ಕಲಬುರಗಿ: ‘ಶಿವಾಜಿ ಮಹಾರಾಜರು ವೀರ, ಶೂರರಾಗಿದ್ದರು, ಚತುರ ಚಾಣಕ್ಷರಾಗಿದ್ದರು. ಅಫಘಾನ್ ಮುಸ್ಲಿಂ ದೊರಗಳ ಕಪಿಮುಷ್ಟಿಯಲ್ಲಿದ್ದ ಹಿಂದೂಸ್ತಾನದಲ್ಲಿ ಹಿಂದೂ–ಮರಾಠ ಸಾಮ್ರಾಜ್ಯ, ಸ್ವರಾಜ್ಯ ಸ್ಥಾಪಿಸಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಡಳಿತ ನಡೆಸಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ’ ಎಂದು ಸಾಹಿತಿ ಶಿವರಾಜ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಕಲಾ ಮಂಡಲದಲ್ಲಿ ಕರ್ನಾಟಕ ವಿಕಾಸ ರಂಗದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕೊಲೆ, ಸುಲಿಗೆ ಮಹಿಳೆಯರ ಅತ್ಯಾಚಾರದಂತಹ ಘಟನೆಗಳು ಶಿವಾಜಿ ಮೇಲೆ ಗಾಢವಾದ ಪ್ರಭಾವ ಬೀರಿದ್ದವು. ಅದಕ್ಕಾಗಿ ಮಹಿಳೆಯರ, ಮುಗ್ದರ, ದೇಶರಕ್ಷಣೆಗೆ ಕಟ್ಟಿಬದ್ಧರಾಗಿ ನಿರಂತರ ಹೋರಾಟ ಮಾಡುತ್ತಾರೆ. ಪಶ್ಚಿಮ ಘಟ್ಟದಲ್ಲಿ ಬೆಳೆದ ಶಿವಾಜಿ ಎಂಬ ಸಿಂಹದ ಗರ್ಜನೆಗೆ ಶತ್ರು ರಾಜರ ಮಟ್ಟವನ್ನು ಅಡಗಿಸಿ ರಾಜ್ಯಭಾರ ಮಾಡಿದ್ದು, ಪರಕೀಯರನ್ನು ಈ ದೇಶದಿಂದ ಓಡಿಸಬೇಕೆಂದು ಪಣತೊಟ್ಟ ಶಿವಾಜಿ ಆಡಳಿತ ಪ್ರಪಂಚಕ್ಕೆ ಮಾದರಿಯಾಗಿದೆ. ಅವರು ಮುಸ್ಲಿಂ ದೊರೆಗಳ ವಿರೋಧಿಯಾಗಿದ್ದರೇ ಹೊರತು ಮುಸ್ಲಿಮರ ವಿರೋಧಿಯಾಗಿರಲಿಲ್ಲ’ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಪುಸ್ತಕೋದ್ಯಮಿ ಬಸವರಾಜ ಕೊನೇಕ್ ಮಾತನಾಡಿ, ‘ವ.ಚ. ಚೆನ್ನೇಗೌಡರ ನೇತೃತ್ವದಲ್ಲಿ ಕರ್ನಾಟಕ ರಂಗ ವಿಕಾಸ ನಾಡು–ನುಡಿಗೋಸ್ಕರವಾಗಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತ ಬರಲೆಂದು ಶುಭಹಾರೈಸಿದರು.
ಚಿ.ಸಿ.ನಿಂಗಣ್ಣ ಅವರು ರಚಿಸಿದ ಛತ್ರಪತಿ ಶಿವಾಜಿ ಮಹಾರಾಜರ ಕೃತಿಯನ್ನು ಹಿಂದುಳಿದ ವರ್ಗಗಳ ಮುಖಂಡ ಶರಣಪ್ಪ ತಳವಾರ ಲೋಕಾರ್ಪಣೆ ಮಾಡಿದರು.
ವಿಜಯಕುಮಾರ್ ರೋಣದ ಪ್ರಾರ್ಥನೆ ನಡೆಸಿಕೊಟ್ಟರು, ಚಿ.ಸಿ. ನಿಂಗಣ್ಣ ಪ್ರಸ್ತಾವಿಕವಾಗಿ ಮಾತನಾಡಿದರು. ದೇವಿದಾಸ್ ಪವಾರ್ ಸ್ವಾಗತಿಸಿದರು. ಶಂಕರ ಬಾಳಿ ಕಾರ್ಯಕ್ರಮ ನಿರೂಪಿಸಿದರು. ಅನ್ನಪೂರ್ಣ ಗಂಗಣೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.