ADVERTISEMENT

ಕಬ್ಬಿಗೆ ಬೆಲೆ ನಿಗದಿ ಮಾಡದಿದ್ದರೆ ಪ್ರತಿಭಟನೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 12:04 IST
Last Updated 5 ಡಿಸೆಂಬರ್ 2021, 12:04 IST
ಅಫಜಲಪುರದಲ್ಲಿ ತಾಲ್ಲೂಕು ಪ್ರಾಂತ ರೈತ ಸಂಘದವರು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಶನಿವಾರ ಸಲ್ಲಿಸಿದರು ..........  
ಅಫಜಲಪುರದಲ್ಲಿ ತಾಲ್ಲೂಕು ಪ್ರಾಂತ ರೈತ ಸಂಘದವರು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಶನಿವಾರ ಸಲ್ಲಿಸಿದರು ..........     

ಅಫಜಲಪುರ: ‘ಕಬ್ಬಿಗೆ ಬೆಲೆ ನಿಗದಿ ಮಾಡದಿದ್ದರೆ ಜಾನುವಾರುಗಳ ಸಮೇತ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ ತಿಳಿಸಿದರು.

‘ಒಂದು ತಿಂಗಳಿನಿಂದ ರೇಣುಕಾ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬು ಪೂರೈಸುತ್ತಿದ್ದಾರೆ. ಆದರೆ, ಈವರೆಗೆ ಕಾರ್ಖಾನೆಯವರು ಕಬ್ಬಿಗೆ ಬೆಲೆ ನಿಗದಿ ಮಾಡಿಲ್ಲ. ಸಕ್ಕರೆ ಕಾರ್ಖಾನೆಯವರು ರೈತರಿಗೆ ವಂಚಿಸುತ್ತಿದ್ದಾರೆ. ಬೆಲೆ ನಿಗದಿ ಮಾಡುವಂತೆ ಈಗಾಗಲೇ ರಾಜ್ಯ, ಜಿಲ್ಲೆ, ತಾಲ್ಲೂಕುಗಳಲ್ಲಿ ಹೋರಾಟ, ಧರಣಿ ನಡೆಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಅವರು ಎಚ್ಚರಿಕೆ ನೀಡಿದರು.

‘ಒಂದು ವಾರ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ಸಕ್ಕರೆ ಕಾರ್ಖಾನೆಗಳವರನ್ನು ಕಚೇರಿಗೆ ಕರೆಸಿ ಸಭೆ ನಡೆಸಬೇಕು. ಕಬ್ಬಿಗೆ ಬೆಲೆ ನಿಗದಿ ಮಾಡಬೇಕು ಇಲ್ಲದಿದ್ದರೆ ನಾವು ಮುಂದೆ ದೊಡ್ಡ ಹೋರಾಟ ಮಾಡುತ್ತೇವೆ’ ಎಂದರು.

ADVERTISEMENT

ರೈತ ಸಂಘದ ಮುಖಂಡರಾದ ಸಿದ್ದರಾಮ ಧಣೂರು ಮಾತನಾಡಿ, ‘ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ ಪ್ರತಿವರ್ಷವೂ ನಾವು ಕಬ್ಬು ದರ ನಿಗದಿ ಗಾಗಿ ಹೋರಾಟ ಮಾಡುತ್ತೇವೆ ಆದರೆ ಸರ್ಕಾರ ಸಕ್ಕರೆ ಕಾರ್ಖಾನೆಯವರು ಏನು ಮಾಡುತ್ತಿಲ್ಲ. ಇನ್ನು ಮುಂದೆ ನಮ್ಮ ಹೋರಾಟ ಬೇರೆ ಬೇರೆ ರೂಪ ತಾಳುತ್ತವೆ’ ಎಂದರು.

ಮುಖಂಡರಾದ ಗುರು ಚಾಂದಕವಟೆ, ದತ್ತು ಗೌಡ ಪೊಲೀಸ್ ಪಾಟೀಲ್, ಮಲ್ಲು ಪಾಟೀಲ್, ಶರಣು ಕವಲಗಿ ಇದ್ದರು. ತಹಶೀಲ್ದಾರ್ ನಾಗಮ್ಮ ಎಂ.ಕೆ ಅವರು ಮನವಿಪತ್ರ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.