ಮುಂಬೈ–ಬೆಂಗಳೂರು ಮಧ್ಯೆ ಸಂಚರಿಸುವ ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಹತ್ತಲು ಕಲಬುರಗಿ ನಿಲ್ದಾಣದಲ್ಲಿ ಪ್ರಯಾಣಿಕರು ಹರಸಾಹಸ ಪಡುತ್ತಿರುವುದು
ಪ್ರಜಾವಾಣಿ ಸಂಗ್ರಹ ಚಿತ್ರ
ಕಲಬುರಗಿ: ಕಲ್ಯಾಣ ಕರ್ನಾಟಕದ ಕಂದಾಯ ವಿಭಾಗದ ಸ್ಥಾನ ಹೊಂದಿರುವ, ವಾರ್ಷಿಕ ₹ 500 ಕೋಟಿಗೂ ಅಧಿಕ ವರಮಾನವನ್ನು ಮಧ್ಯ ರೈಲ್ವೆಗೆ ನೀಡುತ್ತಿರುವ ಕಲಬುರಗಿಗೆ ರೈಲ್ವೆ ವಿಭಾಗ ಮಂಜೂರು ಮಾಡಬೇಕೆಂಬ ಬೇಡಿಕೆಗೆ ಇನ್ನೂ ಮನ್ನಣೆ ಸಿಕ್ಕಿಲ್ಲ. ರೈಲ್ವೆ ಖಾತೆ ರಾಜ್ಯ ಸಚಿವ ಸ್ಥಾನ ಹೊಂದಿರುವ ರಾಜ್ಯದವರೇ ಆದ ವಿ. ಸೋಮಣ್ಣ ಅವರು ಇದೇ ಮೊದಲ ಬಾರಿಗೆ ಜೂನ್ 1ರಂದು ನಗರದ ರೈಲು ನಿಲ್ದಾಣಕ್ಕೆ ಭೇಟಿ ನೀಡುತ್ತಿದ್ದು, ರೈಲ್ವೆ ವಿಭಾಗ ಕೇಂದ್ರ ಘೋಷಣೆ ಮಾಡುವರೇ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ವೇಳೆ ಬಜೆಟ್‌ನಲ್ಲಿ ಕಲಬುರಗಿಗೆ ರೈಲ್ವೆ ವಿಭಾಗವನ್ನು ಘೋಷಣೆ ಮಾಡಿದ್ದರು. ಕಚೇರಿ ಆರಂಭಕ್ಕೆ ನಗರದ ರಾಜಾಪುರ ಬಳಿ 43 ಎಕರೆ ಜಮೀನು ಕಾಯ್ದಿರಿಸಿ, ₹ 5 ಕೋಟಿ ಅನುದಾನವನ್ನೂ ತೆಗೆದಿಟ್ಟಿದ್ದರು. ಆದರೆ, ನಂತರ ನಡೆದ ಚುನಾವಣೆಯಲ್ಲಿ ಸರ್ಕಾರ ಬದಲಾಗಿದ್ದರಿಂದ ರೈಲ್ವೆ ವಿಭಾಗದ ಘೋಷಣೆಯೂ ನನೆಗುದಿಗೆ ಬಿದ್ದಿತು. ನಂತರ ಬೆಳಗಾವಿಯ ಸುರೇಶ ಅಂಗಡಿಯವರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸ್ಥಾನ ಸಿಕ್ಕಿತ್ತು. ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ), ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಸಚಿವರ ಮುಂದೆ ವಿಭಾಗ ಕೇಂದ್ರ ಆರಂಭಿಸುವ ಬೇಡಿಕೆ ಇಟ್ಟಿದ್ದರು.
ಕಲಬುರಗಿಯಲ್ಲಿ ರೈಲ್ವೆ ವಿಭಾಗ ಆರಂಭಕ್ಕೆ ಆಸಕ್ತಿ ವಹಿಸಿದ್ದ ಸಚಿವ ಸುರೇಶ ಅಂಗಡಿಯವರು ಒಂದು ಹಂತದಲ್ಲಿ ‘ವಿಭಾಗ ರಚನೆಯಾದ ಮೇಲೆಯೇ ಕಲಬುರಗಿಗೆ ಕಾಲಿಡುವೆ’ ಎಂದು ಘೋಷಣೆ ಮಾಡಿದ್ದರು. ಆದರೆ, ಕೋವಿಡ್ ಅವಧಿಯಲ್ಲಿ ಅವರು ಮೃತಪಟ್ಟ ಬಳಿಕ ವಿಭಾಗ ರಚನೆಯ ನಿರ್ಧಾರ ಹಾಗೆಯೇ ಉಳಿಯಿತು. ನಂತರದ ದಿನಗಳಲ್ಲಿ ಕಲಬುರಗಿಯಲ್ಲಿ ರೈಲ್ವೆ ವಿಭಾಗ ಸ್ಥಾಪಿಸುವ ಯಾವುದೇ ಪ್ರಸ್ತಾವ ರೈಲ್ವೆ ಮಂಡಳಿಯ ಮುಂದೆ ಇಲ್ಲ ಎಂದು ಸಂಸದರೊಬ್ಬರ ಪ್ರಶ್ನೆಗೆ ರೈಲ್ವೆ ಇಲಾಖೆ ಲಿಖಿತ ಉತ್ತರ ನೀಡುವ ಮೂಲಕ ಜಿಲ್ಲೆಯ ಜನತೆಗೆ ಆಘಾತ ನೀಡಿತ್ತು. ಹಿಂದೆ ಸಂಸದರಾಗಿದ್ದ ಡಾ. ಉಮೇಶ್ ಜಾಧವ್ ಅವರೂ ವಿಭಾಗ ಸ್ಥಾಪನೆಗೆ ನಿರಂತರ ಶ್ರಮ ಹಾಕಿದ್ದರಾದರೂ ಅವರದೇ ಬಿಜೆಪಿ ಸರ್ಕಾರ ಜಾಧವ್ ಬೇಡಿಕೆಗೆ ಕಿವುಡಾಗಿತ್ತು.
