ಕಲಬುರಗಿ: ‘ಕಳೆದ ಜುಲೈ 30ರಂದು ಕಡಗಂಚಿಯ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸದಿಂತೆ ಕೆಲವರು ತನಿಖೆಯ ದಿಕ್ಕುತಪ್ಪಿಸುವ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಿಯುಕೆ ಕುಲಸಚಿವ ಪ್ರೊ. ಆರ್.ಆರ್.ಬಿರಾದಾರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಯಾವ ಕಾರಣಕ್ಕೆ ವಿದ್ಯಾರ್ಥಿನಿ ಜಯಶ್ರೀ ನಾಯಕ್ ಅವರು ಆತ್ಮಹತ್ಯೆ ಮಾಡಿಕೊಂಡರು ಎಂಬುದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. ಪೊಲೀಸರು ಈಗಾಗಲೇ ವಿದ್ಯಾರ್ಥಿನಿಯ ಮೊಬೈಲ್ ಹಾಗೂ ಅವರಿಗೆ ಸಂಬಂಧಿಸಿದ ಕೆಲ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದಲ್ಲದೆ ಮೊಬೈಲ್‌ನ ಕರೆಗಳ ವಿವರವನ್ನು ಪಡೆದಿದ್ದಾರೆ. ಘಟನೆಯ ಮುಂಚೆ ವಿದ್ಯಾರ್ಥಿನಿ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳನ್ನು ಭೇಟಿಯಾಗಿಲ್ಲ ಹಾಗೂ ಇನ್ನಾವುದೇ ರೀತಿಯಲ್ಲಿ ಅವರನ್ನು ಸಂಪರ್ಕಿಸಿಲ್ಲ. ಯಾರಿಗಾದರೂ ಲೈಂಗಿಕ ಹಿಂಸೆ ಅಥವಾ ಕಿರುಕುಳವಾದರೆ ದೂರು ಸಲ್ಲಿಸಲು ಹಾಗೂ ಅದರ ಕುರಿತು ವಿಚಾರಣೆ ಮಾಡಲು ಆಂತರಿಕ ದೂರು ಸಮಿತಿ (ಐಸಿಸಿ) ಇದೆ. ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಿಗೆ ಈ ಕುರಿತು ಯಾವುದೇ ಅಧಿಕಾರ ಇರುವುದಿಲ್ಲ’ ಎಂದು ಹೇಳಿದ್ದಾರೆ.
‘ವಿದ್ಯಾರ್ಥಿನಿ ಜೀವಂತವಿದ್ದರೆ ಅವಳನ್ನು ರಕ್ಷಿಸಬೇಕೆಂಬ ಸದುದ್ದೇಶದಿಂದ ಭದ್ರತಾ ಅಧಿಕಾರಿ ವಿದ್ಯಾರ್ಥಿನಿಯ ಕೋಣೆಯ ಬಾಗಿಲನ್ನು ಮುರಿದು ತೆಗೆದಿರುತ್ತಾರೆ. ಆ ಸಂದರ್ಭದಲ್ಲಿ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಅಲ್ಲಿ ಉಪಸ್ಥಿತರಿರಲಿಲ್ಲ. ವಸತಿ ನಿಲಯದ ಮೇಲ್ವಿಚಾರಕರು ಮತ್ತು ತಕ್ಷಣ ವೈದ್ಯಾಧಿಕಾರಿಗಳು ಆಗಮಿಸಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಸಾವಿನ ತನಿಖೆ ಪ್ರಗತಿಯಲ್ಲಿರುವಾಗ ಕೆಲ ವ್ಯಕ್ತಿಗಳು ಊಹಾಪೋಹದ ಮಾಹಿತಿಗಳನ್ನು ವಿವಿಧ ಮಾಧ್ಯಮಗಳ ಮೂಲಕ ಹರಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ:
ವಿದ್ಯಾರ್ಥಿನಿ ಜಯಶ್ರೀ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಪೊಲೀಸರು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ವಿದ್ಯಾರ್ಥಿನಿ ಸಾವಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಟೀಕಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ, ‘ಕೇಂದ್ರಿಯ ವಿ.ವಿ.ಯಲ್ಲಿ ಭೂ ವಿಜ್ಞಾನ ವಿಭಾಗದ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಜಯಶ್ರೀ ಆತ್ಮಹತ್ಯೆಯು ವಿಷಾದನೀಯ ಘಟನೆ. ಆದರೆ ಈ ಪ್ರಕರಣದ ಕುರಿತು ಹಲವಾರು ಚರ್ಚೆಗಳು ನಡೆಯುತ್ತಿದ್ದು ಪರೋಕ್ಷವಾಗಿ ಇದು ವಿಶ್ವವಿದ್ಯಾಲಯವನ್ನೇ ತಪ್ಪಿತಸ್ಥವೆಂಬತೆ ಬಿಂಬಿಸುತ್ತಿದೆ. ಈ ಕೂಡಲೇ ಆತ್ಮಹತ್ಯೆಗೈದ ವಿದ್ಯಾರ್ಥಿನಿಯ ಸಾವಿನ ಸೂಕ್ತ ಕಾರಣವನ್ನು ಪತ್ತೆ ಹಚ್ಚಬೇಕು’ ಎಂದಿದ್ದಾರೆ.
ವಿ.ವಿ. ಎದುರು ಇಂದು ಪ್ರತಿಭಟನೆ:
ಕೇಂದ್ರೀಯ ವಿ.ವಿ.ಯಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿರುವ ಪ್ರಕರಣದ ತೀವ್ರ ತನಿಖೆಗಾಗಿ ಒತ್ತಾಯಿಸಿ ಎಲ್ಲ ವಿದ್ಯಾರ್ಥಿಗಳಿಗೆ ಭದ್ರತೆ ರಕ್ಷಣೆಗಾಗಿ ಅವರ ವಿದ್ಯಾರ್ಜನೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ಒತ್ತಾಯಿಸಿ ಮತ್ತು ವಿ.ವಿಯಲ್ಲಿ ಹೆಚ್ಚುತ್ತಿರುವ ಕೋಮುವಾದ ಚಟುವಟಿಕೆ ತಡೆಗಾಗಿ ಸಾಂವಿಧಾನಿಕ ನಿಲುವುಗಳ ಜಾರಿಗಾಗಿ ಒತ್ತಾಯಿಸಿ ವಿವಿಧ ಸಂಘಟನೆಗಳು ವಿ.ವಿ. ಎದುರು ಇದೇ 5ರಂದು ಪ್ರತಿಭಟನೆ ಆಯೋಜಿಸಿವೆ. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ)ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ದಲಿತ ಹಕ್ಕುಗಳ ಸಮಿತಿ ಸಹಯೋಗದಲ್ಲಿ ಅಂದು ಬೆಳಿಗ್ಗೆ 11ಕ್ಕೆ ಪ್ರತಿಭಟನೆ ನಡೆಯಲಿದೆ ಎಂದು ಡಿವೈಎಫ್‌ವೈ ರಾಜ್ಯ ಅಧ್ಯಕ್ಷೆ ಲವಿತ್ರ ವಸ್ತ್ರದ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.