ADVERTISEMENT

ಮುಕ್ತಾಯ ಹಂತದಲ್ಲಿ ಪರಿಶಿಷ್ಟರ ಸಮೀಕ್ಷೆ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್

​ಪ್ರಜಾವಾಣಿ ವಾರ್ತೆ
Published 17 ಮೇ 2025, 15:49 IST
Last Updated 17 ಮೇ 2025, 15:49 IST
ಫೌಜಿಯಾ ತರನ್ನುಮ್
ಫೌಜಿಯಾ ತರನ್ನುಮ್   

ಚಿಂಚೋಳಿ (ಕಲಬುರಗಿ ಜಿಲ್ಲೆ): ಪರಿಶಿಷ್ಟರ ಸಮೀಕ್ಷೆಯು ಕಲಬುರಗಿ ಜಿಲ್ಲೆಯಲ್ಲಿ‌ ಬಹುತೇಕ‌ ಮುಕ್ತಾಯದ ಹಂತದಲ್ಲಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ತಾಲ್ಲೂಕಿನ ಚಿಮ್ಮಾಈದಲಾಯಿ ಗ್ರಾಮಕ್ಕೆ ಭೇಟಿ ನೀಡಿದ ಅವರು ನ್ಯಾ. ನಾಗಮೋಹನದಾಸ್ ಏಕ ಸದಸ್ಯ ಆಯೋಗದ ಪರಿಶಿಷ್ಟರ ಸಮೀಕ್ಷೆ ಖುದ್ದು ಪರಿಶೀಲಿಸಿ ಮನೆಯವರಿಂದ ಹಾಗೂ ಗಣತಿದಾರರಿಂದ ಮಾಹಿತಿ ಪಡೆದರು.

‘ವಲಸೆ ಹೋದವರು ಬಂದು‌ ಮಾಹಿತಿ ನೀಡಲು ಸಮಯ ನೀಡುತ್ತೇವೆ. ಜತೆಗೆ ಆಂದೋಲನ ರೂಪದಲ್ಲೂ ಸಮೀಕ್ಷೆ ನಡೆಸಿ ಮುಕ್ತಾಯಗೊಳಿಸುತ್ತೇವೆ’ ಎಂದರು.

ADVERTISEMENT

ಮುಖಂಡ ಶಿವಯೋಗಿ ರುಸ್ತಂಪುರ ಮಾತನಾಡಿ, ‘ಬೇಡ ಜಂಗಮ ಹಾಗೂ ಗೊಂಡ ಜಾತಿ ನಮೂದಿಸುತ್ತಿದ್ದಾರೆ’ ಎಂದರು. ಆಗ ಜನರು ನೀಡುವ ಮಾಹಿತಿಯನ್ನು ಅವರ ದೃಢೀಕರಣದೊಂದಿಗೆ ಪಡೆಯುತ್ತೇವೆ. ಅವರು ದೃಢೀಕರಿಸಿದ ದಾಖಲೆ ಉಪ ಖಜಾನೆಯಲ್ಲಿ ಸಂಗ್ರಹಿಸಿಡಲಾಗುವುದು. ಈ ಸಮೀಕ್ಷೆಯಲ್ಲಿ ಸುಳ್ಳು ಜಾತಿ‌ ನಮೂದಿಸಿದವರಿಗೆ ಜಾತಿ ಪ್ರಮಾಣ ಪತ್ರ ಸಿಗುವುದಿಲ್ಲ ಎಂದರು.

ಸೇಡಂ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ ಮಾತನಾಡಿ, ‘ತಾಲ್ಲೂಕಿನಲ್ಲಿ ಶೇ 95ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಅಳಿದುಳಿದ ಸಮೀಕ್ಷೆ ನಡೆಸಲಾಗುತ್ತಿದೆ. ಈ ವರೆಗೆ 23,459 ಪರಿಶಿಷ್ಟರ ಮನೆ ಹಾಗೂ 41,818 ಪರಿಶಿಷ್ಟ ಜಾತಿಯೇತರ ಮನೆಗಳನ್ನು ಭೇಟಿ ನೀಡಿ‌ ಮಾಹಿತಿ ದಾಖಲಿಸಿಕೊಳ್ಳಲಾಗಿದೆ’ ಎಂದರು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ವೆಂಕಟೇಶ ದುಗ್ಗನ್, ಟಿಎಚ್‌ಒ ಡಾ. ಮಹಮ್ಮದ್ ಗಫಾರ್, ಕಂದಾಯ ನಿರೀಕ್ಷಕ ರವಿ ಪಾಟೀಲ, ಕೇಶವ ಕುಲಕರ್ಣಿ, ಆರೀಫ್, ಗ್ರಾಮ ಆಡಳಿತಾಧಿಕಾರಿ ಅನಿತಾ, ಬಿಇಒ ಲಕ್ಷ್ಮಯ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ, ಬಂಡಪ್ಪ‌ ಹೋಳ್ಕರ್, ಬಸವರಾಜ ಸೈದರಕನೋರ ಮೊದಲಾದವರು ಇದ್ದರು.

ನಂತರ ಜಿಲ್ಲಾಧಿಕಾರಿ ಪುರಸಭೆ, ನೂತನ ಆಡಳಿತ ಸೌಧ, ಡಾ.ಬಿ.ಆರ್. ಅಂಬೇಡ್ಕರ್, ಡಾ.ಬಾಬು ಜಗಜೀವನರಾಂ ವೃತ್ತ, ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.