ಮಲತಾಯಿ ಧೋರಣೆ: ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಧ್ಯ ರೈಲ್ವೆಯ ಸೋಲಾಪುರ ವಿಭಾಗದ ವ್ಯಾಪ್ತಿಯಲ್ಲಿ ಕಲಬುರಗಿಯನ್ನು ಸೇರಿಸಲಾಗಿದೆ. ಮಧ್ಯರೈಲ್ವೆಯು ಸೋಲಾಪುರದ ಇತರ ಭಾಗಗಳಿಗೆ ರೈಲು ಓಡಿಸಲು ತೋರಿಸುತ್ತಿರುವ ಆಸಕ್ತಿಯನ್ನು ಕಲಬುರಗಿಯಿಂದ ರೈಲು ಸೌಲಭ್ಯ ಕಲ್ಪಿಸಲು ತೋರಿಸುತ್ತಿಲ್ಲ ಎಂಬ ಆರೋಪಗಳು ದಶಕಗಳಿಂದ ಕೇಳಿ ಬರುತ್ತಿವೆ.
ಕಲಬುರಗಿ ಜಿಲ್ಲೆಯಲ್ಲಿ ಸಿಮೆಂಟ್ ಕಾರ್ಖಾನೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಸೋಲಾಪುರ ರೈಲ್ವೆ ವಿಭಾಗಕ್ಕೆ ಜಿಲ್ಲೆಯಿಂದಲೇ ಹೆಚ್ಚಿನ ವರಮಾನ ಬರುತ್ತಿದೆ. ನಿತ್ಯ ನಾಲ್ಕೈದು ರೈಲುಗಳು ಕಲಬುರಗಿ ಮೂಲಕ ಬೆಂಗಳೂರಿಗೆ ಹೋಗುತ್ತಿದ್ದರೂ ವಂದೇ ಭಾರತ್ ರೈಲು ಬರುವವರೆಗೂ ಕಲಬುರಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕವೇ ಇರಲಿಲ್ಲ.
ಬಾಗಲಕೋಟೆಯಿಂದ ನಿತ್ಯ ಕಲಬುರಗಿ ಮೂಲಕ ಮೈಸೂರಿಗೆ ಸಂಚರಿಸುವ ‘ಬಸವ ಎಕ್ಸ್‌ಪ್ರೆಸ್’ ರೈಲಿನಲ್ಲಿ ಕಲಬುರಗಿಗಿಂತ ಹೆಚ್ಚು ರಿಸರ್ವೇಶನ್ ಕೋಟಾ ಮಹಾರಾಷ್ಟ್ರದ ಹುಟಗಿಯಿಂದ ಇದೆ! ಸೋಲಾಪುರ–ಹಾಸನ ಮಧ್ಯೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿಗೆ ಕಲಬುರಗಿಯಿಂದ ಟಿಕೆಟ್ ಪಡೆಯಲು ತಿಂಗಳ ಹಿಂದೆಯೇ ಬುಕಿಂಗ್ ಮಾಡಬೇಕಾಗಿದೆ. ದೆಹಲಿ–ಬೆಂಗಳೂರು ಮಧ್ಯೆ ಸಂಚರಿಸುವ ಕೆಕೆ ಎಕ್ಸ್‌ಪ್ರೆಸ್, ಮುಂಬೈ–ಬೆಂಗಳೂರು ಮಧ್ಯೆ ಸಂಚರಿಸುವ ಅತ್ಯಂತ ಹಳೆಯದಾದ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿಗೆ ಟಿಕೆಟ್ ಸಿಕ್ಕರೆ ಅದೃಷ್ಟ ಎಂಬಂತಾಗಿದೆ.
