ADVERTISEMENT

ರಾಜ್ಯೋತ್ಸವ ವೇಳೆಗೆ ‘ಸ್ವಚ್ಛ ಕರ್ನಾಟಕ’ವಾಗಲಿ

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷ, ನ್ಯಾಯಮುರ್ತಿ ಸುಭಾಷ ಬಿ.ಆಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 15:27 IST
Last Updated 12 ಸೆಪ್ಟೆಂಬರ್ 2019, 15:27 IST
ನ್ಯಾ. ಸುಭಾಷ ಆಡಿ
ನ್ಯಾ. ಸುಭಾಷ ಆಡಿ   

ಕಲಬುರ್ಗಿ: ‘ಮನೆಗಳಿಂದ ಬರುವ ಹಸಿ– ಒಣ ಕಸ ಹಾಗೂ ಆಸ್ಪತ್ರೆಗಳಲ್ಲಿ ಉತ್ಪತ್ತಿ ಆಗುವ ಜೈವಿಕ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಿ, ಶೇಕಡ 100ರಷ್ಟು ಪ್ರಗತಿ ಸಾಧಿಸಲು ಸಂಕಲ್ಪ ಮಾಡಬೇಕು’ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷ, ನ್ಯಾಯಮುರ್ತಿ ಸುಭಾಷ ಬಿ.ಆಡಿ ಕರೆ ನೀಡಿದರು.

ನಗರದಲ್ಲಿ ಗುರುವಾರ ನಡೆದ ಸ್ವಚ್ಛ ಸರ್ವೇಕ್ಷಣ-2020 ಕುರಿತು ವಿಭಾಗೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಮುಂಬರುವ ರಾಜ್ಯೋತ್ಸವ ಹೊತ್ತಿಗೆ ಸ್ಚಚ್ಛ ಕರ್ನಾಟಕ ಉದಯವಾಗಬೇಕು. ಈ ಪ್ರಯತ್ನ ಕಲ್ಯಾಣ ಕರ್ನಾಟಕದಿಂದಲೇ ಆರಂಭವಾಗಲಿ’ ಎಂದೂ ಆಶಿಸಿದರು.

‘ದೇಶದಾದ್ಯಂತ ಸ್ವಚ್ಛ ಸರ್ವೇಕ್ಷಣ ಕಾರ್ಯ ನಡೆಯುತ್ತಿದ್ದು, 2020ರ ಮಾರ್ಚ್‌ವರೆಗೆ ನಡೆಯಲಿದೆ. ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ ತಡೆಗಟ್ಟುವಲ್ಲಿ ಮತ್ತು ಘನತ್ಯಾಜ್ಯ ಮತ್ತು ಜೈವಿಕ ತ್ಯಾಜ್ಯ ವಿಲೇವಾರಿ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಕೈಗೊಂಡ ಕೆಲಸ ಕಾರ್ಯಗಳ ಆಧಾರದ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ರ್‍ಯಾಂಕಿಂಗ್‌ ನೀಡಲಿದೆ. ಇಂದೋರ್ ನಗರ ಪ್ರಸ್ತುತ ದೇಶದ ಸ್ವಚ್ಛ ನಗರವಾಗಿದ್ದು, ಹಿಂದೆ ಮೈಸೂರು ಆ ಸ್ಥಾನದಲ್ಲಿತ್ತು’ ಎಂದರು.

ADVERTISEMENT

‘ಕೇವಲ ರ್‍ಯಾಂಕಿಂಗ್‌ ಪಡೆಯಲು ಕೆಲಸ ಮಾಡುವುದು ಬೇಡ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸೇವಾ ಸಂಸ್ಥೆಗಳು, ಸಾರ್ವಜನಿಕರ ಸಹಭಾಗಿತ್ವದಿಂದ ಈ ಕಾರ್ಯ ಸಾಧ್ಯವಾಗಿದೆ. ಸ್ಥಳೀಯ ಸಂಸ್ಥೆಗಳು ಕ್ರಿಯಾಶೀಲ ಆಧಾರಿತ ಯೋಜನೆಗಳನ್ನು (ಮೈಕ್ರೋ ಯೋಜನೆ) ಹಾಕಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬಹುದು’ ಎಂದೂ ಅವರು ಹೇಳಿದರು.

ಹೊಣೆಗಾರಿಕೆ ನೀಡಿ:

‘ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗುವ ಧಾರ್ಮಿಕ ಸಂಸ್ಥೆಗಳು, ಶಾಲಾ- ಕಾಲೇಜುಗಳು, ಶಾಪಿಂಗ್ ಮಾಲ್, ಹೋಟೆಲ್, ರೆಸ್ಟೋರೆಂಟ್‌ಗಳ ಮುಖ್ಯಸ್ಥರಿಗೆ ಘನತ್ಯಾಜ್ಯ ಮತ್ತು ಜೈವಿಕ ತ್ಯಾಜ್ಯದ ವಿಲೇವಾರಿಯ ಹೊಣೆಗಾರಿಕೆ ನೀಡಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಬಿ.ಶರತ್,ಪೌರಾಡಳಿತ ನಿರ್ದೇಶನಾಲಯದ ಘನ ತ್ಯಾಜ್ಯ ನಿರ್ವಹಣೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಸೋಮೇಶ್ವರ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಮಹಾನಗರ ಪಾಲಿಕೆಯ ಪ್ರಭಾರಿ ಆಯುಕ್ತ ಹಾಹುಲ ಪಾಂಡ್ವೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸೋಮಪ್ಪ ಕಡಕೋಳ, ಬಳ್ಳಾರಿ ಡಿಯುಡಿಸಿ ಪಿಡಿ ರಮೇಶ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಮುಖ್ಯ ಎಂಜಿನಿಯರ್‌ ದಿನೇಶ ರಾವ್, ಡಿಯುಡಿಸಿ ಕಾರ್ಯನಿವಾಹಕ ಎಂಜಿನಿಯರ್ ಶಿವಣಗೌಡ ಪಾಟೀಲ ಸೇರಿದಂತೆ ಆರೂ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪೌರಾಯುಕ್ತರು, ಪರಿಸರ ಎಂಜಿನಿಯರ್‌ಗಳು, ಆರೋಗ್ಯ ನಿರೀಕ್ಷಕರು ಇದ್ದರು.

ಪೌರಾಡಳಿತ ನಿರ್ದೇಶನಾಲಯದ ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಸೋಮೇಶ್ವರ ಅವರು ಸ್ವಚ್ಛ ಸರ್ವೇಕ್ಷಣ-2020ರ ಕುರಿತು ಸವಿಸ್ತಾರವಾಗಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.