ADVERTISEMENT

‘ಸಚಿವ ಪ್ರಿಯಾಂಕ್ ಬಗ್ಗೆ ಶಾಸಕ ಜಾಧವ ಟೀಕೆ ಹಾಸ್ಯಾಸ್ಪದ’: ಸುಭಾಷ್‌ ರಾಠೋಡ

​ಪ್ರಜಾವಾಣಿ ವಾರ್ತೆ
Published 25 ಮೇ 2025, 16:21 IST
Last Updated 25 ಮೇ 2025, 16:21 IST
ಸುಭಾಶ ರಾಠೋಡ, ಕೆಪಿಸಿಸಿ ಉಪಾಧ್ಯಕ್ಷ 
ಸುಭಾಶ ರಾಠೋಡ, ಕೆಪಿಸಿಸಿ ಉಪಾಧ್ಯಕ್ಷ    

ಚಿಂಚೋಳಿ: ‘ಶಾಸಕ ಡಾ.ಅವಿನಾಶ ಜಾಧವ ತಮ್ಮ ತಟ್ಟೆಯಲ್ಲಿ ಕೋಣ ಮಲಗಿದ್ದರೂ ಬೇರೆಯವರ ತಟ್ಟೆಯಲ್ಲಿನ ನೊಣ ತೆಗೆಯಲು ಹೋಗುತ್ತಿರುವದು ಹಾಸ್ಯಾಸ್ಪದ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್‌ ರಾಠೋಡ ಲೇವಡಿ‌ ಮಾಡಿದ್ದಾರೆ.

ಕೆಡಿಪಿ ಸಭೆ ಎನ್ನುವುದರ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದ ಶಾಸಕರು ತಮ್ಮ‌ ಹುಳುಕನ್ನು ಮುಚ್ಚಿಕೊಳ್ಳಲಿಕ್ಕೆ ಸಚಿವ ಖರ್ಗೆ ಅವರನ್ನು ದೂಷಿಸುತ್ತಿದ್ದಾರೆ ಎಂದರು. ಒಂದು ವರ್ಷದಿಂದ ಕೆಡಿಪಿ ಸಭೆ ಮಾಡದ ಶಾಸಕರು ಉಸ್ತುವಾರಿ ಸಚಿವರ ಬಗ್ಗೆ ಮಾತನಾಡುವುದು ಎಷ್ಟು ಸರಿ? ಜಿಲ್ಲಾ ಉಸ್ತುವಾರಿ ಸಚಿವರ ಕೆಡಿಪಿ ಸಭೆ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇದೆಯಾ? ಇದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಆಗಿದೆ ಎಂದು ಕುಟುಕಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸುವಂತೆ ಹೇಳಿದ ಅವರು, ಚಿಂಚೋಳಿ ಶಾಸಕರಾಗಿ ತಾವು ಸಾಧಿಸಿದ ಘನಂದಾರಿ ಕೆಲಸಗಳನ್ನು ಕ್ಷೇತ್ರದ ಜನ ನೋಡ್ತಾ ಇದ್ದಾರೆ. ಚಿಂಚೋಳಿಗೆ ನಿಮ್ಮ ಮತ್ತು ಬಿಜೆಪಿ ಕೊಡುಗೆ ಶೂನ್ಯವಾಗಿದೆ. ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ 20 ವರ್ಷ ಹಿಂದೆ ತೆಗೆದುಕೊಂಡು ಹೋಗಿರುವದೇ ನಿಮ್ಮ ಸಾಧನೆ’ ಎಂದು ಟೀಕಿಸಿದ್ದಾರೆ.

ADVERTISEMENT

ಮಾನಸಿಕ ಸ್ಥಿಮಿತ ಕಳೆದುಕೊಂಡ ಬಿಜೆಪಿ ನಾಯಕರು: ‘ವಿಧಾನ ಪರಿಷತ್ ಚಿಂತಕರ ಚಾವಡಿ. ಬುದ್ಧಿವಂತರ ಮೇಧಾವಿಗಳ‌ ಸಂಗಮ. ಆದರೆ ಇದನ್ನೇ ಪ್ರತಿನಿಧಿಸುವ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ‌ ನಾರಾಯಣಸ್ವಾಮಿ‌ ಮತ್ತು ಪರಿಷತ್ ಸದಸ್ಯ ಎನ್.ರವಿಕುಮಾರ್‌ ತಮ್ಮ‌ ಮಾನಸಿಕ ಸ್ಥಿಮಿತ ಕಳೆದುಕೊಂಡು‌ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ನಾರಾಯಣಸ್ವಾಮಿ‌ ಆಡಿದ ಮಾತುಗಳು‌ ಪರಿಷತ್ ಸದಸ್ಯರಿಗೆ ಘನತೆ ತರುವುದಿಲ್ಲ. ಇನ್ನು ಕಲಬುರಗಿ ಜಿಲ್ಲಾಧಿಕಾರಿ ಬಗ್ಗೆ ಆಕ್ಷೇಪಾರ್ಹ ಮಾತನಾಡಿದ ಎನ್.ರವಿಕುಮಾರ್‌ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಹೊಂದಿರುವ ಪೂರ್ವಾಗ್ರಹ ಪೀಡಿತ ಭಾವನೆಯಾಗಿದೆ. ಬಿಜೆಪಿ ನಾಯಕರು ಅಧಿಕಾರ ಕಳೆದು ಕೊಂಡು ಕೇವಲ 2 ವರ್ಷ ಆಗಿದೆ. ಇಷ್ಟು ಕಡಿಮೆ ಸಮಯದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು ನೋಡಿದರೆ ಬಿಜೆಪಿ ನಾಯಕರು ರಾಜ್ಯದಲ್ಲಿ‌ ನಗೆಪಾಟಲಿಗೀಡಾದಂತಿದೆ’ ಎಂದು ಸುಭಾಷ ರಾಠೋಡ ವ್ಯಂಗ್ಯವಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.