ADVERTISEMENT

ಕಲಬುರ್ಗಿ: ವಿವಿಧ ಬೇಡಿಕೆ; ನಗರದಲ್ಲಿ ಸರಣಿ ಪ್ರತಿಭಟನೆ

ಹುದ್ದೆ ಸೃಷ್ಟಿಗೆ ಅಂಗವಿಕಲರ ಆಗ್ರಹ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 5:27 IST
Last Updated 5 ಫೆಬ್ರುವರಿ 2021, 5:27 IST
ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿಧೋದ್ದೇಶ (ಎಂಆರ್‌ಡಬ್ಲ್ಯು) ಮತ್ತು ಗ್ರಾಮೀಣ ಪುನರ್ವಸತಿ (ವಿಆರ್‌ಡಬ್ಲ್ಯು) ಕಾರ್ಯಕರ್ತರ ರಾಜ್ಯ ಒಕ್ಕೂಟದಿಂದ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು
ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿಧೋದ್ದೇಶ (ಎಂಆರ್‌ಡಬ್ಲ್ಯು) ಮತ್ತು ಗ್ರಾಮೀಣ ಪುನರ್ವಸತಿ (ವಿಆರ್‌ಡಬ್ಲ್ಯು) ಕಾರ್ಯಕರ್ತರ ರಾಜ್ಯ ಒಕ್ಕೂಟದಿಂದ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು   

ಕಲಬುರ್ಗಿ: ಗ್ರಾಮ, ತಾಲ್ಲೂಕು ಹಾಗೂ ನಗರ ಮಟ್ಟದಲ್ಲಿ ಅಂಗವಿಕಲರ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಸೃಜಿಸಿ ನೇಮಕಾತಿ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿಧೋದ್ದೇಶ (ಎಂಆರ್‌ಡಬ್ಲ್ಯು) ಮತ್ತು ಗ್ರಾಮೀಣ ಪುನರ್ವಸತಿ (ವಿಆರ್‌ಡಬ್ಲ್ಯು) ಕಾರ್ಯಕರ್ತರ ರಾಜ್ಯ ಒಕ್ಕೂಟದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾವಣೆಗೊಂಡ ಹಲವು ಅಂಗವಿಕಲರು ಹಾಗೂ ಒಕ್ಕೂಟದ ಸದಸ್ಯರು, ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

ವಿವಿಧೋದ್ದೇಶ ಗ್ರಾಮೀಣ ಮತ್ತು ಪುನರ್ವಸತಿ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಅಧಿನಿಯಮ ಜಾರಿಗೊಳಿಸಬೇಕು. ಈಗ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್‌ಡಬ್ಲ್ಯು ಅವರನ್ನು ತಾಲ್ಲೂಕು ಅಂಗವಿಕಲರ ಅಭಿವೃದ್ಧಿ ಅಧಿಕಾರಿಯಾಗಿ, ವಿಆರ್‌ಡಬ್ಲ್ಯು ಅವರನ್ನು ಗ್ರಾಮ ಮಟ್ಟದ ಅಭಿವೃದ್ಧಿ ಅಧಿಕಾರಿ ಆಗಿ, ಯುಆರ್‌ಡಬ್ಲ್ಯು ಅವರನ್ನು ನಗರ ಅಂಗವಿಕಲರ ಅಭಿವೃದ್ಧಿ ಸಹಾಯಕ ಅಧಿಕಾರಿ ಆಗಿ ನೇಮಕ ಮಾಡಬೇಕು. ಎಲ್ಲ ಹುದ್ದೆಗಳನ್ನು ಕಾಯಂಗೊಳಿಸಬೇಕು ಎಂದೂ ಆಗ್ರಹಿಸಿದರು.

