ಕಲಬುರ್ಗಿ: ಮುಂದಿನ ಪೀಳಿಗೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುವ ಶಿಕ್ಷಣ ಕ್ಷೇತ್ರಕ್ಕೆ ಭಾರತ ಸರ್ಕಾರ ಜಿಡಿಪಿಯ ಶೇ 6ರಷ್ಟು ಹಣವನ್ನು ಮೀಸಲಿಡಬೇಕು. ಈಗ ಖರ್ಚು ಮಾಡುತ್ತಿರುವ ಶೇ 1.7ರಷ್ಟು ಹಣ ಯಾವುದಕ್ಕೂ ಸಾಕಾಗದು ಎಂದು ಚಿತ್ತಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶರಣಬಸಪ್ಪ ಸೈದಾಪುರ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ಉಪನ್ಯಾಸ ಮಾಲೆಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಲು ಸಾಧ್ಯವಾದರೆ ಶಾಲಾ, ಕಾಲೇಜುಗಳಲ್ಲಿ ಉತ್ತಮ ಮೂಲಸೌಕರ್ಯಗಳನ್ನು ಕಲ್ಪಿಸಲು, ನುರಿತ ಬೋಧನಾ ಸಿಬ್ಬಂದಿಯನ್ನು ಹೊಂದಲು ಸಾಧ್ಯವಾಗುತ್ತದೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟವೂ ಹೆಚ್ಚಲಿದೆ’ ಎಂದರು.
20ನೇ ಶತಮಾನವು ಸಾಮಾಜಿಕ ಸಂಘಟನೆಗೆ ಸಾಕ್ಷಿಯಾದರೆ, 21ನೇ ಶತಮಾನವು ಸಾಮಾಜಿಕ ವಿಘಟನೆಗೆ ಸಾಕ್ಷಿಯಾಗುವ ದುರಂತವನ್ನು ನಾವು ಕಾಣುತ್ತಿದ್ದೇವೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಂಡಿದ್ದ ಕನಸು ನನಸಾಗಿದೆಯೇ ಎಂಬುದನ್ನು ನೆನೆಸಿಕೊಂಡರೆ ನಿರಾಸೆಯಾಗುತ್ತದೆ. ಎಂಬಿಬಿಎಸ್, ಬಿಇ ಓದಿದವರಿಗೆ ಸೂಕ್ತ ಉದ್ಯೋಗ ಸಿಗದೇ ಇರುವುದರಿಂದ ನಕ್ಸಲೈಟ್‌ಗಳಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಅದು ಈಗ ಈಡೇರಿದೆಯೇ ಎಂದು ಪ್ರಶ್ನಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಶಂಕ್ರೆಪ್ಪ ಹತ್ತಿ, ‘ಆಗಸ್ಟ್ 15ರಂದು ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವದ ಕಾರ್ಯಾಚರಣೆ ನಾಟಕವನ್ನು ಎನ್‌ಸಿಸಿ ಘಟಕದ ವಿದ್ಯಾರ್ಥಿಗಳು ಮಾಡಲಿದ್ದಾರೆ. ಅದನ್ನು ಡ್ರೋಣ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗುವುದು. ಕೋವಿಡ್ ಮಾರ್ಗಸೂಚಿಗಳನ್ನೂ ಪಾಲಿಸಬೇಕಿರುವುದರಿಂದ ಎಲ್ಲ ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸುವ ಬದಲು ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳನ್ನು ದೂರದಲ್ಲಿ ಕೂರಿಸಿ ಉಪನ್ಯಾಸ ನೀಡಲಾಗುತ್ತಿದೆ ಎಂದರು.
ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಾಗಪ್ಪ ಗೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಎಸ್‌ಎಸ್ ಅಧಿಕಾರಿ ಡಾ. ಶ್ರೀಮಂತ ಬಿ. ಹೋಳಕರ ಸ್ವಾಗತಿಸಿದರು. ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಕಾಂತ ಜಮಾದಾರ ವಂದನಾರ್ಪಣೆ ಮಾಡಿದರು. ಸ್ನಾತಕ ವಿಭಾಗದ ಡೀನ್ ಡಾ. ಅನಿಲಕುಮಾರ್ ಬಿ. ಹಾಲು ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.