ADVERTISEMENT

ಸಿರಿಪುರಂದರ ನಾಟಕ ಪ್ರದರ್ಶನ

ರಾಜ್ಯದಾದ್ಯಂತ ಪ್ರದರ್ಶನ ನಡೆಸಲು ಸಿದ್ಧತೆ: ಪ್ರಭಾಕರ ಜೋಶಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 4:00 IST
Last Updated 14 ನವೆಂಬರ್ 2020, 4:00 IST
ಕಲಬುರ್ಗಿಯ ರಂಗಾಯಣದಲ್ಲಿ ಆವರಣದಲ್ಲಿ ಪ್ರದರ್ಶನಗೊಂಡ ಸಿರಿ ಪುರಂದರ ನಾಟಕದ ದೃಶ್ಯ
ಕಲಬುರ್ಗಿಯ ರಂಗಾಯಣದಲ್ಲಿ ಆವರಣದಲ್ಲಿ ಪ್ರದರ್ಶನಗೊಂಡ ಸಿರಿ ಪುರಂದರ ನಾಟಕದ ದೃಶ್ಯ   

ಕಲಬುರ್ಗಿ: ಕೋವಿಡ್–19 ಲಾಕ್‌ಡೌನ್‌ ಬಳಿಕ ಹೊಸದಾಗಿ ಆಯ್ಕೆಯಾದ ರಂಗಾಯಣ ಕಲಾವಿದರು ನಟಿಸಿದ ಸಿರಿ ಪುರಂದರ ನಾಟಕ ಇಲ್ಲಿನ ಆರ್‌ಟಿಓ ಕಚೇರಿ ಬಳಿಯ ರಂಗಾಯಣ ಆವರಣದಲ್ಲಿ ಗುರುವಾರ ಪ್ರದರ್ಶನಗೊಂಡಿತು.

ದಾಸ ಶ್ರೇಷ್ಠ ಪುರಂದರ ದಾಸರ ಜೀವನ ಸಾಧನೆ ಬಿಂಬಿಸುವ ಮತ್ತು ದಾಸ ಸಾಹಿತ್ಯದಲ್ಲಿನ ಸಾಮಾಜಿಕ ಕಳಕಳಿಯನ್ನು ನಾಟಕದಲ್ಲಿ ತರಲಾಯಿತು. ಪುರಂದರದಾಸರು ಕೇವಲ ಭಕ್ತಿ ಪಂಥಕ್ಕೆ ಸೀಮಿತಗೊಂಡಿದ್ದರು ಎಂಬ ಮಾತಿದೆ. ಶ್ರೀರಂಗರು ರಚಿಸಿದ ಈ ನಾಟಕವು ದಾಸರು ಸಾಮಾಜಿಕ ಕಳಕಳಿ ಹೊಂದಿದ್ದರು ಎಂಬುದನ್ನು ತೋರಿಸಿ ಕೊಟ್ಟಿತು.

ನಾಟಕಕ್ಕೆ ಚಾಲನೆ ನೀಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ, ‘ರಂಗಭೂಮಿಯ ಹಿನ್ನೆಲೆಯುಳ್ಳವರು ನಟನಾ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಕಲ್ಯಾಣ ಕರ್ನಾಟದಲ್ಲಿ ರಂಗ ಚಟುವಟಿಕೆಗಳ ಮೂಲಕ ನಮ್ಮ ಭಾಗದ ಸಾಂಸ್ಕೃತಿಕ ಕ್ಷೇತ್ರ ಶ್ರೀಮಂತಿಗೊಳಿಸಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಮೈಸೂರು, ಬೆಂಗಳೂರಿನ ರಂಗಾಯಣದಂತೆ ಕಲಬುರ್ಗಿ ರಂಗಾಯಣವು ಪ್ರಗತಿ ಸಾಧಿಸಬೇಕು. ಈ ಭಾಗದಲ್ಲಿ ಕಲಾವಿದರ ಕೊರತೆಯಿಲ್ಲ. ಆದರೆ ಅವರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಸಿರಿ ಪುರಂದರ ನಾಟಕ ಪ್ರದರ್ಶಿಸಿದ್ದನ್ನು ಶ್ಲಾಘಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ‘ಸಿರಿ ಪುರಂದರ ನಾಟಕವನ್ನು ರಾಜ್ಯದಾದ್ಯಂತ ಪ್ರದರ್ಶಿಸಲು ಸಿದ್ದತೆ ನಡೆಸಲಾಗಿದ್ದು, ಕಲಬುರ್ಗಿಯಿಂದಲೇ ಪ್ರದರ್ಶನ ಆರಂಭಿಸಲಾಗಿದೆ. ಸಿರಿ ಪುರಂದರ ನಾಟಕವು ದಾಸರ ಸಾಮಾಜಿಕ ಕಳಕಳಿ ಬಿಂಬಿಸುತ್ತದೆ. ದಾಸ ಸಾಹಿತ್ಯದ ಮೆರಗು ಪ್ರತಿಬಿಂಬಿಸುವಂತಿದೆ’ ಎಂದರು.

ನಾಟಕ ನಿರ್ದೇಶಕ ಮಹಾದೇವ ಹಡಪದ, ಹಿರಿಯ ಸಾಹಿತಿಗಳಾದ ಡಾ.ಸ್ವಾಮಿರಾವ ಕುಲಕರ್ಣಿ, ಶಂಕ್ರಯ್ಯ ಘಂಟಿ, ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್, ವಾಸುದೇವ ಅಗ್ನಿಹೋತ್ರಿ, ಮುಖಂಡರಾದ ಪ್ರಹ್ಲಾದ ಪೂಜಾರಿ, ಮಹೇಶ ದೇಶಪಾಂಡೆ ಪಾಲ್ಗೊಂಡಿದ್ದರು. ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ನಾಶಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.