ADVERTISEMENT

ಅಫಜಲಪುರ | ಜೂನ್ 14ರ ಬಳಿಕ ಬಿತ್ತನೆ ಆರಂಭಿಸಿ: ಕೃಷಿ ನಿರ್ದೇಶಕರ ಸಲಹೆ

ಬಿತ್ತನೆ ಪೂರ್ವದಲ್ಲಿ ರೈತರು ಕಡ್ಡಾಯವಾಗಿ ಬೀಜೋಪಚಾರ ಮಾಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 14:02 IST
Last Updated 11 ಜೂನ್ 2025, 14:02 IST
ಅಫಜಲಪುರ ರೈತ ಸಂಪರ್ಕ ಕೇಂದ್ರದಿಂದ ಬುಧವಾರ ರೈತರು ಮುಂಗಾರು ಹಂಗಾಮಿಗಾಗಿ ಬಿತ್ತನೆ ಬೀಜ ಸಹಾಯಧನದಲ್ಲಿ ಖರೀದಿ ಮಾಡಿದರು
ಅಫಜಲಪುರ ರೈತ ಸಂಪರ್ಕ ಕೇಂದ್ರದಿಂದ ಬುಧವಾರ ರೈತರು ಮುಂಗಾರು ಹಂಗಾಮಿಗಾಗಿ ಬಿತ್ತನೆ ಬೀಜ ಸಹಾಯಧನದಲ್ಲಿ ಖರೀದಿ ಮಾಡಿದರು   

ಅಫಜಲಪುರ: ‘ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಜೂನ್ 14ರವರೆಗೆ ಮಳೆ ಇರುವುದರಿಂದ ರೈತರು ಮಳೆ ನಿಂತ ನಂತರ ಮುಂಗಾರು ಬಿತ್ತನೆ ಮಾಡಬೇಕು. ಮಳೆಯಲ್ಲಿ ಬಿತ್ತನೆ ಮಾಡಿದರೆ ಮಳೆಯ ರಭಸಕ್ಕೆ ಕಾಳು ಮೊಳಕೆ ಒಡೆಯುವುದು ಅನುಮಾನವಿರುತ್ತದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್. ಎಚ್. ಗಡಿಗಿಮನಿ ತಿಳಿಸಿದರು.

ಈ ಕುರಿತು ಬುಧವಾರ ತಮ್ಮ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ‘ಈಗಾಗಲೇ ತಾಲ್ಲೂಕಿನ ಕರಜಗಿ, ಆತನೂರು ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ, ಉದ್ದು, ಹೆಸರು, ಮೆಕ್ಕೆಜೋಳ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ರೈತರು ಬಿತ್ತನೆ ಮಾಡುವ ಪೂರ್ವದಲ್ಲಿ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು. ಇದರಿಂದ ಬೆಳೆಗೆ ಬರುವ ಹಲವಾರು ರೋಗಗಳನ್ನು ತಡೆಗಟ್ಟಬಹುದು ಮತ್ತು ಬೀಜೋಪಚಾರ ಮಾಡುವ ಕುರಿತು ರೈತ ಸಂಪರ್ಕ ಕೇಂದ್ರದಲ್ಲಿರುವ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಬೇಕು. ಬೀಜ ಖರೀದಿ ಮಾಡುವಾಗ ಕಡ್ಡಾಯವಾಗಿ ಬೀಜೋಪಚಾರ ಔಷಧ ತೆಗೆದುಕೊಂಡು ಹೋಗಬೇಕು’ ಎಂದರು.