ADVERTISEMENT

ನಿವೃತ್ತರಾದ ಎಂಆರ್‌ಡಬ್ಲ್ಯು ಅವರಿಗೆ ₹ 25 ಲಕ್ಷ, ವಿಆರ್‌ಡಬ್ಲ್ಯು ಅವರಿಗೆ ₹ 20 ಲಕ್ಷದ ಇಡಗಂಟು ನೀಡಬೇಕು. ಆಕಸ್ಮಿಕವಾಗಿ ದುರ್ಘಟನೆಯಲ್ಲಿ ಮರಣ ಹೊಂದಿದರೆ ಅಂಥ ನೌಕರರಿಗೆ ಕನಿಷ್ಠ ₹ 50 ಸಾವಿರದಿಂದ ₹ 30 ಲಕ್ಷದವರೆಗೆ ಪರಿಹಾರ ನೀಡಬೇಕು. ಎಸಿಡಿಪಿಒ ವಿಕಲಚೇತನರ ಯೋಜನೆಗಳ ನೋಡಲ್‌ ಅಧಿಕಾರಿಯನ್ನು ನೇಮಿಸಿ ಹೊರಡಿಸಿದ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯಬೇಕು. ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತರ ಹುದ್ದೆಯನ್ನು ಅಂಗವಿಕಲರಿಗಾಗಿಯೇ ಮೀಸಲಿಡಬೇಕು. ಬ್ಯಾಕ್‌ಲಾಗ್‌ ಹುದ್ದೆಗಳನ್ನು ಕೂಡಲೇ ನೇಮಕ ಮಾಡಿಕೊಳ್ಳಬೇಕು. ಮಾಸಾಶನವನ್ನು ₹ 5 ಸಾವಿರಕ್ಕೆ ಏರಿಸಬೇಕು ಎಂದೂ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಒಕ್ಕೂಟದ ನಿರ್ದೇಶಕ ಬಸವರಾಜ ಜಿ. ಹಡಪದ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಮಂತ ಎಸ್‌. ಮಳಖೇಡ, ಪ್ರಧಾನ ಕಾರ್ಯದರ್ಶಿ ನಾನಾಗೌಡ ಸಿ. ಹೊನ್ನಳ್ಳಿ, ಖಜಾಂಚಿ ಖಾಸಿಂಸಾಬ್‌ ಐ. ಡೊಂಗರಗಾಂವ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತೈಲ ಬೆಲೆಗಳ ಏರಿಕೆಗೆ ಖಂಡನೆ

ಕಲಬುರ್ಗಿ: ಪೆಟ್ರೋಲ್‌, ಡಿಸೇಲ್‌, ಸೀಮೆಎಣ್ಣೆ ಹಾಗೂ ಅಡುಗೆ ಅನಿಲಗಳ ದರ ಹೆಚ್ಚಳ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ– ಕಮ್ಯುನಿಸ್ಟ್‌ (ಎಸ್‌ಯುಸಿಐ–ಸಿ) ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್‌.ವಿ. ದಿವಾಕರ್‌ ಮಾತನಾಡಿ, ‘ಕೇಂದ್ರ ಸರ್ಕಾರ ತೈಲ ಉತ್ಪನ್ನಗಳ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಕೈಗೊಂಡ ನಿರ್ಣಯಗಳು ಮಾರಕವಾಗಿವೆ. ಮುಂದಿನ ಆರ್ಥಿಕ ವರ್ಷದಲ್ಲಿ ಸೀಮೆಎಣ್ಣೆಗೆ ಸಬ್ಸಿಡಿ ತೆಗೆದುಹಾಕಿದ್ದು, ಬಡವರನ್ನು ಕಂಗೆಡಿಸಿದೆ. ಅಲ್ಲದೇ ಸಬ್ಸಿಡಿಯಲ್ಲಿ ದೊರೆಯುತ್ತಿದ್ದ ಅಡುಗೆ ಅನಿಲ (ಎಲ್‌ಪಿಜಿ)ದ ಬೆಲೆಯನ್ನು ಕೂಡ ಪ್ರತಿ ಲೀಟರ್‌ಗೆ ₹ 2ರಂತೆ ಏರಿಸಲಾಗಿದೆ. ಕಾರ್ಪೊರೇಟ್‌ ಕಂಪನಿಗಳನ್ನು ತೃಪ್ತಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶದ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ’ ಎಂದು ಆಕ್ರೋಶ ಹೊರಹಾಕಿದರು.

