ಕಲಬುರಗಿ: ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಮಹಿಳೆಯನ್ನು ಅದೇ ಆಸ್ಪತ್ರೆಯ ಸಿಬ್ಬಂದಿ ಬೈಲಪ್ಪ ಎಂಬುವವರು ಅವಳ ಕೋರಿಕೆಯ ಮೇರೆಗೆ ಮನೆಗೆ ಡ್ರಾಪ್ ಮಾಡಲು ತೆರಳುವಾಗ ಮುಸ್ಲಿಂ ಯುವಕರ ತಂಡವು ಬೈಲಪ್ಪ ಅವರ ಹಲ್ಲೆ ಮಾಡಿದ್ದನ್ನು ಸೌಹಾರ್ದ ಕರ್ನಾಟಕ ಸಂಘಟನೆಯ ಜಿಲ್ಲಾ ಸಮಿತಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಮುಖಂಡರಾದ ಮೀನಾಕ್ಷಿ ಬಾಳಿ, ಪ್ರಭು ಖಾನಾಪುರೆ, ಆರ್.ಕೆ.ಹುಡಗಿ, ಮಾರುತಿ ಗೋಖಲೆ, ದತ್ತಾತ್ರೇಯ ಇಕ್ಕಳಕಿ ಹಾಗೂ ಪ್ರಮೋದ, ‘ಮತೀಯ ಭಾವನೆಯ ಕಾರಣದಿಂದ ಹಲ್ಲೆ ನಡೆದಿರುವುದು ಖಂಡನಾರ್ಹವಾದುದ್ದಾಗಿದೆ. ಕೋಮು ಭಾವನೆ ಎಂಬುದೇ ಅಪಾಯಕಾರಿಯಾದದ್ದು. ಬಹುಸಂಖ್ಯಾತ ಸಮುದಾಯದ ಕೋಮುವಾದ ಮತ್ತು ಅಲ್ಪಸಂಖ್ಯಾತ ಸಮುದಾಯದ ಕೋಮುವಾದ ಎರಡರಿಂದಲೂ ಭಾವೈಕ್ಯತೆ, ಸೌಹಾರ್ದಕ್ಕೆ ಧಕ್ಕೆಯಾಗುವುದು. ಈಗಾಗಲೇ ಕರಾವಳಿ ಪ್ರದೇಶದ ಮಾದರಿಯಲ್ಲಿ ಎರಡೂ ಸಮುದಾಯದ ಕೋಮುವಾದಿಗಳು ದ್ವೇಷವನ್ನು ಹರಡಿಸುತ್ತಿದ್ದಾರೆ. ಇಂತಹ ವಿಷಮಯ ಪ್ರವೃತ್ತಿಯಿಂದ ಸಮಾಜದ ಸ್ವಾಸ್ಥ್ಯಕ್ಕೆ ಅಪಾಯ ಉಂಟಾಗುವುದು. ಎಲ್ಲ ತೆರನಾದ ಅಭಿವೃದ್ಧಿಗೆ ಇದು ಮಾರಕವಾಗಿ ಪರಿಣಮಿಸುವುದು’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
'ಕಲ್ಯಾಣ ಕರ್ನಾಟಕವು ಭಾವೈಕ್ಯ ಪರಂಪರೆಯ ನಾಡಾಗಿದೆ. ರಾಜ್ಯದಲ್ಲಿಯೇ ಕೂಡುಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಬಹುಸಂಖ್ಯಾತ ಕೋಮುವಾದದ ಪ್ರಚೋದನೆಯು ಅಲ್ಪಸಂಖ್ಯಾತ ಕೋಮುವಾದಿ ಚಟುವಟಿಕೆಗೆ ಕಾರಣವಾಗುತ್ತಿದೆ. ಆದರೆ ಕಲ್ಯಾಣ ಕರ್ನಾಟಕದಲ್ಲಿ ಈವರೆಗೆ ಎಲ್ಲ ಜನಸಮುದಾಯವು ಸೌಹಾರ್ದತೆಯಿಂದ ಬಾಳು ಸವೆಸಿದ್ದಾರೆ. ಸೂಫಿ-ಸಂತ ಪರಂಪರೆಯ ಬಹುಸಾಂಸ್ಕೃತಿಕ ಮೌಲ್ಯಗಳು ಈ ನೆಲದ ಗಟ್ಟಿ ಬೇರುಗಳು. ಚರಿತ್ರೆಯು ಹೀಗಿದ್ದಾಗ ಕೆಲ ಮತೀಯವಾದಿ ಮನಸ್ಸುಗಳು ಇಂತಹ ಕುಕೃತ್ಯ ನಡೆಸುವುದನ್ನು ತಡೆಗಟ್ಟಲು ಜಿಲ್ಲಾ ಆಡಳಿತವು ಕೂಡಲೇ ಕ್ರಮ ವಹಿಸಬೇಕು. ಹಲ್ಲೆ ಮಾಡಿದ ಎಲ್ಲರನ್ನೂ ಬಂಧಿಸಿ ಶಿಕ್ಷೆಗೆ ಒಳಪಡಿಸುವಂತಾಗಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ದೃಢ ಹೆಜ್ಜೆ ಇಡಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.