ADVERTISEMENT

ಅಕ್ರಮವಾಗಿ ಗಾಳಿ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ

ಜನ–ಜಾನುವಾರಿಗೆ ತೊಂದರೆಛ ಗ್ರಾಮಸ್ಥರ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:41 IST
Last Updated 3 ಜುಲೈ 2025, 15:41 IST
ಯಲಬುರ್ಗಾ ತಾಲ್ಲೂಕು ಗುಳೆ ಗ್ರಾಮದ ಹುಲಿಗೆಮ್ಮ ಕುಂಟೆಪ್ಪ ಕಮತರ ಅವರಿಗೆ ಸೇರಿದ ತೋಟದ ಮನೆ ಮತ್ತು ಜಾನುವಾರು ಕೊಟ್ಟಿಗೆ ಸಮೀಪದಲ್ಲೇ ಸುಜ್ಲಾನ್‌ ಗಾಳಿ ವಿದ್ಯುತ್ ಉತ್ಪಾದನಾ ಘಟಕ ನಿರ್ಮಿಸುತ್ತಿರುವುದು
ಯಲಬುರ್ಗಾ ತಾಲ್ಲೂಕು ಗುಳೆ ಗ್ರಾಮದ ಹುಲಿಗೆಮ್ಮ ಕುಂಟೆಪ್ಪ ಕಮತರ ಅವರಿಗೆ ಸೇರಿದ ತೋಟದ ಮನೆ ಮತ್ತು ಜಾನುವಾರು ಕೊಟ್ಟಿಗೆ ಸಮೀಪದಲ್ಲೇ ಸುಜ್ಲಾನ್‌ ಗಾಳಿ ವಿದ್ಯುತ್ ಉತ್ಪಾದನಾ ಘಟಕ ನಿರ್ಮಿಸುತ್ತಿರುವುದು   

ಯಲಬುರ್ಗಾ: ತಾಲ್ಲೂಕಿನ ಗುಳೆ ಗ್ರಾಮದಲ್ಲಿ ಸುಜಲಾನ್ ಗಾಳಿವಿದ್ಯುತ್ ಕಂಪನಿಯವರು ಅಕ್ರಮವಾಗಿ ಟವರ್‍ಗಳನ್ನು ನಿರ್ಮಿಸುತ್ತಿದ್ದು, ರೈತರಿಗೆ ಯಾವುದೇ ಮಾಹಿತಿ ನೀಡದೇ ತಮ್ಮಿಷ್ಟದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮದ ರೈತರು ಆರೋಪಿಸಿದ್ದಾರೆ.

ಗ್ರಾಮದ ಸರ್ವೆ ನಂ.25ರ ಜಮೀನಿನಲ್ಲಿ ಖಾಸಗಿ ಸುಜಲಾನ್ ಕಂಪನಿಯು ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿಕೊಳ್ಳದೇ ಟವರ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅಲ್ಲದೇ ಅಕ್ಕಪಕ್ಕದ ಜಮೀನಿನ ರೈತರ ಪೂರ್ವಾನುಮತಿ ಪಡೆಯದೇ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಕ್ರಮಕೈಗೊಂಡಿದ್ದಾರೆ. ಕಂಪನಿಯವರು ಕೈಗೊಂಡಿರುವ ಈ ಸ್ಥಾಪನಾ ಕಾರ್ಯದಿಂದಾಗಿ ಪಕ್ಕದ ಸರ್ವೆ ನಂ26ರಲ್ಲಿಯೂ ಕಾರ್ಯಚಟುವಟಿಕೆಗಳು ಮುಂದುವರೆದಿದ್ದರಿಂದ ಕೃಷಿ ಚಟುವಟಿಕೆಗೂ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ವಿಚಾರಿಸಿದರೆ ಕಂಪನಿಯ ಪ್ರತಿನಿಧಿಯು ರೈತರಿಗೆ ಮತ್ತು ಮನೆಯ ಮಹಿಳೆಯರಿಗೆ ದರ್ಪ ತೋರಿಸಿ ನಿಂಧಿಸುತ್ತಿದ್ದಾರೆ ಎಂದು ಹುಲಿಗೆಮ್ಮ ಕುಂಟೆಪ್ಪ ಕಮತರ ಆರೋಪಿಸಿದ್ದಾರೆ.

ಸರ್ವೆ ನಂ.26ರಲ್ಲಿ ತೋಟದ ಮನೆ, ಜಾನುವಾರುಗಳ ಕೊಟ್ಟಿಗೆಇದ್ದು, ಇವುಗಳ ಹತ್ತಿರದಲ್ಲಿಯೇ ಟವರ್ ನಿರ್ಮಿಸುತ್ತಿರುವುದು ವಿವಿಧ ರೀತಿಯ ತೊಂದರೆಗಳಿಗೆ ಕಾರಣವಾಗುತ್ತಿದೆ. ವಿಪರೀತ ಶಬ್ದದಿಂದ ವಾಸಿಸುವ ಜನರಿಗೂ ಹಾಗೂ ಜಾನುವಾರುಗಳಿಗೂ ವಾಸಕ್ಕೆ ಕಷ್ಟವಾಗುತ್ತದೆ. ಕಾರಣ ಆಗುತ್ತಿರುವ ತೊಂದರೆ ಮತ್ತು ನಷ್ಟಕ್ಕೆ ಕಂಪನಿಯರೇ ಜವಾಬ್ದಾರರಾಗಿದ್ದು, ಮುಂದಿನ ದಿನಗಳಲ್ಲಿ ಆಗುವ ಅನಾಹುತವನ್ನು ತಪ್ಪಿಸಬೇಕಾದರೆ ಕೂಡಲೇ ಕಂಪನಿಯವರು ಪರ್ಯಾಯ ಮಾರ್ಗವನ್ನು ಅನುಸರಿಸಬೇಕು. ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.