ಕಲಬುರಗಿ: ಇಲ್ಲಿನ ಕೇಸರಿನಂದನ ಯುವ ಬಿಗ್ರೇಡ್ ವತಿಯಿಂದ ಶನಿವಾರ ಹನುಮಾನ ಜಯಂತಿ ಅಂಗವಾಗಿ ರಾಮತೀರ್ಥ ಮಂದಿರದಿಂದ ಜಗತ್ ವೃತ್ತದವರೆಗೆ 14 ಅಡಿ ಎತ್ತರದ ಪವನಪುತ್ರನ ಮೂರ್ತಿಯ ಅದ್ದೂರಿ ಶೋಭಾಯಾತ್ರೆ ಜರುಗಿತು.
ಅಳಂದ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ರಾಮತೀರ್ಥ ಮಂದಿರದಲ್ಲಿ ಬೆಳಿಗ್ಗೆ ‘ಪವಮಾನ’ ಹವನ, ವಿಶೇಷ ಪೂಜೆ ನಡೆಯಿತು. ಅಲಂಕೃತ ತೆರೆದ ವಾಹನದಲ್ಲಿ ಆಂಜನೇಯನ ಪ್ರತಿಮೆ ಇರಿಸಿ, ಶ್ರೀನಿವಾಸ ಸರಡಗಿಯ ಅಪ್ಪಾರಾವ್ ದೇವಿಮುತ್ಯಾ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು.
ಶೋಭಾಯಾತ್ರೆಗೆ ಚಾಲನೆ ಸಿಗುತ್ತಿದ್ದಂತೆ ‘ಹನುಮಾನ ಮಹಾರಾಜ ಕೀ ಜೈ’, ‘ಪವನ ಪುತ್ರ ಕೀ ಜೈ’, ‘ಹನುಮಾನ ಕೀ ಜೈ’, ‘ಜೈ ಶ್ರೀರಾಮ’ ಘೋಷಣೆಗಳು ಮೊಳಗಿದವು. ಆಳಂದ ಚೆಕ್‌ಪೋಸ್ಟ್ ಮೂಲಕ ಸಾಗಿದ ಶೋಭಾಯಾತ್ರೆ ಖಾದ್ರಿ ಚೌಕ್, ಶಹಾಬಜಾರ್, ಸಾಮಿಲ್ ರಸ್ತೆ, ಚೌಕ್ ಠಾಣೆ, ಸೂಪರ್ ಮಾರ್ಕೆಟ್, ಜಗತ್ ವೃತ್ತಕ್ಕೆ ಬಂದು ಸಂಜೆ ಸಂಪನ್ನಗೊಂಡಿತು.
ಶೋಭಾಯಾತ್ರೆಯ ಉದ್ದಕ್ಕೂ ಸಾವಿರಾರು ಯುವಕರು ಡಿ.ಜೆ. ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ವಾಯುಪುತ್ರನ ಗೀತೆಗಳನ್ನು ಪ್ರಸಾರ ಮಾಡಲಾಯಿತು. ಕನ್ನಡ, ಹಿಂದಿ, ಮರಾಠಿ ಗೀತೆಗಳು ಯುವಕರನ್ನು ಹುಮ್ಮಸ್ಸಿನಿಂದ ಹೆಜ್ಜೆ ಹಾಕುವಂತೆ ಮಾಡಿದವು. ಶೋಭಾಯಾತ್ರೆಯಲ್ಲಿ ಹನುಮಾನ ಭಾವಚಿತ್ರಗಳಿರುವ ಕೇಸರಿ ಧ್ವಜಗಳು ಹಾರಾಡಿದವು.
ಯುವ ಬ್ರಿಗೇಡ್ ಅಧ್ಯಕ್ಷ ಆನಂದ್ ಆರ್. ಚವ್ಹಾಣ್, ಪ್ರಮುಖರಾದ ಶ್ವೇತಾ ಸಿಂಗ್, ನಾಗರಾಜ ಪಾಟೀಲ, ರಾಜಕುಮಾರ ಗಬರಾದಿ, ಶಶಿಕಾಂತ ಆರ್. ದೀಕ್ಷಿತ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಶೋಭಾಯಾತ್ರೆ ಸಾಗಿದ ಮಾರ್ಗದ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಅವರ ನೇತೃತ್ವದಲ್ಲಿ ನೂರಾರು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಶೇಖ್ ರೋಜಾ ದರ್ಗಾ ಸಮೀಪ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.