ADVERTISEMENT

ವಾಡಿ: ಮಾತು ಕೇಳುತ್ತಿಲ್ಲವೆಂದು ಮಗುವಿನ ಕೈ ಸುಟ್ಟ ಮಲತಾಯಿ!

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 5:41 IST
Last Updated 7 ಜೂನ್ 2022, 5:41 IST
ವಾಡಿ: ಮಾತು ಕೇಳುತ್ತಿಲ್ಲವೆಂದು ಮಗುವಿನ ಕೈ ಸುಟ್ಟ ಮಲತಾಯಿ!
ವಾಡಿ: ಮಾತು ಕೇಳುತ್ತಿಲ್ಲವೆಂದು ಮಗುವಿನ ಕೈ ಸುಟ್ಟ ಮಲತಾಯಿ!   

ವಾಡಿ (ಕಲಬುರಗಿ ‌ಜಿಲ್ಲೆ): ಮಲತಾಯಿಯೊಬ್ಬಳು ಮಗುವಿನ ಕೈಸುಟ್ಟ ಘಟನೆ ನಾಲವಾರ ಗ್ರಾ.ಪಂ. ವ್ಯಾಪ್ತಿಯ ಸ್ಟೇಷನ್ ತಾಂಡಾದಲ್ಲಿ ಸೋಮವಾರ ರಾತ್ರಿ ಜರುಗಿದೆ. 5 ವರ್ಷದ ಸೋನಾಲಿಕ ಎಂಬ ಮಗು ಮಲತಾಯಿಯ ದೌರ್ಜನ್ಯಕ್ಕೆ ಒಳಗಾಗಿ ನರಳಾಡುತ್ತಿದೆ.

ಮಗು ಮಾತು ಕೇಳುತ್ತಿಲ್ಲ. ಪದೇ ಪದೇ ಸತಾಯಿಸುತ್ತಿದೆ ಎನ್ನುವ ಕಾರಣಕ್ಕಾಗಿ ಮಗು ಸೋನಾಲಿಕಾಳ ಮಲತಾಯಿ ಮರೆಮ್ಮ ತಿಪ್ಪಣ್ಣ ಎರಡೂ ಕೈಗಳಿಗೆ ಕಾದ ಕೊಳಾಯಿಯಿಂದ ಸುಡುವುದರ ಮೂಲಕ ಪೈಶಾಚಿಕ ಕೃತ್ಯ ಮೆರೆದಿದ್ದಾಳೆ.

ಮರೆಮ್ಮ ಪದೇ ಪದೇ ಮಗುವಿಗೆ ಕಿರುಕುಳ ನೀಡುತ್ತಿದ್ದಳು. ಊಟಕ್ಕಾಗಿ ಕೈಚಾಚಿದರೂ ಹಲ್ಲೆ ನಡೆಸಿರುವ ಉದಾಹರಣೆಗಳು ಜರುಗಿವೆ. ಮೂರು ದಿನಗಳಿಂದ ಮಗು ಹೊರಗೆ ಬಂದಿರಲಿಲ್ಲ. ಅನುಮಾನಗೊಂಡು ಸೋಮವಾರ ಸಂಜೆ ನೋಡಿದಾಗ ಮಗುವನ್ನು ಮಂಚಕ್ಕೆ ಕಟ್ಟಿ ಹಾಕಲಾಗಿತ್ತು ಎಂದು ಸ್ಥಳೀಯರು ದೂರಿದ್ದಾರೆ.

ADVERTISEMENT

ಮಗುವಿನ ತಂದೆ ತಿಪ್ಪಣ್ಣ ಹೆಂಡತಿ ಇಲ್ಲದ ಕಾರಣಕ್ಕೆ ಇತ್ತೀಚೆಗೆ ಮರೆಮ್ಮ ಎಂಬ ಮಹಿಳೆಯನ್ನು ಮದುವೆಯಾಗಿದ್ದರು. ಊರಲ್ಲಿ ಕೆಲಸ ಇಲ್ಲದ ಕಾರಣಕ್ಕೆ ತಿಪ್ಪಣ್ಣ ಮರೆಮ್ಮ ಹಾಗೂ ಸೋನಾಲಿಕಾಳನ್ನು ಸ್ಟೇಷನ್ ತಾಂಡಾದ ಮನೆಯಲ್ಲಿ ಬಿಟ್ಟು ಕುಟುಂಬದ ನಿರ್ವಹಣೆಗಾಗಿ ಪುಣೆಗೆ ವಲಸೆ ಹೋಗಿದ್ದರು. ಸ್ಥಳೀಯರ ಎದುರು ಮರೆಮ್ಮ ತಾನು ಮಾಡಿದ ಕೃತ್ಯ ಸಮರ್ಥಿಸಿಕೊಂಡಿದ್ದಾಳೆ. ಮಗುವಿನ ರೋದನೆ ಕಂಡ ಸ್ಥಳೀಯರು ಮಗುವಿನೊಂದಿಗೆ ವಾಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಮಗುವನ್ನು 1098 ಚೈಲ್ಡ್‌ಲೈನ್‌ ಅಧಿಕಾರಿಗಳು ಕಲಬುರಗಿಯ ಶಿಶುವಿಹಾರಕ್ಕೆ ಕರೆದುಕೊಂಡು ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.