ADVERTISEMENT

ಕಲಬುರಗಿ: ‘ಟಿಪ್ಪು ನಿಜ ಕನಸುಗಳು’ ನಾಟಕ ಪ್ರದರ್ಶನ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 6:50 IST
Last Updated 9 ಫೆಬ್ರುವರಿ 2023, 6:50 IST
ಕಲಬುರಗಿಯ ಪೊಲೀಸ್‌ ಆಯುಕ್ತರ ಕಚೇರಿ ಮುಂಭಾಗ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು
ಕಲಬುರಗಿಯ ಪೊಲೀಸ್‌ ಆಯುಕ್ತರ ಕಚೇರಿ ಮುಂಭಾಗ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು   

ಕಲಬುರಗಿ: ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚನೆಯ ‘ಟಿಪ್ಪು ನಿಜ ಕನಸುಗಳು’ ನಾಟಕವು ಸುಳ್ಳುಗಳಿಂದ ಕೂಡಿದೆ. ಅದರ ಪ್ರದರ್ಶನ ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ನಗರದ ಪೊಲೀಸ್‌ ಕಮಿಷನರ್ ಕಚೇರಿ ಮತ್ತು ಜಗತ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

‘ಕಾರ್ಯಪ್ಪ ಅವರು ಕೋಮುದ್ವೇಷದ ಉದ್ದೇಶದಿಂದ ಟಿಪ್ಪು ಸುಲ್ತಾನ್ ಕುರಿತು ಕಲ್ಪಿತ ನಾಟಕವೊಂದನ್ನು ರಚಿಸಿ, ಅದನ್ನು ರಂಗಭೂಮಿಯಲ್ಲಿ ಪ್ರಯೋಗಿಸುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋಮುದ್ವೇಷ ಬಿತ್ತುತ್ತಿದ್ದಾರೆ. ನಾಟಕ ಪ್ರದರ್ಶನದ ವಿರುದ್ಧ ಹಲವೆಡೆ ವಿರೋಧ ವ್ಯಕ್ತವಾಗುತ್ತಿದೆ’ ಎಂದು ಪ್ರತಿಭಟನಾನಿರತರು ಆರೋಪಿಸಿದರು.

‘ಐತಿಹಾಸಿಕ ಘಟನೆಗಳು ಪರ–ವಿರೋಧ ನೆಲೆಗಳಿಂದ ಕೂಡಿರುತ್ತವೆ. ಎಲ್ಲವನ್ನೂ ಮೂಗಿನ ನೇರಕ್ಕೆ ಆರೋಪಿಸುವುದು ಸರಿಯಲ್ಲ. ಟಿಪ್ಪು ಸುಲ್ತಾನ್ ತಮ್ಮ ಸಂಸ್ಥಾನದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ನಡೆಸಿದ್ದ ಯುದ್ಧಗಳು ಇತಿಹಾಸದಲ್ಲಿ ಅಚ್ಚಳಿಯದೆ ದಾಖಲಾಗಿವೆ. ಹಲವು ಜನೋಪಯೋಗಿ ಕಾರ್ಯಗಳನ್ನೂ ಮಾಡಿರುವ ಟಿಪ್ಪು ಮೈಸೂರು ಸಂಸ್ಥಾನ ವ್ಯಾಪ್ತಿಯಲ್ಲಿ ಹಲವು ದೇವಸ್ಥಾನ, ಸಮುದಾಯಗಳಿಗೆ ದತ್ತಿ ನೀಡಿ ಪರಧರ್ಮ ಸಹಿಷ್ಣುತೆ ಮನೋಭಾವ ಹೊಂದಿದ್ದರು’ ಎಂದರು.

ADVERTISEMENT

'ಪೂರ್ವನಿಯೋಜಿತ ಕಥೆಗಳಿಗೆ ಇಂಬುಕೊಟ್ಟು ತಪ್ಪು ಮಾಹಿತಿ ಕಟ್ಟಿಕೊಡುವುದು ಸೃಜನಶೀಲತೆ ಅಲ್ಲ. ಇತಿಹಾಸವೂ ಅಲ್ಲ. ಹೀಗಾಗಿ, ಅಡ್ಡಂಡ ಕಾರ್ಯಪ್ಪ ಅವರು ಬಿಜೆಪಿ ಸರ್ಕಾರವನ್ನು ಮೆಚ್ಚಿಸಲು ಟಿಪ್ಪು ಕುರಿತು ಹಿಂದೂ ದ್ವೇಷಿ, ಮತಾಂತರಿ, ದ್ರೋಹಿ ಎಂದೆಲ್ಲ ಬಿಂಬಿಸಿ ನಾಟಕ ರಚಿಸಿ, ರಾಜ್ಯದೆಲ್ಲೆಡೆ ಪ್ರಯೋಗ ಮಾಡುತ್ತಿರುವುದು ದುರದೃಷ್ಟಕರ’ ಎಂದು ಅವರು ಹೇಳಿದರು.

‘ಕೋಮುಸೌಹಾರ್ದತೆಯ ಕಲ್ಯಾಣ ಕರ್ನಾಟಕದ ನೆಲದಲ್ಲಿ ಇಂತಹ ನಾಟಕ ಪ್ರದರ್ಶಿಸುತ್ತಿರುವುದು ಅಪಾಯಕಾರಿ. ತಕ್ಷಣವೇ ಪ್ರದರ್ಶನವನ್ನು ರದ್ದುಪಡಿಸಬೇಕು. ಪ್ರದರ್ಶನದಿಂದ ಕೋಮುಸಾಮರಸ್ಯ ಹದಗೆಟ್ಟು, ಸಾಮಾಜಿಕ ಜನಜೀವನಕ್ಕೆ ಧಕ್ಕೆ ತರಲಿದೆ. ನಾವೂ ಕೂಡ ‘ಹೇಡಿ ಸಾವರ್ಕರ್’ ಎಂಬ ನಾಟಕ ಮಾಡಿ ಅಭಿನಯಿಸುತ್ತೇವೆ. ಅನುಮತಿ ನೀಡಬೇಕು’ ಎಂದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಮೀನಾಕ್ಷಿ ಬಾಳಿ, ಎಚ್‌.ಬೋಧನಕರ್, ಅರ್ಜುನ ಭದ್ರೆ, ಜಗದೇವಿ ನೂಲಕರ್, ಶಹಬಾಜ್ ಅಖ್ತರ್, ಕೆ.ನೀಲಾ, ಸುಧಾಮ ಧನ್ನಿ, ಸಿದ್ರಾಮ ಹಾಗರಗಿ, ಪ್ರಭು ಖಾನಾಪುರೆ, ಡಾ.ಅಶೋಕ ಶಟಕಾರ್ ಸಂಗಯ್ಯ ಎಸ್‌, ಲೀಲಾ, ಮಲ್ಲಣ್ಣ ಮಸ್ಕಿ, ಮಲ್ಲಿಕಾರ್ಜುನ, ಅರ್ಜುನ ಗೊಬ್ಬರು ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.