ADVERTISEMENT

ಜೀವ ಉಳಿಸಿದ ಶಿಲ್ಪಿಗೆ ಅವಮಾನ, ಕೊಂದವನಿಗೆ ಪೂಜೆ

ವಿಶೇಷ ಉಪನ್ಯಾಸದಲ್ಲಿ ಸಿಯುಕೆ ಸಹಾಯಕ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಬೇಸರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 3:57 IST
Last Updated 16 ಸೆಪ್ಟೆಂಬರ್ 2022, 3:57 IST
ಚಿತ್ತಾಪುರ ಪಟ್ಟಣದ ಆರ್.ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಗುಲಬರ್ಗಾ ವಿವಿ ಗಣಿತಶಾಸ್ತ್ರ ಪ್ರಾಧ್ಯಾಪಕ ಡಾ.ಎಸ್.ಎನ್. ಗಾಯಕವಾಡ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು
ಚಿತ್ತಾಪುರ ಪಟ್ಟಣದ ಆರ್.ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಗುಲಬರ್ಗಾ ವಿವಿ ಗಣಿತಶಾಸ್ತ್ರ ಪ್ರಾಧ್ಯಾಪಕ ಡಾ.ಎಸ್.ಎನ್. ಗಾಯಕವಾಡ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು   

ಚಿತ್ತಾಪುರ: ‘ದೇಶವು ಪ್ರಸ್ತುತ ವಿಚಿತ್ರ ವಿದ್ಯಾಮಾನಕ್ಕೆ ಸಾಕ್ಷಿಯಾಗುತ್ತಿದ್ದು, ವಿಶೇಷ ಮತದಾನ ಹಕ್ಕಿನ ಬೇಡಿಕೆ ಹಿಂಪಡೆದು ಮಹಾತ್ಮ ಗಾಂಧಿ ಜೀವ ಉಳಿಸಿದ ಡಾ.ಅಂಬೇಡ್ಕರ್ ಅವರನ್ನು ಅವಮಾನಿಸುವ ಮತ್ತು ಗಾಂಧಿಯನ್ನು ಕೊಂದವನಿಗೆ ಪೂಜಿಸುವ ಕೆಲಸ ನಡೆಯುತ್ತಿದೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಆರ್.ಕೆ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸ್ನಾತಕ್ಕೋತ್ತರ ಹಾಗೂ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ವಿಚಾರ ವೇದಿಕೆಯಿಂದ ಗುರುವಾರ ಹಮ್ಮಿಕೊಂಡಿದ್ದ 'ಪ್ರಬುದ್ಧ ಭಾರತ ನಿರ್ಮಾಣದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಪಾತ್ರ' ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಮನುಧರ್ಮ ಶಾಸ್ತ್ರ ಬಹುಸಂಖ್ಯಾತರಿಗೆ ಯಾವುದನ್ನು ನಿರಾಕರಿಸಿತ್ತೊ ಸ್ವಾತಂತ್ರ್ಯ ನಂತರದ ಭಾರತದಲ್ಲಿ ಸಂವಿಧಾನ ಎಲ್ಲವನ್ನು ನೀಡಿದೆ. ಮನುಧರ್ಮಶಾಸ್ತ್ರದ ಪರ್ಯಾಯವೇ ಸಂವಿಧಾನ. ಇದೇ ಕಾರಣದಿಂದ ಇಂದಿಗೂ ಸಹ ಸಂವಿಧಾನ ಶಿಲ್ಪಿಗೆ ಅಸ್ಪೃಶ್ಯತೆಯ ಕಣ್ನೋಟದಿಂದ ನೋಡುವ ಮನೋಭಾವ ಇದೆ ಎಂದು ಅವರು ಹೇಳಿದರು.