‘ರೈತರು ಖಾಸಗಿ ಅಗ್ರೋ ಕೇಂದ್ರಗಳಲ್ಲಿ ಬೀಜ ಗೊಬ್ಬರ ಖರೀದಿ ಮಾಡುವಾಗ ಕಡ್ಡಾಯವಾಗಿ ರಸೀದಿ ಪಡೆಯಬೇಕು. ರಸೀದಿಯನ್ನು ಮನೆಯಲ್ಲಿ ಆರು ತಿಂಗಳವರೆಗೆ ಕಾಯ್ದಿರಿಸಬೇಕು. ರೈತರಿಗೆ ಮುಂಗಾರು ಹಂಗಾಮಿನಲ್ಲಿ ಯಾವುದೇ ಬಿತ್ತನೆ ಬೀಜ ಕಡಿಮೆಯಾಗದಂತೆ ನೋಡಿಕೊಳ್ಳಲಾಗುವುದು. ಸೋಯಾಬಿನ್ ಬೀಜ ದಾಸ್ತಾನು ಮಾಡಲಾಗುವುದು. ಈಗಾಗಲೇ ಬೆಳೆ ವಿಮೆ ಕಟ್ಟಲು ದಿನಾಂಕ ನಿಗದಿಯಾಗಿದೆ. ಅದಕ್ಕಾಗಿ ಕಡ್ಡಾಯವಾಗಿ ಎಲ್ಲಾ ರೈತರು ಬೆಳೆ ವಿಮೆಯನ್ನು ತಮ್ಮ ತಮ್ಮ ಸಮೀಪದ ಬ್ಯಾಂಕ್‌ನಲ್ಲಿ ಇಲ್ಲವೇ ಕರ್ನಾಟಕ ಒನ್ ಕೇಂದ್ರದಲ್ಲಿ ಕಟ್ಟಬೇಕು. ಅದರ ಬಗ್ಗೆಯೂ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ಪುಸ್ತಕವಿದೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಚಾಂದಕೋಟೆ ಹಾಗೂ ಲಕ್ಷ್ಮಣ್ ಕಟ್ಟಿಮನಿ ಮಾತನಾಡಿ, ‘ಖಾಸಗಿ ಅಗ್ರೋ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರಗಳಿಗೆ ಹೆಚ್ಚಿನ ಬೆಲೆಯನ್ನು ರೈತರಿಂದ ವಸೂಲಿ ಮಾಡಲಾಗುತ್ತಿದೆ. ಡಿಎಪಿ ಗೊಬ್ಬರ ಕೃತಕ ಅಭಾವ ಸೃಷ್ಟಿ ಮಾಡಲಾಗುತ್ತಿದೆ. ಈ ಕುರಿತು ಬುಧವಾರ ಪಟ್ಟಣದಲ್ಲಿ ಇದೇ ವಿಷಯ ಕುರಿತು ಪ್ರತಿಭಟನೆ ಮತ್ತು ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡುತ್ತೇವೆ’ ಎಂದರು.

ರೈತ ಮುಖಂಡ ಸಿದ್ದು ಸೋಮಜಾಳ ಮಾತನಾಡಿ, ‘ಕೃಷಿ ಇಲಾಖೆಯಲ್ಲಿ ಸಹಾಯಧನದಲ್ಲಿ ಮಾರಾಟವಾಗುತ್ತಿರುವ ತೊಗರಿ ಬೀಜ ಸಾಕಷ್ಟು ದುಬಾರಿಯಾಗಿದೆ. ಸದ್ಯಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ತೊಗರಿಗೆ ₹ 6 ಸಾವಿರ ಬೆಲೆ ಇದೆ. ಆದರೆ ಕೃಷಿ ಇಲಾಖೆಯಲ್ಲಿ 5 ಕೆಜಿ ತೊಗರಿ ಬೀಜದ ಪ್ಯಾಕೆಟ್‌ ಸುಮಾರು ₹ 600ಕ್ಕಿಂತಲೂ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಂದರೆ ₹ 60ಕ್ಕೆ ಒಂದು ಕಿಲೊ ತೊಗರಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾದರೆ, ಕೃಷಿ ಇಲಾಖೆಯಲ್ಲಿ ₹ 100ಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಸಹಾಯಧನ ಯಾವ ರೀತಿ ನೀಡಲಾಗುತ್ತಿದೆ. ರೈತರಿಗೆ ಗೊತ್ತಾಗುತ್ತಿಲ್ಲ ಅದಕ್ಕಾಗಿ ಸರ್ಕಾರ ಮಾರುಕಟ್ಟೆಯ ಬೆಲೆಯ ಅರ್ಧದಷ್ಟು ಬೆಲೆಗೆ ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ಮಾರಾಟ ಮಾಡಬೇಕು’ ಎಂದು ಒತ್ತಾಯಿಸಿದರು.

ಕೃಷಿ ಅಧಿಕಾರಿ ಆನಂದ್ ಅವರಾದ, ಅನುಗಾರರಾದ ಸುಭಾಷ್ ಕಾಂಬಳೆ, ಮಡಿವಾಳಪ್ಪ ಹೋಳ್ಕರ್, ರಾಮು ಕಾಂಬಳೆ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.