ಆಳಂದ: ‘ಮಠಾಧೀಶರ ಮಾರ್ಗದಲ್ಲಿ ಧರ್ಮ ರಕ್ಷಣೆಗಾಗಿ ಮತಭೇದ ಮರೆತು ಧರ್ಮ ಅನುಯಾಯಿಗಳು ಒಗ್ಗಟ್ಟಾಗುವುದು ಅವಶ್ಯವಾಗಿದೆ’ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಹೇಳಿದರು.
ಪಟ್ಟಣದ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶನಿವಾರ ಮಹಾಂತ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ ಆಧ್ಯಾತ್ಮಿಕ ಪ್ರವಚನ ಮಹಾಮಂಗಲ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವೀರಶೈವ ಲಿಂಗಾಯತ ಸಮುದಾಯದಲ್ಲಿ ಒಗ್ಗಟ್ಟಿನ ಅವಶ್ಯವಿದೆ. ಹಿಂದೂಗಳು ಜಾಗೃತಿ ಮತ್ತು ಒಗ್ಗಟ್ಟಿನಿಂದ ಮುನ್ನೆಡೆಯಬೇಕು. ಸಮಾಜದ ಶ್ರೇಯಸ್ಸಿಗೆ ಮಠ-ಮಂದಿರಗಳು ಪಾತ್ರ ಬಹುಮುಖವಾಗಿದೆ. ಆಳಂದ ಮಹಾಂತ ಶಿವಯೋಗಿಗಳು ಮಾಡಿದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಇಂದಿಗೂ ಜನರಿಗೆ ದಾರಿದೀಪವಾಗಿವೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯೋಣ’ ಎಂದು ಹೇಳಿದರು.
ಪೀಠಾಧಿಪತಿ ಮಹಾಂತಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಭಕ್ತರು ಧಾರ್ಮಿಕ ಪರಂಪರೆಯನ್ನು ಪೋಷಿಸಿ, ದೇವರ ಮತ್ತು ಗುರುಗಳ ಕೃಪೆಗೆ ಪಾತ್ರರಾಗಬೇಕು. ಮಠ–ಪೀಠಗಳು ಭಕ್ತರ ಆಧ್ಯಾತ್ಮಿಕ ಪಥ ಬೆಳಗಿಸುವ ದಿವ್ಯ ಕೇಂದ್ರಗಳು. ಸದ್ಭಕ್ತಿಯ ಮೂಲಕ ಜೀವನ ಪಾವನಗೊಳಿಸುತ್ತವೆ’ ಎಂದು ಹೇಳಿದರು.
ಫಿರೋಜಾಬಾದ್ ಸಂತೆಕಲ್ಲೂರು ಮಠದ ಗುರುಬಸವ ಸ್ವಾಮೀಜಿ, ಸಿದ್ದೇಶ್ವರ ಶಿವಾಚಾರ್ಯರು, ಶರಣನಗರದ ಚನ್ನಬಸವ ಪಟ್ಟದೇವರು, ಪ್ರಾಂಶುಪಾಲ ಎಸ್.ಎಚ್. ಹೊಸಮನಿ ಮಾತನಾಡಿದರು.
ಮಹಾಂತೇಶ್ವರ ಮಠದ ನೂತನ ಪೀಠಾಧಿಪತಿ ಅಭಿನವ ಚನ್ನಬಸವ ಶಿವಾಚಾರ್ಯರು ಕಾರ್ಯಕ್ರಮದಲ್ಲಿ ಮಾತನಾಡಿ, ‘ಭಕ್ತರಲ್ಲಿ ನಿಷ್ಠೆ, ಶ್ರದ್ಧೆ, ಸಂಸ್ಕಾರ ಬೆಳೆಯಬೇಕು ಎಂದು ನೀಡಿದರು. ಸಂಗೀತ ಕಲಾ ಸೇವೆಯನ್ನು ಶಿವಶರಣಪ್ಪ ಪೂಜಾರಿ(ಹಿತ್ತಲಶಿರೂರ) ಮತ್ತು ತಬಲಾ ವಾದನಕಾರ ಬಸವರಾಜ ಆಳಂದ ಅವರು ನೀಡಿದ ಸಂಗೀತಗಾಯನ ಗಮನ ಸೆಳೆಯಿತು.
ಬೆಳಗಿನ ಜಾವ ಮಹಾಂತ ಶಿವಯೋಗಿ ಕರ್ತೃಗದ್ದುಗೆ ರುದ್ರಾಭಿಷೇಕ, ವರಲಕ್ಷ್ಮಿ ಪೂಜೆ ನೆರವೇರಿತು. ಆಳಂದ, ನಾರಾಯಣಪುರ, ಜಾಲವಾದಿ, ನಂದವಾಡಗಿ, ಕೋತನಹಿಪ್ಪರಗಾ, ಹಿರೋಳಿ, ಕಲಬುರ್ಗಿ, ನಾಗಲೇಗಾಂವ, ಅಂಬೇವಾಡ, ಹತ್ತರಗಾ ಸೇರಿದಂತೆ ವಿವಿಧ ಭಾಗಗಳಿಂದ ಬಂದ ಭಕ್ತರು ಭಾಗವಹಿಸಿದರು. ಬಸಯ್ಯಸ್ವಾಮಿ ನಂದವಾಡಗಿ ನಿರೂಪಿಸಿದರರು. ಚಂದ್ರಶೇಖರಯ್ಯ ಶಾಸ್ತ್ರಿ ಸ್ವಾಗತಿಸಿದರು. ಮಹಾದೇವ ವಡಗಾಂವ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.