ADVERTISEMENT

ಚಿಂಚೋಳಿ | ಪ್ರಸಕ್ತ ಹಂಗಾಮಿನಲ್ಲಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

ಚಿಂಚೋಳಿ: ಮಳೆಗಾಗಿ ಮುಗಿಲು ನೋಡುತ್ತಿರುವ ರೈತರು

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 14:26 IST
Last Updated 22 ಜೂನ್ 2025, 14:26 IST
ಚಿಂಚೋಳಿ ದೇಗಲಮಡಿ ಮಧ್ಯೆ ಹೊಲದಲ್ಲಿ ಬಿತ್ತನೆ ಮಾಡಿದ ಮುಂಗಾರಿನ ಬೆಳೆ ಸಾಲು ಹರಿದಿರುವುದು
ಚಿಂಚೋಳಿ ದೇಗಲಮಡಿ ಮಧ್ಯೆ ಹೊಲದಲ್ಲಿ ಬಿತ್ತನೆ ಮಾಡಿದ ಮುಂಗಾರಿನ ಬೆಳೆ ಸಾಲು ಹರಿದಿರುವುದು   

ಚಿಂಚೋಳಿ: ತಾಲ್ಲೂಕಿನ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ.

ಬಿತ್ತನೆ ನಡೆಸಿದ ಹೊಲಗಳಲ್ಲಿ ಪೈರು ಬೆಳವಣಿಗೆ ಹಂತದಲ್ಲಿದೆ. ಆದರೆ ಮೃಗಶಿರ ಮಳೆ ಕೈಕೊಟ್ಟಿದ್ದರಿಂದ ಜಮೀನಿನಲ್ಲಿ ತೇವಾಂಶದ ಕೊರತೆ ಎದುರಾಗಿದೆ. ಇದರಿಂದ ಬಾಕಿ ಉಳಿದ ಬಿತ್ತನೆಗೆ ರೈತರು ಹಿಂದೇಟು ಹಾಕುವಂತಾಗಿದೆ. ಪ್ರಸಕ್ತ ವರ್ಷ ಮುಂಗಾರು ಪೂರ್ವ ಮಳೆ ಹೆಚ್ಚಾಗಿ ಸುರಿದು ರೈತರಲ್ಲಿ ಆಶಾದಾಯಕ ಮುಂಗಾರಿನ ಕನಸು ಗರಿಗೆದರುವಂತೆ ಮಾಡಿತ್ತು. ಆದರೆ ಜೂನ್ ಆರಂಭವಾದ ನಂತರ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಇದರಿಂದ ಮುಂಗಾರು ಅಸ್ತವ್ಯಸ್ತಗೊಳ್ಳುವಂತಾಗಿದೆ.

ಈಗಾಗಲೇ ಐನಾಪುರ, ಕೋಡ್ಲಿ, ಸುಲೇಪೇಟ, ನಿಡಗುಂದಾ, ಚಿಂಚೋಳಿ, ಕುಂಚಾವರಂ ಸುತ್ತಲೂ ಬಿತ್ತನೆ ನಡೆಸಲಾಗಿದೆ. ಹೊಲಗಳಲ್ಲಿ ಪೈರು ಸಾಲು ಹರಿದಿದ್ದು, ಐನಾಪುರ, ಕೋಡ್ಲಿ ಹೋಬಳಿ ವಲಯದಲ್ಲಿ ಪೈರಿನ ಮಧ್ಯೆ ಎಡೆ ಹೊಡೆಯುವ ಕೆಲಸ ಭರದಿಂದ ಸಾಗಿದೆ.

ADVERTISEMENT

ಬಿತ್ತನೆ ಬಾಕಿ ಉಳಿದ ಹೊಲದಲ್ಲಿ ಬಿತ್ತನೆಗೆ ರೈತರು ಹಿಂದೆ ಮುಂದೆ ನೋಡುವಂತಾಗಿದೆ. ಆಷಾಢ ಮಾಸದಲ್ಲಿ ಬೀಸುವಂತೆ ಒಣಹವೆಯೂ ಜೋರಾಗಿದ್ದರಿಂದ ನೆಲ ಬೇಗ ಆರಿಕೊಂಡು ಬರುತ್ತಿದೆ. ಹೀಗಾಗಿ ರೈತರು ಮಳೆಗಾಗಿ ಮುಗಿಲು ನೋಡುವಂತಾಗಿದೆ. ಒಂದು ವಾರದಲ್ಲಿ ಶೇ 93 ಮಳೆ ಕೊರತೆ, ಜೂನ್‌ ತಿಂಗಳಲ್ಲಿ ಶೇ 49 ಮಳೆ ಕೊರತೆ ಉಂಟಾಗಿದೆ.

ತಾಲ್ಲೂಕಿನಲ್ಲಿ 42 ಸಾವಿರ ಹೆಕ್ಟೇರ್ ತೊಗರಿ, 4.5 ಸಾವಿರ ಹೆಕ್ಟೇರ್ ಉದ್ದು, 4 ಸಾವಿರ ಹೆಕ್ಟೇರ್ ಸೋಯಾ, ಹೆಸರು ಪ್ರದೇಶದಲ್ಲಿ ಇತರೆ ಬೆಳೆ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ ಎಂದು ಸಹಾಯಕ ಕೃಷಿ ನಿರ್ದೆಶಕ ವೀರಶೆಟ್ಟಿ ರಾಠೋಡ ತಿಳಿಸಿದ್ದಾರೆ.

ನಮ್ಮ ಊರಿನಲ್ಲಿ ಜೂನ್ ಮೊದಲವಾರ ಬಿತ್ತನೆ ನಡೆಸಿದ ರೈತರ ಹೊಲಗಳಲ್ಲಿ ಪೈರು ಸಾಯುತ್ತಿದೆ. ಇದರಿಂದ ರೈತರು ಕೆಲವು ಕಡೆ ಹರಗಿ ಬಿತ್ತನೆ ನಡೆಸುತ್ತಿದ್ದಾರೆ. ಪ್ರಸಕ್ತ ವರ್ಷ ಮುಂಗಾರು ಅಸ್ತವ್ಯಸ್ತವಾಗಿದೆ
ಭೀಮಶೆಟ್ಟಿ ಮುರುಡಾ ಕೃಷಿಕ ಐನೋಳ್ಳಿ
ಜೂನ್ 23ರ ನಂತರ ಮಳೆ ಬರಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ರೈತರು ತಮ್ಮ ಬಾಕಿ ಉಳಿದ ಹೊಲ ಬಿತ್ತನೆಗೆ ಮೊದಲು ತೇವಾಂಶ ಖಾತ್ರಿ ಪಡಿಸಿಕೊಳ್ಳಬೇಕು. ಸೋಯಾ ತೊಗರಿ ಬಿತ್ತನೆಗೆ ಇನ್ನೂ ಸಾಕಷ್ಟು ಸಮಯವಿದೆ
ವೀರಶೆಟ್ಟಿ ರಾಠೋಡ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.