ADVERTISEMENT

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ಸಾಹಿತಿ ಡಾ. ಸರಸ್ವತಿ ಚಿಮ್ಮಲಗಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 11:33 IST
Last Updated 15 ಸೆಪ್ಟೆಂಬರ್ 2021, 11:33 IST
ಸರಸ್ವತಿ 
ಸರಸ್ವತಿ    

ಕಲಬುರ್ಗಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಮೂಲಕ ಕಾಮುಕರಿಗೆ ತಕ್ಕ ಪಾಠ ಕಲಿಸಬೇಕು ಎಂದು ಸಾಹಿತಿ ಡಾ. ಸರಸ್ವತಿ ಚಿಮ್ಮಲಗಿ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈಸೂರು, ಬೆಂಗಳೂರು, ಚಿತ್ರದುರ್ಗ, ಬೆಳಗಾವಿ, ರಾಯಚೂರು, ಯಾದಗಿರಿ, ವಿಜಯಪುರ, ಕಲಬುರ್ಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭೀಕರ ಅತ್ಯಾಚಾರ ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಲು ನಮ್ಮ ಕಾನೂನುಗಳು ಸೋತಿವೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮನೆ, ಕಾಲೇಜು, ಉದ್ಯಾನವನ, ರಸ್ತೆ ಹೀಗೆ ಮಹಿಳೆ ಎಲ್ಲಿಯೂ ಸುರಕ್ಷಿತವಾಗಿಲ್ಲ. ಇಂತಹ ಅಪಾಯಕಾರಿ ಬೆಳವಣಿಗೆ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕಾಗಿದೆ. ಹೆಣ್ಣಿನ ಮಾನ, ಪ್ರಾಣಕ್ಕೆ ಧಕ್ಕೆ ತಂದ ವ್ಯಕ್ತಿ ಎಷ್ಟೇ ದೊಡ್ಡವನಾದರೂ ಅಂಥವನಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

‘ಮೈಸೂರಿನಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆದ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಯುವತಿ ಸಂಜೆ ಹೊತ್ತಿನಲ್ಲಿ ಅಲ್ಲಿಗೆ ಹೋಗಬಾರದಿತ್ತು ಎಂಬ ಹೇಳಿಕೆ ನೀಡಿದ್ದಾರೆ. ಇದೊಂದು ಅಸೂಕ್ಷ್ಮ ಹೇಳಿಕೆಯಾಗಿದೆ. ಕಾನೂನು ಸುವ್ಯವಸ್ಥೆ ಸರಿಯಾಗಿದ್ದರೆ, ಅತ್ಯಾಚಾರಿಗಳಿಗೆ ಸಕಾಲಕ್ಕೆ ಕಠಿಣ ಶಿಕ್ಷೆ ಆಗಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದರು.

ADVERTISEMENT

‘ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಗೊಳಗಾದ ಮಹಿಳೆಯರ ರಕ್ಷಣೆ ಮಾಡಬೇಕಾದ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ತ್ರೀಕುಲವನ್ನು ಉಪೇಕ್ಷಿಸುತ್ತಿರುವುದು ಖಂಡನೀಯ’ ಎಂದು ಹೇಳಿದರು.

ಇಂದು ವಿಶ್ವದಾದ್ಯಂದ ವಿಶೇಷವಾಗಿ ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರು ಮಹಿಳೆಯರ ಎಲ್ಲ ಬಗೆಯ ಹಕ್ಕುಗಳನ್ನು ಮೊಟಕುಗೊಳಿಸಿದ್ದಾರೆ. ಇದನ್ನು ನೋಡಿಯೂ ವಿಶ್ವಸಂಸ್ಥೆ ತುಟಿಪಿಟಕ್ ಎನ್ನದೇ ಏಕೆ ಸುಮ್ಮನಿದೆ ಎಂದು ಚಿಮ್ಮಲಗಿ ಪ್ರಶ್ನಿಸಿದರು.

ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷ ವಿಜಯಕುಮಾರ ಚಿಮಕೋಡ, ಕವಿತಾ ಮಾಳಗಿ, ಶಿವರಾಜ ಪಾಟೀಲ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.