ಕಲಬುರಗಿ: ‘ಈ ಭಾಗದ ಬಹುವರ್ಷಗಳ ಬೇಡಿಕೆಯಾಗಿರುವ ಪ್ರತ್ಯೇಕ ಕೈಗಾರಿಕಾ ನೀತಿ ಜಾರಿಗೊಳಿಸದ ಹೊರತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ’ ಎಂದು ಕೆಕೆಸಿಸಿಐ ಸಲಹಾ ಉಪಸಮಿತಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಅಭಿಪ್ರಾಯಪಟ್ಟರು.
‘ಕರ್ನಾಟಕ ರಾಜ್ಯ ಹಲವು ಕ್ಷೇತ್ರಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಆದರೆ, ಕಲ್ಯಾಣ ಕರ್ನಾಟಕ ಭಾಗದ ಸಮಾಜೋ–ಆರ್ಥಿಕ ಸ್ಥಿತಿಗತಿ ಮಾತ್ರ ದೇಶದ ಹಿಂದುಳಿದ ರಾಜ್ಯಗಳ ಸಮಾಜೋ–ಆರ್ಥಿಕ ಸ್ಥಿತಿಯನ್ನು ಹೋಲುತ್ತದೆ. ಇದುವೇ ಪ್ರಾದೇಶಿಕ ಅಸಮಾನತೆಗೆ ಕನ್ನಡಿ ಹಿಡಿಯುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಪ್ರಾದೇಶಿಕ ಅಸಮಾನತೆ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ್ ಗುರುವಾರ ಕಲಬುರಗಿಗೆ ಭೇಟಿ ನೀಡಲಿದ್ದು, ಈ ಭಾಗದ ಅಭಿವೃದ್ಧಿಗಾಗಿ ಕೆಕೆಸಿಸಿಐ ಸಿದ್ಧಪಡಿಸಿರುವ 27 ಬೇಡಿಕೆಗಳ ಪಟ್ಟಿಯನ್ನು ಸಮಿತಿಗೆ ಸಲ್ಲಿಸಲಾಗುವುದು’ ಎಂದು ನಗರದ ಕೆಕೆಸಿಸಿಐ ಕಚೇರಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಶಿಕ್ಷಣ, ಅಭಿವೃದ್ಧಿ, ಮಾನವ ಅಭಿವೃದ್ಧಿ ಸೂಚ್ಯಂಕ ಸೇರಿದಂತೆ ಎಲ್ಲದರಲ್ಲೂ ಕಲ್ಯಾಣ ಕರ್ನಾಟಕ ಹಿಂದುಳಿದಿದೆ. ಜನಸಂಖ್ಯೆ ಆಧಾರದಲ್ಲಿ ಕಲ್ಯಾಣ ಕರ್ನಾಟಕಕ್ಕೆ ರಾಜ್ಯ ಬಜೆಟ್‌ನ ಶೇ 20ರಷ್ಟು ಅನುದಾನ ಸಿಗಬೇಕು. ಅದರಂತೆ ಪ್ರತಿವರ್ಷ ₹80 ಸಾವಿರ ಕೋಟಿಗಳು ಹಣ ಬರಬೇಕಿತ್ತು. ವಾಸ್ತವವಾಗಿ ಬರೀ ₹35 ಸಾವಿರದಿಂದ ₹40 ಸಾವಿರ ಕೋಟಿಗಳಷ್ಟು ಅನುದಾನ ಸಿಗುತ್ತಿದೆ’ ಎಂದು ಬೇಸರಿಸಿದರು.
‘ಈ ಭಾಗದ ಪ್ರಾದೇಶಿಕ ಅಸಮಾನತೆ ನಿರ್ಮೂಲನೆಗೆ ರಾಜ್ಯ ಸರ್ಕಾರ ಆಂಧ್ರಪ್ರದೇಶ ಮಾದರಿಯಲ್ಲಿ ತೆರಿಗೆಮುಕ್ತ ವಿಶೇಷ ಕೈಗಾರಿಕಾ ನೀತಿ ಘೋಷಿಸಬೇಕು. ಉದ್ಯಮಗಳ ಸ್ಥಾಪನೆಗೆ ಪೂರಕವಾದ ಮೂಲಸೌಕರ್ಯ ಒಗಿಸಬೇಕು, ಈ ಭಾಗದಲ್ಲಿ ಹೂಡಿಕೆ ಉತ್ತೇಜಿಸಲು ಪ್ರತ್ಯೇಕ ಮಂಡಳಿ ಸ್ಥಾಪಿಸಬೇಕು. ಬಂಡವಾಳ ಆಕರ್ಷಣೆಗೆ ಜಾಗತಿಕ ಹೂಡಿಕೆ ಸಮಾವೇಶ ಆಯೋಜಿಸಬೇಕು, ಕೈಗಾರಿಕೆಗಳ ಸ್ಥಾಪನಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ದೊಡ್ಡಮಟ್ಟದ ಸಾಲ ವಿತರಿಸಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಅಮರನಾಥ ಪಾಟೀಲ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕೆಕೆಸಿಸಿಐ ಗೌರವ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ಮಾಜಿ ಅಧ್ಯಕ್ಷ ಮಂಜುನಾಥ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.