‘ಈ ಬಾರಿ ಬಜೆಟ್‌ ಸಂಪೂರ್ಣವಾಗಿ ಬಂಡವಾಳಶಾಹಿಗಳ ಪರವಾಗಿದೆ. 2016ರಿಂದಲೂ ಪ್ರಧಾನಿ ಮೋದಿ ಅವರು ಬಡವರಿಗೆ ಇದ್ದ ಒಂದೊಂದೇ ಸಬ್ಸಿಡಿಗಳನ್ನು ತೆಗೆಯುತ್ತಲೇ ಬಂದಿದ್ದಾರೆ. ಈಗ ಸೀಮೆಎಣ್ಣೆ ಹಾಗೂ ಅಡುಗೆ ಅನಿಲ ದರ ಹೆಚ್ಚಳದ ಮೂಲಕ ಬಡವರ ಅನ್ನ ಕಿತ್ತುಕೊಂಡಿದ್ದಾರೆ. ಕೂಡಲೇ ಈ ಕ್ರಮ ಹಿಂತೆಗೆದುಕೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದರು.

ಮುಖಂಡರಾದ ವಿ.ನಾಗಮ್ಮಾಳ್‌, ವಿ.ಜಿ. ದೇಸಾಯಿ, ಸೀಮಾ ದೇಶಪಾಂಡೆ, ಮಹೇಶ ಎಸ್‌.ಬಿ., ಹಣಮಂತ ಎಸ್‌.ಎಚ್‌., ರಾಧಾ ಜಿ, ಸಿ.ಕೆ. ಗೌರಮ್ಮ, ಈರಣ್ಣ ಇಸಬಾ, ಸ್ನೇಹಾ ಕಟ್ಟಿಮನಿ, ಬಿ.ಕೆ. ಶಿಲ್ಪಾ, ಪ್ರೀತಿ ದೊಡ್ಡಮನಿ, ಹರೀಶ ಸಂಗಾಣಿ, ಭೀಮು ಆಂದೋಲ, ನಾಗರಾಜ ರಾವೂರ್, ಈಶ್ವರ ಕುಂಬಾರ ನೇತೃತ್ವ ವಹಿಸಿದ್ದರು.

ಅನುದಾನ ಖಡಿತ: ಖಂಡನೆ

ಕಲಬುರ್ಗಿ: ಕೇಂದ್ರ ಸರ್ಕಾರವು ಪ್ರಸಕ್ತ ಬಜೆಟ್‌ನಲ್ಲಿ ಐಸಿಡಿಎಸ್‌ಗೆ ನೀಡುವ ಅನುದಾನದಲ್ಲಿ ಶೇ 30ರಷ್ಟು ಕಡಿತಗೊಳಿಸಿದ ಕ್ರಮವನ್ನು ಖಂಡಿಸಿ, ಕರ್ನಾಟಕ ರಾಜ್ಯ ಅಂಗನವಾಗಿ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಅನುದಾನ ಕಡಿತದಿಂದ ಅಂಗನವಾಡಿ ನೌಕರರಿಗೆ ಸಾಕಷ್ಟು ಅಡೆತಡೆ ಆಗಲಿದೆ. ಅಲ್ಲದೇ, ನೌಕರರಿಗೆ ಗೌರವ ಧನ ಹೆಚ್ಚಳ, ಸೇವಾ ಸೌಲಭ್ಯ ನೀಡುವ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ. ಇದರಿಂದ ಮಹಿಳೆ ಮತ್ತು ಮಕ್ಕಳ ಆರೋಗ್ಯದ ಕಾಳಜಿ ವಹಿಸಬೇಕಾದ ಅಂಗನವಾಡಿ ನೌಕರರಿಗೆ ಭ್ರಮನಿರಸನ ಉಂಟಾಗಿದೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಮುಖಂಡರಾದ ಗೌರಮ್ಮ ಪಾಟೀಲ, ಇಂದೂ, ಪ್ರಭಾವತಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.