ADVERTISEMENT

‘ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ದಲಿತರ ಸಂವಿಧಾನ ಎನ್ನುವ ಕೆಟ್ಟ ಅಪನಂಬಿಕೆಯನ್ನು ಕಳೆದ ಏಳು ದಶಕಗಳಿಂದ ಹರಡಲಾಗಿದೆ. ಕಾನೂನು ಉಲ್ಲಂಘಿಸಿದರೆ ಶಿಕ್ಷೆಯಿದೆ. ಅದೇ ಕಾನೂನು ಸಂವಿಧಾನದಲ್ಲಿದೆ ಎಂದು ಮರೆತು ಸಂವಿಧಾನ ವಿರೋಧವಾಗಿ ಮಾತನಾಡಲಾಗುತ್ತಿದೆ. ಸಂವಿಧಾನವನ್ನೆ ಸುಟ್ಟರೂ ದೇಶ ಮೌನವಾಗುತ್ತದೆ. ಅಂಬೇಡ್ಕರ್ ದಲಿತ ಎಂಬುದೇ ಅದಕ್ಕೆ ಕಾರಣ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಅಂಬೇಡ್ಕರ್ ಇಂದಿಗೂ ಅರ್ಥವಾಗಿಲ್ಲ. ಒಬ್ಬ ಅಂಬೇಡ್ಕರ್ ಒಳಗೆ ಬಹು ಆಯಾಮವಿದೆ. ಅಂಬೇಡ್ಕರ್ ಅವರನ್ನು ಅವರ ಸಂವಿಧಾನ, ಅವರ ಸಾಹಿತ್ಯ, ವಿಭಿನ್ನ ಚಿಂತನೆ, ತತ್ವ, ವಿಚಾರಗಳಿಂದ ಅರಿಯುವ ಕೆಲಸ ಮಾಡಬೇಕು ಎದು ಅವರು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಎನ್ ಗಾಯಕವಾಡ್ ಮಾತನಾಡಿ, ದೇಶದ ಪ್ರಭುತ್ವವು ಸರ್ಕಾರಿ ಇಲಾಖೆ, ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣ ಮಾಡುವ ಕೆಲಸ ತ್ವರಿತವಾಗಿ ಮಾಡುತ್ತಿದೆ. ದಲಿತ, ಹಿಂದುಳಿದ ಶೋಷಿತ ಸಮುದಾಯದ ಮೀಸಲಾತಿ ಸೌಲಭ್ಯ ಕಸಿದುಕೊಳ್ಳಲು ಖಾಸಗೀಕರಣ ನೀತಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಭವಿಷ್ಯದಲ್ಲಿ ಶೋಷಿತರ ಮೀಸಲಾತಿಗೆ ಧಕ್ಕೆಯುಂಟಾಗಿ ದೊಡ್ಡ ಗಂಡಾತರ ಎದುರಾಗಲಿದೆ. ಸಂವಿಧಾನ ಸಂರಕ್ಷಣೆ ಮಾಡುವ ಮತ್ತು ಖಾಸಗೀಕರಣ ನೀತಿ ತಡೆಯುವ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಶಿವಶರಣಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕಿ ಡಾ.ಸಾವಿತ್ರಿ ಕುಲಕರ್ಣಿ, ಡಾ.ಪಂಡಿತ್ ಬಿ.ಕೆ, ಡಾ.ಶರಣಪ್ಪ ಸೈದಾಪುರ, ಡಾ.ಅನಿಲಕುಮಾರ, ಡಾ.ಮಲ್ಲಪ್ಪ ಮಾನೇಗಾರ್, ಡಾ.ಶರಣಪ್ಪ ರಾಯಕೋಟೆ, ಡಾ,ಪರವಿನ್ ಫಾತೀಮಾ, ಮರೆಪ್ಪ ಮೇತ್ರೆ, ಶಿವಲಿಂಗಪ್ಪ ಕಂಬಾರ ಇದ್ದರು.

ಡಾ.ಬಿ.ಆರ್ ಅಂಬೇಡ್ಕರ್ ವಿಚಾರ ವೇದಿಕೆಯ ಸಂಯೋಜಕ ಡಾ.ಶ್ರವಣ ಕಾಂಬಳೆ ಸ್ವಾಗತಿಸಿದರು. ಡಾ.ಭಾಗ್ಯಲಕ್ಷ್ಮಿ ರೆಡ್ಡಿ ನಿರೂಪಿಸಿದರು.

ಪ್ರಾಧ್ಯಾಪಕಿ ನುಜಹತ್ ಪರವಿನ್ ವಂದಿಸಿದರು.

ಮೋನಿಕಾ ದಂಡೋತಿ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಸೀಮಾ ಸಂಗಡಿಗರು ಅಂಬೇಡ್ಕರ್ ಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.