ಇದೆಲ್ಲ ಸಮಸ್ಯೆಗೆ ಪರಿಹಾರವೆಂದರೆ ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿಯನ್ನು ಆರಂಭಿಸುವುದು. ವಿಭಾಗ ಕೇಂದ್ರವಾದರೆ ಇಲ್ಲಿಂದಲೇ ನೇರ ರೈಲು ಸೌಲಭ್ಯ ಕಲ್ಪಿಸಬಹುದು. ನಿರುದ್ಯೋಗದಿಂದ ತತ್ತರಿಸಿದ ಜಿಲ್ಲೆಯ ಜನರಿಗೆ ಕೆಲ ಉದ್ಯೋಗಗಳನ್ನು ಸೃಷ್ಟಿ ಮಾಡಬಹುದು ಎನ್ನುತ್ತಾರೆ ಕಾರ್ಮಿಕ ಮುಖಂಡ ಎಸ್.ಎಂ. ಶರ್ಮಾ ಹಾಗೂ ನಿವೃತ್ತ ಎಂಜಿನಿಯರ್ ವೆಂಕಟೇಶ ಮುದಗಲ್.
ಅಂಕಿ ಅಂಶಗಳು ₹ 110 ಕೋಟಿ ಕಲಬುರಗಿ ನಿಲ್ದಾಣದಲ್ಲಿ ಟಿಕೆಟ್ ಮಾರಾಟದಿಂದ ವಾರ್ಷಿಕವಾಗಿ ಸಂಗ್ರಹವಾಗುವ ಹಣ 27000 ನಿತ್ಯ ಕಲಬುರಗಿಯಿಂದ ಹತ್ತುವ, ಇಳಿಯುವ ಪ್ರಯಾಣಿಕರು ₹ 500 ಕೋಟಿ ಕಲಬುರಗಿ, ಶಹಾಬಾದ್, ವಾಡಿ ನಿಲ್ದಾಣದಲ್ಲಿ ಸಂಗ್ರಹವಾಗುವ ಟಿಕೆಟ್ ವರಮಾನ
ಕಲಬುರಗಿಗೆ ವಿಭಾಗೀಯ ಕೇಂದ್ರದ ಸ್ಥಾನಮಾನ ನೀಡುವುದರಿಂದ ಹೆಚ್ಚಿನ ರೈಲಿನ ಸೌಲಭ್ಯ ಸಿಗಲಿದೆ. ಆದ್ದರಿಂದ ವಿಭಾಗ ಕೇಂದ್ರಕ್ಕೆ ಅನುಮೋದನೆ ನೀಡುವಂತೆ ಸಚಿವ ಸೋಮಣ್ಣ ಅವರಿಗೆ ಮನವಿ ಮಾಡಲಿದ್ದೇವೆಶರಣಬಸಪ್ಪ ಪಪ್ಪಾ ಕೆಕೆಸಿಸಿಐ ಅಧ್ಯಕ್ಷ
ಜಮ್ಮುವಿಗೆ ನ್ಯಾಯ ಕಲಬುರಗಿಗೆ ಅನ್ಯಾಯ! ರೈಲ್ವೆ ಇಲಾಖೆಯು ದಶಕದ ಬೇಡಿಕೆಯಾಗಿದ್ದ ಜಮ್ಮುವಿಗೆ ವಿಭಾಗೀಯ ಕಚೇರಿಯನ್ನು ಆರಂಭಿಸಲು ಮೇ 29ರಂದು ಅನುಮೋದನೆ ನೀಡಿದೆ. ಉತ್ತರ ರೈಲ್ವೆ ವಲಯದ ಫಿರೋಜ್‌ಪುರ ವಿಭಾಗದಲ್ಲಿದ್ದ 742 ಕಿ.ಮೀ. ಉದ್ದದ ರೈಲ್ವೆ ಜಾಲವು ಜಮ್ಮು ರೈಲ್ವೆ ವಿಭಾಗದ ವ್ಯಾಪ್ತಿಗೆ ಒಳಪಡಲಿದೆ. 1984ರಲ್ಲಿ ರಚನೆಯಾಗಿದ್ದ ಸರೀನ್ ಸಮಿತಿಯು ಜಮ್ಮು ಕಲಬುರಗಿಗೆ ರೈಲ್ವೆ ವಿಭಾಗ ಬೇಕು ಎಂದು ವರದಿ ನೀಡಿತ್ತು. ಜಮ್ಮುವಿಗೆ ನ್ಯಾಯ ಸಿಕ್ಕಿದೆ. ಆದರೆ ಕಲಬುರಗಿಗೆ ಈಗಲೂ ಅನ್ಯಾಯವಾಗುತ್ತಲೇ ಮುಂದುವರಿದಿದೆ. ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸುತ್ತಾರೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ಸುನೀಲ ಕುಲಕರ್ಣಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.