ADVERTISEMENT

ಕಲಬುರಗಿ | ‘ಅಪ್ಪ’ ಗದ್ದುಗೆಗೆ ಹಾಲು, ತುಪ್ಪ ಎರೆದ ಕುಟುಂಬಸ್ಥರು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:39 IST
Last Updated 17 ಆಗಸ್ಟ್ 2025, 6:39 IST
ಶರಣಬಸವಪ್ಪ ಅಪ್ಪ ಅವರ ಕುಟುಂಬಸ್ಥರು ಗದ್ದುಗೆಗೆ ಶನಿವಾರ ಹಾಲು, ತುಪ್ಪ ಸಮರ್ಪಿಸಿದರು
ಶರಣಬಸವಪ್ಪ ಅಪ್ಪ ಅವರ ಕುಟುಂಬಸ್ಥರು ಗದ್ದುಗೆಗೆ ಶನಿವಾರ ಹಾಲು, ತುಪ್ಪ ಸಮರ್ಪಿಸಿದರು   

ಕಲಬುರಗಿ: ಮಳೆ ನಿಂತರೂ ಮರದ ಹನಿ ನಿಲ್ಲದು ಎಂಬ ಮಾತಿನಂತೆ, ಕಲಬುರಗಿಯಲ್ಲಿ ಮಳೆಯೂ ನಿಂತಿಲ್ಲ, ಶರಣಬಸವಪ್ಪ ಅಪ್ಪ ಅವರ ಭಕ್ತರ ಕಂಬನಿಯೂ ನಿಂತಿಲ್ಲ.

ಆ.14ರಂದು ಶಿವೈಕ್ಯರಾದ ಶರಣಬಸವೇಶ್ವರ ಸಂಸ್ಥಾನದ ಎಂಟನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ಗದ್ದುಗೆಗೆ ಕುಟುಂಬಸ್ಥರು ಶನಿವಾರ 3ನೇ ದಿನದ ವಿಧಿವಿಧಾನ ನೆರವೇರಿಸಿದರು. ಶರಣಬಸವೇಶ್ವರ ದೇವಾಲಯದ ಆವರಣದಲ್ಲಿರುವ ಶರಣಬಸವಪ್ಪ ಅಪ್ಪ ಅವರ ಗದ್ದುಗೆಗೆ ಪುತ್ರ, 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಶರಣಬಸವಪ್ಪನವರ ಪತ್ನಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ ದಾಕ್ಷಾಯಣಿ ಅಪ್ಪ ಮತ್ತು ಕುಟುಂಬಸ್ಥರು ಹಾಲು– ತುಪ್ಪ ಎರೆದು, ಪುಷ್ಟ ಅರ್ಪಿಸಿ ನಮನ ಸಲ್ಲಿಸಿದರು.

ಶರಣಬಸವೇಶ್ವರ ಅಪ್ಪ ಕ್ರಿಯಾಸಮಾಧಿಗೆ ಬರಲು ಆಗದ ಭಕ್ತರು ಶನಿವಾರ ಬಂದು ಗದ್ದುಗೆ ದರ್ಶನ ಪಡೆಯುತ್ತಿದ್ದ ಚಿತ್ರಣ ಇಡೀ ದಿನ ಕಂಡುಬಂತು. ಶರಣಬಸವಪ್ಪ ಗದ್ದುಗೆ ನೋಡುತ್ತಾ ನಿಸ್ತೇಜವಾಗಿ ನಿಂತಿದ್ದ ನಾಲವಾರ ಬಳಿಯ ಮಳಗಿ ಗ್ರಾಮದ ರೈತ ಅಯ್ಯಪ್ಪ ಜಡಿ, ‘ನನಗೆ ನಿನ್ನೆ ಬರಲು ಆಗಲಿಲ್ಲ ರೀ, ಅದಕ್‌ ಇವತ್ತು ಬೆಳಿಗ್ಗೆ ಓಡೋಡಿ ಬಂದೆ’ ಎಂದು ಕಣ್ಣೀರಾದರು.

ADVERTISEMENT

ಮುಳಗುಂದ ತಂಡದ ಭಜನೆ: ಗದಗ ಜಿಲ್ಲೆಯ ಮುಳಗುಂದದಿಂದ ಬಂದಿದ್ದ 24 ಜನರಿದ್ದ ಭಜನಾ ಮೇಳದವರು, ಶರಣಬಸವೇಶ್ವರನಿಗೆ ಹಣೆಮಣಿದು ಶರಣಬಸವಪ್ಪ ಅವರ ಗದ್ದುಗೆ ದರ್ಶನ ಪಡೆದು ದೇವಾಲಯದ ಆವರಣದಲ್ಲೇ ಭಜನೆಯಲ್ಲಿ ತೊಡಗಿದ್ದರು. ಸಂತ ಶಿಶುನಾಳ ಶರೀಫರ ತತ್ವಪದಗಳನ್ನು ಹಾಡುತ್ತಿದ್ದರೆ, ದರ್ಶನಕ್ಕೆ ಸರತಿಯಲ್ಲಿ ನಿಂತಿದ್ದ ಭಕ್ತರು ಕಿವಿಯಾಗಿದ್ದರು. ಕ್ರಿಯಾಸಮಾಧಿಗೆ ಬಂದಿದ್ದವರೂ ಬೆಳಿಗ್ಗೆಯೇ ಮತ್ತೆ ಶರಣಬಸವೇಶ್ವರ ದೇವಸ್ಥಾನದ ಆವರಣಕ್ಕೆ ಬಂದು ದರ್ಶನ ಪಡೆಯುತ್ತಿದ್ದುದು ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.