ADVERTISEMENT

ಅನೈತಿಕ ಸಂಬಂಧ; ಪತ್ನಿಯ ಪ್ರಿಯಕರನನ್ನು ಕೊಲೆ ಮಾಡಿದ ಪತಿ

ಮೂವರು ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 14:45 IST
Last Updated 18 ನವೆಂಬರ್ 2022, 14:45 IST

ಕಲಬುರಗಿ: ಜೇವರ್ಗಿ ತಾಲ್ಲೂಕಿನ ಜೈನಾಪುರ ಗ್ರಾಮದ ನಿವಾಸಿ ಶರಣಬಸಪ್ಪ ದೊಡ್ಡಮನಿ ಎಂಬಾತನನ್ನು 2019ರಲ್ಲಿ ಅನೈತಿಕ ಸಂಬಂಧದ ಕಾರಣಕ್ಕೆ ಚೂರಿಯಿಂದ ರುಂಡ, ಮುಂಡ ಬೇರ್ಪಡಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹ 30 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಮಹಾಗಾಂವ ಪೊಲೀಸ್ ಠಾಣೆ ವ್ಯಾ‍ಪ‍್ತಿಯ ಕಾಳನೂರ ಗ್ರಾಮದ ಅಮೃತ ಲಕ್ಷ್ಮಣ ಪೊಲೀಸ್ ಪಾಟೀಲ, ಆತನ ಹೆಂಡತಿ ವೆಂಕಮ್ಮ (ಸುನಿತಾ) ಹಾಗೂ ಶ್ರೀನಿವಾಸ ಸರಡಗಿ ಗ್ರಾಮದ ಬಸವರಾಜ ರೇವಣಸಿದ್ದಪ್ಪ ಕಡಬೂರ ಶಿಕ್ಷೆಗೆ ಗುರಿಯಾದ ಅಪರಾಧಿಗಳು.

ಕೊಲೆಯಾದ ಶರಣಬಸಪ್ಪ ಹಾಗೂ ತನ್ನ ಪತ್ನಿ ವೆಂಕಮ್ಮ ಮಧ್ಯೆ ಸಲುಗೆ ಇರುವುದು ಅಮೃತ ಪೊಲೀಸ್ ಪಾಟೀಲನಿಗೆ ಗೊತ್ತಾಗಿತ್ತು. ಹೀಗಾಗಿ ಪತ್ನಿಯನ್ನು ಬಳಸಿಕೊಂಡು ಶರಣಬಸಪ್ಪನ ಕೊಲೆಗೆ ಸಂಚು ರೂಪಿಸಿದ ಆತ ತನ್ನ ಬಾಳೆ ಗಿಡಕ್ಕೆ ಬರುವಂತೆ ಮಾಡು ಎಂದು ಪತ್ನಿಗೆ ಹೇಳಿದ್ದಾನೆ. ಅದರಂತೆ ವೆಂಕಮ್ಮ ಶರಣಬಸಪ್ಪನಿಗೆ ಕರೆ ಮಾಡಿ ಬಾಳೆ ತೋಟಕ್ಕೆ ಕರೆದಿದ್ದಾಳೆ. ವೆಂಕಮ್ಮ ಕರೆದಿದ್ದರಿಂದ ಅಲ್ಲಿಗೆ ಬಂದ ಶರಣಬಸಪ್ಪ ಆಕೆಯೊಂದಿಗೆ ಮಾತನಾಡುತ್ತಾ ಕುಳಿತಿದ್ದಾನೆ. ಆ ಸಂದರ್ಭದಲ್ಲಿ ಧುತ್ತೆಂದು ಪ್ರತ್ಯಕ್ಷರಾದ ಅಮೃತ ಹಾಗೂ ಬಸವರಾಜ ಕಡಬೂರ ಆತನ ಮೇಲೆ ಕುಳಿತುಕೊಂಡು ಚೂರಿಯಿಂದ ಕುತ್ತಿಗೆಯನ್ನು ಕೊಯ್ದಿದ್ದಾರೆ.

ADVERTISEMENT

ಆತ ಮೃತಪಟ್ಟಿದ್ದು ಗೊತ್ತಾದ ಬಳಿಕ ಮೂವರೂ ಒಂದು ಗೋಣಿ ಚೀಲದಲ್ಲಿ ಮುಂಡವನ್ನು ಹಾಕಿದ್ದಾರೆ. ಹೊಲದಿಂದ ಚೀಲವನ್ನು ಒಯ್ದು ಕುರಿಕೋಟಾ ಬಳಿಯ ಬೆಣ್ಣೆತೊರೆ ನೀರಿನಲ್ಲಿ ಹಾಕಿದ್ದಾರೆ. ರುಂಡ ಹಾಗೂ ಆತನ ಬಟ್ಟೆ, ಬೆಲ್ಟ್, ಚಪ್ಪಲಿಗಳನ್ನು ಕಂಟಿ ಕಮರಿಯಲ್ಲಿ ಹಾಕಿ ಸಾಕ್ಷ್ಯ ನಾಶ ಮಾಡಿದ್ದರು.

ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಮೂವರನ್ನೂ ತಪ್ಪಿತಸ್ಥರೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದರು. ಮೃತ ಶರಣಬಸಪ್ಪ ತಾಯಿಗೆ ದಂಡದ ಹಣದಲ್ಲಿ ₹ 25 ಸಾವಿರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪರವಾಗಿ 3ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.