ADVERTISEMENT

ಹದಗೆಟ್ಟ ಹೆದ್ದಾರಿ: ಪ್ರಯಾಣಿಕರ ಪರದಾಟ

ನಾಗೂರ-ಹೇರೂರ ಕ್ರಾಸ್‌ವರೆಗೆ ಮೊಳಕಾಲುದ್ದ ಹೊಂಡ: ರೇವಗ್ಗಿ-ಕನ್ನಡಗಿ ಭಕ್ತರ ಪರದಾಟ

​ಪ್ರಜಾವಾಣಿ ವಾರ್ತೆ
Published 31 ಮೇ 2025, 5:44 IST
Last Updated 31 ಮೇ 2025, 5:44 IST
ಕಮಲಾಪುರ ತಾಲ್ಲೂಕಿನ ನಾಗೂರ-ಹೇರೂರ ಕ್ರಾಸ್‌ವರೆಗೆ ಹದಗೆಟ್ಟಿರುವ ಹೆದ್ದಾರಿ
ಕಮಲಾಪುರ ತಾಲ್ಲೂಕಿನ ನಾಗೂರ-ಹೇರೂರ ಕ್ರಾಸ್‌ವರೆಗೆ ಹದಗೆಟ್ಟಿರುವ ಹೆದ್ದಾರಿ   

ಕಮಲಾಪುರ: ಮಹಾಗಾಂವ ಕ್ರಾಸ್-ಚಿಂಚೋಳಿ ರಾಜ್ಯ ಹೆದ್ದಾರಿಯು ನಾಗೂರ ಗ್ರಾಮದಿಂದ ಹೆರೂರ ಕ್ರಾಸ್‌ವರೆಗೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿದೆ.

ಹೆದ್ದಾರಿ ತುಂಬೆಲ್ಲ ಮೊಳಕಾಲುದ್ದದ ಹೊಂಡ ಬಿದ್ದಿವೆ. ಕೆರೆಯಂತೆ ನೀರು ನಿಂತಿವೆ. ಸ್ವಲ್ಪ ಮಳೆಯಾದರೆ ಹೆದ್ದಾರಿ ಕಾಣುವುದೇ ಇಲ್ಲ. ಸಂಪೂರ್ಣ ಕೆಸರು, ನೀರು ಆವರಿಸಿಕೊಳ್ಳುತ್ತವೆ.

ವಾಹನ ಚಾಲಕರಿಗೆ ದಾರಿ ಕಾಣುವುದೆ ಇಲ್ಲ. ಅನೇಕ ವಾಹನಗಳು ಕಂದಕಕ್ಕೆ ಉರುಳಿವೆ. ಕೆಲವು ಕೆಸರಲ್ಲಿ ಸಿಕ್ಕಿಕೊಂಡಿವೆ. ರಾಜ್ಯ ಹೆದ್ದಾರಿಯಾಗಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಿದೆ. ರಟಕಲ್, ಕಾಳಗಿ, ಕಂದಗೂಳ, ಹೆರೂರ, ತಡಕಲ್, ಕೊಡ್ಲಿ ಸೇರಿದಂತೆ ತಾಲ್ಲೂಕು ಕೇಂದ್ರ ಚಿಂಚೋಳಿ ಮೂಲಕ ನೆರೆಯ ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ.

ADVERTISEMENT

ಹೆದ್ದಾರಿ ಪೂರ್ತಿ ಕೆಸರು ಗದ್ದೆಯಾಗಿರುವುದರಿಂದ ವಾಹನಗಳು ಕೆಸರಲ್ಲಿ ಸಿಕ್ಕಿಕೊಳ್ಳುವುದು, ಬೈಕ್‌ಗಳು ಸ್ಕ್ರಿಡ್ ಆಗಿ ಸವಾರರು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಹೆದ್ದಾರಿಯಾಗಿರುವುದರಿಂದ ರಾತ್ರಿ ಹೊತ್ತು ಸಹ ವಾಹನಗಳು ಸಂಚರಿಸುತ್ತವೆ. ಈ ಹದಗೆಟ್ಟ ರಸ್ತೆಯಲ್ಲಿ ವಾಹನಗಳು ಹಾಗೂ ಬೈಕ್‌ಗಳು ಕೇವಲ 10ರ ವೇಗದಲ್ಲಿ ಮಾತ್ರ ಚಲಿಸಬೇಕು. ಅನೇಕ ಬಾರಿ ವಾಹನಗಳು ಕೆಟ್ಟು ನಿಲ್ಲುತ್ತವೆ. ಈ ನಿರ್ಜನ ಪ್ರದೇಶದಲ್ಲಿ ಇದನ್ನೇ ಕಾಯುತ್ತಿರುವ ಕಳ್ಳರು, ಪ್ರಯಾಣಿಕರಿಂದ ಬಂಗಾರ, ದುಡ್ಡು, ಕಸಿದುಕೊಂಡು ಡಕಾಯಿತಿ ಮಾಡುತ್ತಿದ್ದಾರೆ. ಮಹಾಗಾಂವ ಕ್ರಾಸ್‌ನಿಂದಲೇ ಅಲ್ಲಲ್ಲಿ ಹೊಂಡಗಳು ಬಿದ್ದಿದ್ದು ಶಾಸಕರು ಹಾಗೂ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ರಸ್ತೆ ದುರಸ್ತಿಗೊಳಿಸಬೇಕು ಎಂದು ರೇವಗ್ಗಿಯ ಗಂಗಾಧರ ಸ್ವಾಮಿ, ನಾಗೂರ ಗ್ರಾಮದ ವೀರಭೂಷಣ ಸ್ವಾಮಿ ಒತ್ತಾಯಿಸಿದ್ದಾರೆ.

ಶ್ರಾವಣ ಮಾಸದಲ್ಲಿ ಸಂಚಾರ ದಟ್ಟಣೆ ಅಪಾರ

ಭಕ್ತ ಸಮೂಹ ಹೊಂದಿರುವ ರೇವಗ್ಗಿಯ ರೇವಣಸಿದ್ದೇಶ್ವರ ದೇವಸ್ಥಾನ ಕನ್ನಡಗಿಯ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಇದೇ ಮಾರ್ಗದ ಮೂಲಕ ತೆರಳಬೇಕು. ಕಲಬುರಗಿ ಬೀದರ್‌ ಸೇರಿದಂತೆ ಮಹಾರಾಷ್ಟ್ರ ತೆಲಂಗಾಣ ಆಂಧ್ರಪ್ರದೇಶದಿಂದ ಅಮಾವಾಸ್ಯೆಯ ಹುಣ್ಣಿಮೆಯಂದು ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಕೆಲವೇ ದಿನಗಳಲ್ಲಿ ಶ್ರಾವಣ ಮಾಸ ಆರಂಭಗೊಳ್ಳಲಿದ್ದು ದೇವಸ್ಥಾನಗಳಿಗೆ ಆಗಮಿಸುವ ಭಕ್ತರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಲಿದೆ. ಈ ಹದಗೆಟ್ಟ ರಸ್ತೆಯಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ದುರಸ್ತಿಗೊಳಿಸುವುದು ಅನಿವಾರ್ಯವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.