ADVERTISEMENT

ಶಹಾಬಾದ್: ಐವರ ಕೈ–ಕಾಲುಗಳನ್ನು ಕಟ್ಟಿ ದರೋಡೆ

ನಗರ ಸಭೆ ಮಾಜಿ ಸದಸ್ಯನ ಮನೆಯಲ್ಲಿ ₹ 15.26 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 15:56 IST
Last Updated 22 ಜೂನ್ 2025, 15:56 IST
ಶಹಾಬಾದ್ ನಗರದಲ್ಲಿ ದರೋಡೆಯಾದ ಮನೆಗೆ ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಡಿವೈಎಸ್‌ಪಿ ಶಂಕರಗೌಡ ಪಾಟೀಲ ಅವರು ಭೇಟಿ ನೀಡಿ ಪರಶೀಲನೆ ನಡೆಸಿದರು
ಶಹಾಬಾದ್ ನಗರದಲ್ಲಿ ದರೋಡೆಯಾದ ಮನೆಗೆ ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಡಿವೈಎಸ್‌ಪಿ ಶಂಕರಗೌಡ ಪಾಟೀಲ ಅವರು ಭೇಟಿ ನೀಡಿ ಪರಶೀಲನೆ ನಡೆಸಿದರು   

ಶಹಾಬಾದ್: ನಗರ ಸಭೆಯ ಮಾಜಿ ಸದಸ್ಯರೊಬ್ಬರ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳ ತಂಡ, ಮಾರಕಾಸ್ತ್ರಗಳನ್ನು ತೋರಿಸಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದೆ.

ಧಕ್ಕಾ ತಾಂಡಾದ ನಿವಾಸಿ, ನಗರ ಸಭೆಯ ಮಾಜಿ ಸದಸ್ಯರೂ ಆಗಿರುವ ಹಣಮಂತ ಪವಾರ್ ಅವರ ಮನೆಯಲ್ಲಿ ದರೋಡೆಯಾಗಿದೆ. ₹ 7 ಲಕ್ಷ ನಗದು, ಸೇರಿ ₹ 15.26 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ಶಹಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ರಾತ್ರಿ 1.30ರ ಸುಮಾರಿಗೆ ಚಾಂದಿಬಾಯಿ ಹಣಮಂತ ಅವರು ಶೌಚಾಲಯಕ್ಕಾಗಿ ಬಾಗಿಲು ತೆರೆದರು. ಹೊಂಚು ಹಾಕಿ ಮನೆಯ ಆವರಣದಲ್ಲಿ ಕುಳಿತಿದ್ದ ಐವರು ದುಷ್ಕರ್ಮಿಗಳು ಬಾಗಿಲು ತಳ್ಳಿ ಒಳ ಹೋದರು. ತಲ್ವಾರ್, ಚಾಕು ತೋರಿಸಿ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಹಾಕಿದರು. ಹಣಮಂತ, ಆತನ ಪತ್ನಿ ಚಾಂದಿಬಾಯಿ, ಪುತ್ರ ರಾಮು, ಸೊಸೆ ದೇವಿಬಾಯಿ, ಪುತ್ರಿ ಮಂಜುಳಾ ಹಾಗೂ ಅಳಿಯ ಕುಮಾರ್ ಅವರ ಕೈ–ಕಾಲುಗಳನ್ನು ಕಟ್ಟಿ ಹಾಕಿದರು. ಬಾಯಿಗೆ ಬಟ್ಟೆ ಸಹ ತುರುಕಿದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಚಾಂದಿಬಾಯಿ ಬಳಿ ಇದ್ದ ಅಲ್ಮೇರಾದ ಕೀ ಕಿತ್ತುಕೊಂಡರು. ಅಲ್ಮೇರಾದಲ್ಲಿ ಇರಿಸಿದ್ದ ₹ 7 ಲಕ್ಷ ನಗದು, ಬಹು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು, ಮಂಜುಳಾ ಮತ್ತು ದೇವಿಬಾಯಿ ಕೊರಳಲ್ಲಿದ್ದ ಚಿನ್ನದ ತಾಳಿಯ ಸರಗಳು, ಕಿವಿ ಒಲೆಗಳು, ಮೂಗುತಿಗಳು ಸೇರಿ ₹ 15.26 ಲಕ್ಷ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ ಎಂದಿದ್ದಾರೆ.

ದರೋಡೆಕೋರರು ಕಾಂಪೌಂಡ್ ಗೋಡೆ ಹಾರಿ ಮನೆ ಅಂಗಳ ಪ್ರವೇಶ ಮಾಡಿದ್ದಾರೆ. ಹಿಂದಿ, ಮರಾಠಿ ಮತ್ತು ಬಂಜಾರ ಭಾಷೆಯಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು. ಹಣಮಂತ ಪವಾರ್ ಅವರು ಎರಡ್ಮೂರು ತಿಂಗಳ ಹಿಂದೆಯಷ್ಟೇ ಹೊಸದಾಗಿ ಮನೆಯನ್ನು ಕಟ್ಟಿಸಿ ಗೃಹ ಪ್ರವೇಶವೂ ಮಾಡಿದ್ದರು. ದರೋಡೆಗೂ ಮುನ್ನ ದುಷ್ಕರ್ಮಿಗಳು ಧಕ್ಕಾ ತಾಂಡಾ ಪ್ರದೇಶದ ಖಾಲಿ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದರು. ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣವರ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಐ ನಟರಾಜ ಲಾಡೆ ಅವರು ಶ್ವಾನ ದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಫ್‌ಎಸ್‌ಎಲ್‌ ತಂಡದವರು ಬೆರಳಚ್ಚು ಗುರುತು ಪಡೆದಿದ್ದಾರೆ.

ದೂರುದಾರರ ಹೇಳಿಕೆಯನ್ನು ಆಧರಿಸಿ ಆರೋಪಿಗಳ ಪತ್ತೆಗೆ ಶೋಧಕಾರ್ಯ ನಡೆಸಲಾಗುತ್ತಿದೆ. ತಾಂತ್ರಿಕ ಸಾಕ್ಷಾಧಾರಗಳನ್ನು ಕಲೆ ಹಾಕಲಾಗಿದೆ
ಶಂಕರಗೌಡ ಪಾಟೀಲ ಡಿವೈಎಸ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.