ಅವರು ಮಾತನಾಡಿದರು.

‘ಈ ಹಿಂದೆ ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಿತ್ತು. ರಾಜ್ಯದಲ್ಲಿ ಕೆಲವೊಬ್ಬರು ಗೊಂದಲ ಸೃಷ್ಟಿ ಮಾಡಿದ್ದರಿಂದ ರಾಜ್ಯ ಸರ್ಕಾರ ಅದನ್ನು ಪರಿಶೀಲನೆಗೊಳಪಡಿಸಿ, ಮೂರರಿಂದ ಏಳು ಪ್ರತಿಶತ ಹೆಚ್ಚಿಗೆ ಮಾಡಿ ತಳವಾರ ಸಮಾಜವನ್ನು ಹಿಂದುಳಿದ ವರ್ಗದಿಂದ ತೆಗೆದು ಪರಿಶಿಷ್ಟ ಪಂಗಡಕ್ಕೆ ಸೇರಿಸಿದೆ. ಇಲ್ಲಿಯವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗ ಸಮಸ್ಯೆ ಉದ್ಭವವಾಗಿದೆ’ ಎಂದರು.

ADVERTISEMENT

‘ತಳವಾರದಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ, ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿ ಮಾಡಿ ಅನ್ಯಾಯ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ 88 ಎಚ್ ಹೊರತುಪಡಿಸಿ ಮತ್ತೊಂದು ತಳವಾರ ಇಲ್ಲ. ಆದರೆ, ಹಿಂದುಳಿದ ವರ್ಗದಲ್ಲಿ ಇನ್ನೊಂದು ತಳವಾರ ಇದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಯಾವುದೇ ದಾಖಲೆ ಇಲ್ಲದಿದ್ದರೂ ಮೌಖಿಕವಾಗಿ ಹೇಳಿ ತಳವಾರ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಆಪಾದಿಸಿದರು.

‘ರಾಜ್ಯದ ಕಾಂಗ್ರೆಸ್ ಸರ್ಕಾರ ದಪ್ಪ ಚರ್ಮದ ಸರ್ಕಾರ. ಇಲ್ಲಿನ ಉಸ್ತುವಾರಿ ಮಂತ್ರಿಗಳು ಜಾಣ ಕುರುಡರು, ಮೂಗರಂತೆ ವರ್ತಿಸುತ್ತಿದ್ದಾರೆ. ಈ ಭಾಗದಲ್ಲಿ ಎಸ್.ಟಿ ವಿಷಯದಲ್ಲಿ ನಿರಂತರವಾಗಿ ರಾಜಕೀಯ ನಡೆಯುತ್ತಲೇ ಇದೆ. ತಮ್ಮ ರಾಜಕಾರಣಕ್ಕಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯಗಳಲ್ಲಿ ಇಲ್ಲಸಲ್ಲದ ಕಟ್ಟು ಕಥೆಗಳನ್ನು ಹೇಳುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ದೂರಿದರು.

ಕರ್ನಾಟಕ ರಾಜ್ಯ ತಳವಾರ ಸಮಾಜದ ರಾಜ್ಯಾಧ್ಯಕ್ಷ ಸರ್ದಾರ ರಾಯಪ್ಪ, ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಎಂ.ಚಿನ್ನಸ್ವಾಮಿ, ರೇವಣಸಿದ್ದಪ್ಪಗೌಡ ಎಂ. ಕಮಾನಮನಿ, ರಮೇಶ ನಾಟಿಕಾರ, ಬಸವರಾಜ ಸಪ್ಪನಗೊಳ, ಶಾಂತಪ್ಪ ಕೂಡಿ, ಅಮೃತ್ ಡಿಗ್ಗಿ, ವಿದ್ಯಾಧರ ಮಂಗಳೂರು, ಸಂತೋಷ ತಳವಾರ, ಬಾಪುಗೌಡ ಮಾಲಿಪಾಟೀಲ್, ಅಶೋಕ ಕಂಕಿ, ಪ್ರೇಮ್ ಕೋಲಿ, ಈರಣ್ಣ ಹೊಸಮನಿ, ಬೆಳ್ಳಪ್ಪ ಕಣದಾಳ, ಸಿದ್ದು ನಾರಾಯಣಪುರ, ಹುಲಿಕಂಟ್ರಾಯ, ಭೀಮರಾಯ ತಳವಾರ, ಪ್ರಕಾಶ ಮಂದೇವಾಲ ಸೇರಿದಂತೆ ನೂರಾರು ಜನ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.