ಚಿತ್ತಾಪುರ: ಭಾನುವಾರ ಸಂಜೆ ರಭಸವಾಗಿ ಬೀಸಿದ ಗಾಳಿ ಮತ್ತು ಮಳೆಗೆ ತಾಲ್ಲೂಕಿನ ಸಾತನೂರು ಗ್ರಾಮದಲ್ಲಿ ಮಹೆಬೂಬ ಅಲಿ ಖಾಸೀಂಸಾಬ್ ತೋಟದ ಮನೆಯ ಪತ್ರಾಸ್ ಹಾರಿ, ಮನೆ ಕುಸಿದು ಬಿದ್ದು ನಾಲ್ವರಿಗೆ ಗಾಯವಾಗಿದೆ. ಭಾಗೋಡಿ ಗ್ರಾಮದ ರೈತ ದೇವಿಂದ್ರ ಅರಣಕಲ್ ಅವರ ತೋಟದಲ್ಲಿನ ಐದು ನೂರು ಬಾಳೆ ಗಿಡಗಳು ನೆಲಕ್ಕುರುಳಿ ಹಾನಿಯಾದ ಘಟನೆ ನಡೆದಿದೆ.
ಸಾತನೂರಲ್ಲಿ ಮಹೆಬೂಬ ಅಲಿ ಅವರ ಮನೆಯಲ್ಲಿದ್ದ ದೌಲಸಾಬ್ ಬಾಬುಮಿಯ್ಯಾ ಅವರ ತಲೆಗೆ, ಕಾಲಿಗೆ ಗಂಭೀರ ಗಾಯವಾಗಿದ್ದು ರಾತ್ರಿಯೇ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರುಕ್ಸಾನಾ ಖಾಜಾಮಿಯ್ಯ, ಹಸೀನಾಬೇಗಂ ಖದೀರ್ ಪಾಶಾ, ಖದೀರ ಪಾಶಾ ಮಹೆಬೂಬ ಅಲಿ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿತ್ತಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ದೌಲಸಾಬ್ ಅವರ ಆರೋಗ್ಯ ವಿಚಾರಿಸಲಾಗಿದೆ’ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ತಾಲ್ಲೂಕಿನ ಭಾಗೋಡಿ ಗ್ರಾಮದಲ್ಲಿ ರೈತ ದೇವಿಂದ್ರ ಅರಣಕಲ್ ಅವರ ಹೊಲದಲ್ಲಿನ ಅಂದಾಜು ಐದು ನೂರು ಬಾಳೆಗಿಡಗಳು ಬಿರುಗಾಳಿಗೆ ನೆಲಕ್ಕುರುಳಿವೆ. ಬಾಳೆ ಗಿಡಗಳು ಹಾನಿಯಾದ ಕುರಿತು ಮಾಹಿತಿ ಪಡೆದ ತೋಟಗಾರಿಕೆ ಇಲಾಖೆ ಅಧಿಕಾರಿ ಶಂಕರಗೌಡ ಅವರು ಸೋಮವಾರ ಮಧ್ಯಾಹ್ನ ಬಾಳೆ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶೀಘ್ರ ವರದಿ ನೀಡುವಂತೆ ಗ್ರಾಮ ಆಡಳಿತ ಅಧಿಕಾರಿಗೆ ಸೂಚಿಸಿದ್ದಾರೆ.
ಪಟ್ಟಣದ ಹೊರವಲಯದಲ್ಲಿನ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಬೈಕ್ ನಿಲುಗಡೆಗಾಗಿ ಸ್ಥಾಪಿಸಿದ್ದ ಪತ್ರಾಸ್ ಶೆಡ್ ಬಿರುಗಾಳಿಗೆ ಕಿತ್ತು ಕೆಳಗೆ ಬಿದ್ದಿದೆ. ಚಿತ್ತಾಪುರ-ರಾವೂರ ರಸ್ತೆ ಮಾರ್ಗದಲ್ಲಿ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ಸಮಸ್ಯೆಯಾಗಿತ್ತು. ಜೆಸ್ಕಾಂ ಸಿಬ್ಬಂದಿ ಸೋಮವಾರ ಮರ ತೆರವುಗೊಳಿಸಿದ್ದಾರೆ. ರಭಸವಾಗಿ ಬೀಸಿದ ಗಾಳಿಗೆ ಅಲ್ಲಲ್ಲಿ ಗಿಡಮರಗಳು ನೆಲಕ್ಕುರುಳಿವೆ. ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಾಗಿ ರಾತ್ರಿಯಿಡೀ ವಿದ್ಯುತ್ ಇಲ್ಲದೆ ಜನರು ಚಡಪಡಿಸಿದರು. ಸೋಮವಾರ ಬೆಳಗ್ಗೆ ವಿದ್ಯುತ್ ಸರಬರಾಜು ಆರಂಭವಾಗಿದೆ. ಪಟ್ಟಣದಲ್ಲಿಯೂ ರಾತ್ರಿ ಕೆಲಹೊತ್ತು ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಜನರು ಪರದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.